ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮಗಳ ಬಗ್ಗೆ ನಿಖರವಾಗಿ ಮಾಹಿತಿ ಕೊಡಿ: ಎಸ್ಪಿ ಡಾ.ಸಿ.ಬಿ.ವೇದಮೂರ್ತಿ

‘ಪ್ರಜಾವಾಣಿ’ ಫೋನ್‌ ಇನ್‌ ನೇರ ಕಾರ್ಯಕ್ರಮ
Last Updated 13 ಡಿಸೆಂಬರ್ 2019, 12:25 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಮೊದಲ ಆದ್ಯತೆ. ಕಾನೂನಿನ ವಿರುದ್ಧವಾಗಿ ನಡೆಯುವ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ, ಕ್ರಮ ಕೈಗೊಳ್ಳುವುದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯವಾಗುತ್ತದೆ. ಅಕ್ರಮ ಚಟುವಟಿಕೆಗಳು, ಮೋಸ, ವಂಚನೆ ಹಾಗೂ ಜೂಜಾಟ ನಡೆಯುವ ಮಾಹಿತಿನಿಖರವಾಗಿ ತಿಳಿಸಿದರೆ, ಕೂಡಲೇ ಪೊಲೀಸರಿಂದ ದಾಳಿ ಮಾಡಿಸಲಾಗುವುದು.

ಇದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಹೇಳುವ ಸ್ಪಷ್ಟ ಮಾತುಗಳು.

‘ಪ್ರಜಾವಾಣಿ’ ರಾಯಚೂರು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಫೋನ್‌ ಇನ್‌ ನೇರ ಕಾರ್ಯಕ್ರಮಕ್ಕೆ ಭಾರಿ ಸ್ಪಂದನೆ ವ್ಯಕ್ತವಾಯಿತು. ಜಿಲ್ಲೆಯ ವಿವಿಧ ಕಡೆಗಳಿಂದ ಜನರು ಕರೆ ಮಾಡಿದ್ದರು. ಬೆಳಿಗ್ಗೆ 10 ರಿಂದ 11 ಗಂಟೆವರೆಗೂ ಕರೆ ಮಾಡುವುದಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಸರಿಯಾಗಿ 10 ಗಂಟೆಗೆ ಶುರುವಾದ ಕರೆಗಳು 11.15 ರವರೆಗೂ ರಿಂಗಣಿಸಿದವು. ಬಿಡುವಿಲ್ಲದೆ ಕರೆಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಆಲಿಸಿದರು. ತಕ್ಷಣವೇ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಾರ್ಯ ಮಾಡಿದರು.

ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ನೀಡಿದ ಕೆಲವು ಜನರು, ಹೆಸರು ಬಹಿರಂಗಗೊಳಿಸದಂತೆಯೂ ಮನವಿ ಮಾಡಿದರು. ಜನರು ಕೇಳಿದ ಪ್ರಶ್ನೆಗಳು ಮತ್ತು ಅದಕ್ಕೆ ಎಸ್‌ಪಿ ನೀಡಿದ ಉತ್ತರ ಇಲ್ಲಿವೆ.

* ಲಿಂಗಸುಗೂರಿನಲ್ಲಿ ನೌಕರಿ ಆಮಿಷ ಒಡ್ಡಿ ಜನರಿಂದ ಹಣ ಪಡೆದಿರುವ ಮೋಸ ಮಾಡಿರುವ ಬಗ್ಗೆ ಅನೇಕ ಪ್ರಕರಣಗಳು ದಾಖಲಾಗಿವೆ. ಯಾರಿಗೂ ನ್ಯಾಯ ಸಿಕ್ಕಿಲ್ಲ ಏಕೆ? ಲಿಂಗಸುಗೂರಿನಲ್ಲಿ ಸಂಚಾರ ಠಾಣೆ ಮಾಡಿಸಬೇಕು.

ಇಂಥ ಪ್ರಕರಣಗಳ ತನಿಖೆ ವಿಳಂಬವಾಗುತ್ತವೆ. ತುಂಬಾ ಜಾಣತನದಿಂದ ಮೋಸ ಮಾಡಿರುತ್ತಾರೆ. ಮೋಸ ಹೋದವರಿಗೂ ಗೊತ್ತಾಗುವುದಿಲ್ಲ ಹಾಗೂ ಯಾವುದೇ ದಾಖಲೆಗಳನ್ನು ಇಟ್ಟುಕೊಂಡಿರುವುದಿಲ್ಲ. ಹೀಗಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದಕ್ಕೆ ಸಮಯಾವಕಾಶ ಬೇಕು. ಲಿಂಗಸುಗೂರಿನಲ್ಲಿ ಸಂಚಾರ ಠಾಣೆ ಆರಂಭಿಸಲು ಪ್ರಸ್ತಾವನೆ ಕಳುಹಿಸಲಾಗಿದೆ

*ಟ್ರ್ಯಾಕ್ಟರ್‌, ಟಾಟಾ ಏಸ್‌ಗಳಲ್ಲಿ ರೈತರು ಉತ್ಪನ್ನಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ. ರೈತರ ಹಿತಕ್ಕಾಗಿ ಪೊಲೀಸರು ದಂಡ ವಸೂಲಿ ಕೈಬಿಡಬೇಕು.

ಮಾನವೀಯತೆ ದೃಷ್ಟಿಯಿಂದ ಕೆಲವು ಸಡಲಿಕೆ ಪರಿಗಣಿಸಬಹುದು. ಆದರೆ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ತಪ್ಪು. ಅವುಗಳಿಗೆ ಡಿಕ್ಕಿ ಹೊಡೆದು ಸಾಯುವ ಜನರ ಜೀವ ಯಾರಿಂದಲೂ ತರುವುದಕ್ಕೆ ಸಾಧ್ಯ? ಪೊಲೀಸರು ತಮ್ಮ ಕರ್ತವ್ಯ ಮಾಡುವುದು ಬೇಡ ಎಂದು ಹೇಳುವುದು ತಪ್ಪಾಗುತ್ತದೆ. ದಂಡ ಹಾಕದೇ ಇದ್ದರೆ, ಇಂಥ ಪ್ರಕರಣಗಳು ಹತೋಟಿಗೆ ಬರುವುದಿಲ್ಲ.

*ದೇವದುರ್ಗ ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಕೂಲಿಕಾರರು ಹಣ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು.

ಅಕ್ರಮ ಮದ್ಯ ಮಾರಾಟ, ಜೂಜಾಟ ಎಲ್ಲಿ ನಡೆಯುತ್ತಿವೆ ಎಂದು ನೇರವಾಗಿ ನನಗೆ ತಿಳಿಸಿದರೆ, ಕೂಡಲೇ ದಾಳಿ ಮಾಡುವುದಕ್ಕೆ ತಿಳಿಸಲಾಗುವುದು.

* ಶಕ್ತಿನಗರ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ವಾಹನಗಳು ತಪಾಸಣೆ ಆಗುತ್ತಿಲ್ಲ. ಸಿಸಿಟಿವಿ ಕ್ಯಾಮರಾ ಕೆಲಸ ಮಾಡುತ್ತಿಲ್ಲ. ಹಾರುಬೂದಿ ಟ್ಯಾಂಕರ್‌ ಓವರ್‌ಲೋಡ್‌ ಮಾಡಿಕೊಂಡು ಹೋಗುತ್ತಿದ್ದಾರೆ. ಭತ್ತದ ಹುಲ್ಲು ಹಾಗೂ ಹತ್ತಿ ಸಾಗಿಸುವ ವಾಹನಗಳಿಂದ ರಸ್ತೆಯಗಳಲ್ಲಿ ಬಹಳ ತೊಂದರೆ ಆಗುತ್ತಿದೆ.

ಕೂಡಲೇ ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು. ಸಿಸಿಟಿವಿ ಸರಿಪಡಿಸಲಾಗುವುದು.

* ಟವರ್‌ನಲ್ಲಿ ಬ್ಯಾಟರಿ ಕಳವಾಗಿತ್ತು. ಈ ಬಗ್ಗೆ ದೂರು ಪಡೆಯುತ್ತಿಲ್ಲ. ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹಣ ಪಡೆದು ಮೋಸ ಮಾಡಿದ್ದಾರೆ.

–ಟವರ್‌ಗಳನ್ನು ಹಾಕಿದ್ದವರು, ಅವುಗಳಿಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು. ನೌಕರಿಗಾಗಿ ಹಣ ಕೊಟ್ಟಿರುವ ಬಗ್ಗೆ ದಾಖಲೆಗಳಿದ್ದರೆ, ಕೂಡಲೇ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು.

*ಪುಟ್ಟುಸ್ವಾಮಿ, ಐಬಿ ಕಾಲೊನಿ, ರಾಯಚೂರು:ಕೆಲವು ವಾಹನಗಳಿಗೆ ನೋಂದಣಿ ಸಂಖ್ಯೆಯೆ ಬರೆದಿರುವುದಿಲ್ಲ. ಹತ್ತಿ ತುಂಬಿಕೊಂಡು ಬರುವ ವಾಹನಗಳಿಂದ ತುಂಬಾ ತೊಂದರೆ ಆಗುತ್ತಿದೆ.

– ಈ ಬಗ್ಗೆ ಕ್ರಮ ವಹಿಸುವುದಕ್ಕೆ ಪೊಲೀಸರಿಗೆ ಸೂಚಿಸಲಾಗುವುದು

* ಶ್ರೀನಿವಾಸ ಚವಾಣ, ಮಸ್ಕಿ ತಾಲ್ಲೂಕು, ತಲೇಖಾನ್‌:ಯರದೊಡ್ಡಿ ತಾಂಡಾದ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಲಾಗಿತ್ತು. ಆದರೂ ಅಂಗಡಿ ತೆಗೆಸಿಲ್ಲ.

ಯಾವ ಸಮಯದಲ್ಲಿ ದಾಳಿ ಮಾಡಬೇಕು ಎಂಬುದನ್ನು ನೇರವಾಗಿ ನನಗೆ ಮಾಹಿತಿ ಕೊಡಿ.

*ಅಮರೇಶ, ಕವಿತಾಳ:ಬಿಡಾಡಿ ದನಗಳಿಂದ, ಮಹಿಳೆಯರು, ಮಕ್ಕಳಿಗೆ ಗಾಯಗಳಾಗುತ್ತಿವೆ. ಬಹಳ ತೊಂದರೆ ಆಗುತ್ತಿದೆ

ಬಿಡಾಡಿ ದನಗಳನ್ನು ಹಿಡಿಯುವುದಕ್ಕೆ ಹೋದಾಗ, ಕೆಲವರು ಅಡ್ಡಿಪಡಿಸಿದ್ದರು. ಹೊಟ್ಟೆಪಾಡಿಗಾಗಿ ದನಗಳನ್ನು ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ. ಅವರಿಗೇ ಒಂದು ಅವಕಾಶ ನೀಡಲಾಗಿದೆ. ಮತ್ತೆ ಈ ಬಗ್ಗೆ ಕ್ರಮ ಆರಂಭಿಸಲಾಗುವುದು.

* ಚನ್ನಬಸವ ನಾಯಕ, ಹಟ್ಟಿ:ಕಳ್ಳತನ ಪ್ರಕರಣಗಳನ್ನು ಪೊಲೀಸರು ಸರಿಯಾಗಿ ತನಿಖೆ ಮಾಡುತ್ತಿಲ್ಲ. ನಿರಪರಾಧಿಗಳನ್ನು ತಂದು ಹಾಕುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಿ.

ಪೊಲೀಸ್‌ ಠಾಣೆಗೆ ಹೋಗಿ ಅಲ್ಲಿರುವ ಪಿಎಸ್‌ಐ ಕಡೆಯಿಂದ ಫೋನ್‌ ಮಾಡಿಸಿ. ಕಳ್ಳತನ ಪ್ರಕರಣಗಳ ಬಗ್ಗೆ ಮತ್ತೆ ತನಿಖೆ ಮಾಡುವುದಕ್ಕೆ ಸೂಚಿಸಲಾಗುವುದು

*ಜಾಲಹಳ್ಳಿಯಲ್ಲಿ ಅಕ್ರಮ ಜೂಜಾಟ, ಮಟ್ಕಾ ನಡೆಯುತ್ತಿದೆ. ಇದನ್ನು ವಿಶೇಷವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು

–ಅಕ್ರಮದ ಬಗ್ಗೆ ಜನರಲ್‌ ಮಾತನಾಡುವುದನ್ನು ಬಿಟ್ಟು, ಎಲ್ಲಿ ನಡೆಯುತ್ತಿದೆ ಎಂದು ಸಂದೇಶ ಕೊಡಿ. ಅಥವಾ ಕರೆ ಮಾಡಿ ತಿಳಿಸಿ.

*ದೇವುಸೂಗೂರು ದೇವಸ್ಥಾನದ ಕಾಲೇಜು ಇದೆ. ಖಾಸಗಿ ಕಾಲೇಜು ಇದೆ. ಸಾಕಷ್ಟು ವಿದ್ಯಾರ್ಥಿನಿಯರಿದ್ದಾರೆ. ಮಧ್ಯಾಹ್ನದಿಂದ ರಾತ್ರಿವರೆಗೂ ಕೆಲವರು ಬಸ್‌ ನಿಲ್ದಾಣ ಬಳಿ ಯುವಕರು ಕುಳಿತು ಚುಡಾಯಿಸುತ್ತಿದ್ದಾರೆ.

ಮಹಿಳೆಯರ ಸುರಕ್ಷತೆಗಾಗಿ ಈಚೆಗೆ ಓಬವ್ವ ವಿಶೇಷ ಪಡೆ ಆರಂಭಿಸಲಾಗಿದೆ. ಯುವತಿಯರನ್ನು ಚುಡಾಯಿಸುವುದು ಕಂಡು ಬಂದರೆ, ಕೂಡಲೇ 9480803800 ಸಂಖ್ಯೆಗೆ ಕರೆ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT