ಬುಧವಾರ, ಸೆಪ್ಟೆಂಬರ್ 22, 2021
29 °C
ಮನ್ಸಲಾಪುರದಲ್ಲಿ ಮಾಸಾಶನ ಆದೇಶ ಪತ್ರ ವಿತರಿಸಿದ ಜಿಲ್ಲಾಧಿಕಾರಿ

ರಾಯಚೂರು ಉಪವಿಭಾಗದಲ್ಲಿ ಪಿಂಚಣಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ರಾಯಚೂರು, ಮಾನ್ವಿ, ದೇವದುರ್ಗ ಹಾಗೂ ಸಿರವಾರ ತಾಲ್ಲೂಕುಗಳನ್ನು ಒಳಗೊಂಡ ಉಪವಿಭಾಗದಲ್ಲಿ ಬುಧವಾರ ಪಿಂಚಣಿ ಅಭಿಯಾನ ಯಶಸ್ವಿಯಾಗಿ ನಡೆಯಿತು.

ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರ ಮಾರ್ಗದರ್ಶನದಲ್ಲಿ ಪ್ರತಿ ಹೋಬಳಿಗಳಲ್ಲಿಯೂ ಅಭಿಯಾನ ನಡೆಸಲಾಯಿತು. ಆಯಾ ತಾಲ್ಲೂಕು ಮತ್ತು ಹೋಬಳಿ ವ್ಯಾಪ್ತಿಯ ತಹಶೀಲ್ದಾರ್‌, ಉಪತಹಶೀಲ್ದಾರ್‌, ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಗ್ರಾಮದ ಪ್ರತಿ ಮನೆಗೂ ಭೇಟಿಕೊಟ್ಟು ಅರ್ಜಿಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ವಿಲೇವಾರಿಗೊಳಿಸಿದರು.

‘ಮನೆಮನೆಗೆ ಸೇವೆ–2021 ಪಿಂಚಣಿ ಅಭಿಯಾನ’ದಲ್ಲಿ 17 ಉಪ ತಹಶೀಲ್ದಾರ್‌ರು, ಗ್ರೇಡ್‌– 1 ಮತ್ತು 2 ತಹಶೀಲ್ದಾರ್‌ರು ಸಕ್ರಿಯವಾಗಿ ಕಾರ್ಯನಿರ್ವಹಿಸಿದರು.

‘ಅಭಿಯಾನದಲ್ಲಿ ಜನರಿಂದ ಸ್ಥಳದಲ್ಲೇ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಮಾಸಾಶನ ಬಿಡುಗಡೆಗೆ ಅಗತ್ಯವಾಗುವ ದಾಖಲೆಗಳನ್ನು ಸ್ಥಳದಲ್ಲೇ ಸ್ಕ್ಯಾನಿಂಗ್‌ ಮಾಡುವುದು, ಅಪ್‌ಲೋಡ್‌ ಮಾಡುವುದು, ಬ್ಯಾಂಕ್‌ ಖಾತೆಯನ್ನು ಲಿಂಕ್‌ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಬ್ಯಾಂಕ್‌ ಖಾತೆ ಇಲ್ಲದವರ ಅರ್ಜಿಗಳ ವಿಲೇವಾರಿ ಮಾತ್ರ ಬಾಕಿ ಉಳಿಸಿಕೊಂಡು, ಆನಂತರ ವಿಲೇವಾರಿ ಮಾಡಲಾಗುತ್ತದೆ’ ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಭಿಯಾನದ ದಿನದಂದು ಒಟ್ಟು 34 ಗ್ರಾಮಗಳ ಮನೆಗಳಿಗೆ ಭೇಟಿ ನೀಡಬೇಕು ಎಂದು ಗುರಿ ನೀಡಲಾಗಿದೆ. ಬಹುತೇಕ ಗುರಿ ಸಾಧನೆಯಾಗಿದೆ. ಪ್ರಾಯೋಗಿಕವಾಗಿ ಮಾಡುತ್ತಿರುವ ಪಿಂಚಣಿ ಅಭಿಯಾನದ ಫಲಿತಾಂಶ ಉತ್ತಮವಾಗಿದೆ. ಜುಲೈ 28 ರಂದು ನಡೆದ ಅಭಿಯಾನದಲ್ಲಿ ಒಟ್ಟು 251 ಜನರಿಂದ ಅಹವಾಲುಗಳನ್ನು ಆಲಿಸಿ, 9 ಮಾತ್ರ ಬಾಕಿ ಉಳಿಸಿಕೊಂಡು ಎಲ್ಲವನ್ನೂ ಸ್ಥಳದಲ್ಲೇ ವಿಲೇವಾರಿ ಮಾಡಲಾಗಿದೆ’ ಎಂದರು.

ಜಿಲ್ಲಾಧಿಕಾರಿ ಭಾಗಿ: ರಾಯಚೂರು ತಾಲ್ಲೂಕಿನ ಮನ್ಸಲಾಪುರ ಗ್ರಾಮದಲ್ಲಿ ನಡೆದ ಪಿಂಚಣಿ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಡಾ.ಸತೀಶ ಬಿ.ಸಿ. ಭಾಗವಹಿಸಿದ್ದರು.

ಒಟ್ಟು 19 ಫಲಾನುಭವಿಗಳಿಗೆ ಆದೇಶಪತ್ರ ವಿತರಣೆ ಮಾಡಿದ ಅವರು, ಗಾಮ್ರಸ್ಥರಿಗೆ ಕೋವಿಡ್ ಲಸಿಕೆ, ವಸತಿ ಯೋಜನೆ, ಸ್ವಚ್ಚ ಭಾರತ್ ಯೋಜನೆಯಡಿ ಶೌಚಾಲಯ ಹಾಗೂ ಉಜ್ವಲ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳವಂತೆ ಜಾಗೃತಿ ಮೂಡಿಸಿದರು.

ನಾಡ ತಹಶೀಲ್ದಾರ್ ಚಂದ್ರೇಶಖರ್, ಕಂದಾಯ ನಿರೀಕ್ಷಕ ಸೋಹಿಲ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ, ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ್ ಗ್ರಾಮದ ಮುಖಂಡ ಮೂಕಪ್ಪ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು