ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಶಿಷ್ಟರ ಬಡಾವಣೆಗಳ ಸಮಸ್ಯೆಗೆ ಸ್ಪಂದನೆ; ಶಿವಕುಮಾರ

Published 26 ಮೇ 2024, 14:27 IST
Last Updated 26 ಮೇ 2024, 14:27 IST
ಅಕ್ಷರ ಗಾತ್ರ

ರಾಯಚೂರು: ‘ಪರಿಶಿಷ್ಟರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಬಡಾವಣೆಗಳಲ್ಲಿ ಹಾಗೂ ಖಾಲಿ ಕಟ್ಟಡಗಳಲ್ಲಿ ಮಾದಕ ವಸ್ತು ಸೇವನೆ ಹೆಚ್ಚಾಗುತ್ತಿರುವ ಕುರಿತು ದೂರುಗಳು ಬಂದಿವೆ. ಇದನ್ನು ನಿಯಂತ್ರಿಸಲು ಪೊಲೀಸರ ಗಸ್ತು ನಡೆಸುತ್ತಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ತಿಳಿಸಿದರು.

ನಗರದ ಸದರ್ ಬಜಾರ್ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಕರೆದ ಎಸ್‌.ಸಿ, ಎಸ್‌.ಟಿ ಸಮುದಾಯಗಳ ಕುಂದು–ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರತಿ ಠಾಣೆಯಿಂದ ರಾತ್ರಿ ಎಂಟರಿಂದ ಒಂಬತ್ತು ಗಂಟೆಗೆ ಅವರವರ ಠಾಣಾ ವ್ಯಾಪ್ತಿಯಲ್ಲಿ ಗುಡ್ಡ ಪ್ರದೇಶ, ಖಾಲಿ ಸರ್ಕಾರಿ, ಶಾಲಾ ಕಟ್ಟಡ ಹಾಗೂ ಇನ್ನಿತರ ಪ್ರದೇಶಗಳಲ್ಲಿ ನಶೆ, ಮದ್ಯ ಸೇವನೆ ಪ್ರಕರಣದ ಕುರಿತು ತಪಾಸಣೆ ನಡೆಸಲಾಗುತ್ತದೆ. ಅಲ್ಲದೆ ಪ್ರಕರಣ ದಾಖಲಿಸಲಾಗುತ್ತದೆ. ಠಾಣೆಗಳಲ್ಲಿ ಪ್ರಕರಣ ದಾಖಲಿಸಿದವರಿಗೆ ಆರೋಪಗಳಿಂದ ಬೆದರಿಕೆ, ದಬ್ಬಾಳಿಕೆ ಮತ್ತು ಒತ್ತಡಗಳಂತಹ ಘಟನೆಗಳೇನಾದರೂ ನಡೆಯುತ್ತಿವೆಯೋ ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತದೆ’ ಎಂದು ಹೇಳಿದರು.

ದಲಿತ ಮುಖಂಡರಾದ ರವೀಂದ್ರನಾಥ ಪಟ್ಟಿ, ಎನ್.ಮಹಾವೀರ ಮಾತನಾಡಿ,‘ಪೊಲೀಸ್ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಭೆ ಕಾಟಾಚಾರಕ್ಕೆ ನಡೆಯುತ್ತಿದೆ‌. ಸಭೆಯಲ್ಲಿ ಚರ್ಚೆಯಾದ ವಿಷಯ,‌ ಸಮಸ್ಯೆ ಇತ್ಯರ್ಥಪಡಿಸಲಾಗುತ್ತಿಲ್ಲ. ಜಿಲ್ಲೆಯ ಹಲವೆಡೆ ದೌರ್ಜನ್ಯಕ್ಕೆ ಒಳಗಾದ ಪರಿಶಿಷ್ಟರು ದೂರು ನೀಡಿದರೆ ಪ್ರತಿ ದೂರು ದಾಖಲಾಗುತ್ತಿದೆ. ಎಸ್‌.ಸಿ, ಎಸ್‌.ಟಿ ದೌರ್ಜನ್ಯ ತಡೆ ಕಾಯ್ದೆಯ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪಟೇಲ್ ರಸ್ತೆ, ಗಂಜ್ ಹಾಗೂ ಸ್ಟೇಷನ್ ರಸ್ತೆಯಲ್ಲಿ ಟಿಪ್ಪರ್‌ಗಳ ಓಡಾಟ ಹೆಚ್ಚಾಗಿದೆ. ಇದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಅಲ್ಲದೇ ನಿತ್ಯ ದೂಳು, ಸಂಚಾರ ದಟ್ಟಣೆಯಾಗಿ ವಾಹನ ಸವಾರರಿಗೆ, ಪಾದಚಾರಿಗಳಿಗೆ ಕಿರಿಕಿರಿಯಾಗುತ್ತಿದೆ.‌ ಪೊಲೀಸ್ ಇಲಾಖೆಗೆ ಮಾಹಿತಿ ಇದ್ದರೂ ಜಾಣನಡೆ ಅನುಸರಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಇದಕ್ಕೆ ಹೆಚ್ಚುವರಿ ಪೊಲೀಸ್ ವತಿಷ್ಠಾಧಿಕಾರಿ ಶಿವಕುಮಾರ ಪ್ರತಿಕ್ರಿಯಿಸಿ,‘ನಗರದಲ್ಲಿ ರಿಂಗ್ ರಸ್ತೆ ನಿರ್ಮಾಣವಾದರೆ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಟಿಪ್ಪರ್ ವಾಹನಗಳಿಗೆ ನಗರದಲ್ಲಿ ಸಂಚರಿಸಲು ಸಮಯ ನಿಗದಿಪಡಿಸಲಾಗುವುದು. ಈ ಬಗ್ಗೆ ಶೀಘ್ರವೇ ಲಾರಿ ಮಾಲೀಕರ ಸಭೆ ಕರೆಯಲಾಗುವುದು’ ಎಂದು ಹೇಳಿದರು.

ಸಭೆಯಲ್ಲಿ  ಡಿವೈಎಸ್‌ಪಿ ಎಂ.ಜಿ ಸತ್ಯನಾರಾಯಣ, ಪಿಎಸ್ಐ ಉಮೇಶ ಕಾಂಬಳೆ, ಸಿಪಿಐ ನಾಗರಾಜ ಮೇಕಾ, ಪಿಎಸ್‌ಐ ಚಂದ್ರಪ್ಪ, ಸಂತೋಷ ಹೆಳ್ಕೋರು, ಅಮಿತಾ, ಶಾಂತಮೂರ್ತಿ, ಕೆ.ನರಸಿಂಹ, ಮುಖಂಡರಾದ ವಿಶ್ವನಾಥಪಟ್ಟಿ ಹಾಗೂ ಪ್ರಭುರಾಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT