ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿಗಳ ಸಕ್ರಿಯತೆಯಿಂದ ತಗ್ಗಿದ ಅಪೌಷ್ಟಿಕತೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರಬಾಬು ಹೇಳಿಕೆ
Last Updated 28 ಸೆಪ್ಟೆಂಬರ್ 2022, 13:45 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಅಪೌಷ್ಟಿಕತೆ ಪ್ರಮಾಣ ಕಡಿಮೆ ಆಗುವುದಕ್ಕೆ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಪ್ರಮುಖವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರಬಾಬು ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯಡಿ ಆಯೋಜಿಸಿದ್ದ ಪೋಷಣ್‌ ಮಾಸಾಚರಣೆ ಸಮಾರಂಭದಲ್ಲಿ ಬುಧವಾರ ಮಾತನಾಡಿದರು.

ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಒಟ್ಟಾಗಿ ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರಿಂದ ಈಗ ಅಪೌಷ್ಟಿಕತೆ ಪ್ರಮಾಣವು ಶೇ 38 ರಿಂದ ಶೇ 33ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಮನೆಗಳಲ್ಲಿಯೇ ಬಿಟ್ಟು ಕೃಷಿ ಕಾರ್ಯಕ್ಕಾಗಿ ತೆರಳುವುದು ಸಾಮಾನ್ಯವಾಗಿದೆ. ಇಂಥ ಮಕ್ಕಳಿಗೂ ಪೌಷ್ಟಿಕ ಆಹಾರ ತಲುಪಿಸುವ ಕೆಲಸವನ್ನು ಅಂಗನವಾಡಿಗಳಿಂದ ಮಾಡಬೇಕಿದೆ. ಒಟ್ಟಾರೆ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಚೇತನಕುಮಾರ್ ಎಂ.ಎನ್‌. ಮಾತನಾಡಿ, ಪೋಷಣ್‌ ಮಾಸಾಚರಣೆ ಅಂಗವಾಗಿ ಎದೆಹಾಲು ಕುರಿತು ಜಾಗೃತಿ ಸಪ್ತಾಹ ಮಾಡಲಾಗುವುದು. ಗರ್ಭಿಣಿಯರಲ್ಲಿ ರಕ್ತಹೀನತೆ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ದಯಾನಂದ ಬೇಲೂರೆ, ಜಿಲ್ಲಾ ನಿರೂಪಣಾಧಿಕಾರಿ ಶರಣಮ್ಮ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮನ್ಸೂರ್‌ ಅಹ್ಮದ್‌, ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಈರಮ್ಮ ತಲಮಾರಿ, ಅಕ್ಷರ ದಾಸೋಹ ಅಧಿಕಾರಿ ಮಂಜುಳಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT