ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ತಿ ಸಾಲ ವಸೂಲಾತಿಯಲ್ಲಿ ಮಾನ್ವಿ ಪಿಕಾರ್ಡ್ ಬ್ಯಾಂಕ್ ಸಾಧನೆ

ಪ್ರಾಥಮಿಕ ಸಹಕಾರ ಕೃಷಿ, ಗ್ರಾಮೀಣಾಭಿವೃದ್ಧಿ ಬ್ಯಾಂಕ್
Last Updated 9 ಜುಲೈ 2020, 19:30 IST
ಅಕ್ಷರ ಗಾತ್ರ

ಮಾನ್ವಿ: ರೈತರ ಸುಸ್ತಿ ಸಾಲದ ಮೇಲಿನ ಬಡ್ಡಿ ಮನ್ನಾ ಯೋಜನೆಯ ಅಡಿಯಲ್ಲಿ ಸ್ಥಳೀಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಪಿಕಾರ್ಡ್ ಬ್ಯಾಂಕ್ ) ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಗಣನೀಯ ಸಾಧನೆ ಮಾಡಿದೆ.

ಬ್ಯಾಂಕಿನಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಪಡೆದಿದ್ದ ರೈತರಿಂದ ಶೇ 50ರಷ್ಟು ಸುಸ್ತಿ ಸಾಲ ವಸೂಲು ಮಾಡುವ ಮೂಲಕ ಜಿಲ್ಲೆಯ ಪಿಕಾರ್ಡ್ ಬ್ಯಾಂಕ್‍ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.

ರಾಜ್ಯ ಸರ್ಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್‍ಗಳು ಹಾಗೂ ಪಿಕಾರ್ಡ್ ಬ್ಯಾಂಕ್‍ಗಳಲ್ಲಿ ರೈತರ ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಕಳೆದ ಫೆಬ್ರವರಿಯಲ್ಲಿ ಆದೇಶ ಹೊರಡಿಸಿತ್ತು.

31 ಜನವರಿ 2020ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿಯ ಕೃಷಿ ಹಾಗೂ ಕೃಷಿ ಸಂಬಂಧಿತ ಸಂಪೂರ್ಣ ಸಾಲವನ್ನು ರೈತರು ಮರುಪಾವತಿ ಮಾಡಿದರೆ ಒಟ್ಟು ಬಡ್ಡಿ ಹಣವನ್ನು ಮನ್ನಾ ಮಾಡುವುದಾಗಿ ಆದೇಶದಲ್ಲಿ ತಿಳಿಸಲಾಗಿತ್ತು.

ಸಾಲ ಮರುಪಾವತಿಗೆ ಮಾರ್ಚ್31 ರವರೆಗೆ ಅಂತಿಮ ಗಡುವು ನೀಡಲಾಗಿತ್ತು. ಕೋವಿಡ್ ರೋಗ ಉಲ್ಬಣಿಸುತ್ತಿದ್ದಂತೆ ಲಾಕ್ ಡೌನ್ ಜಾರಿಯಾದ ಕಾರಣ ಸಾಲ ವಸೂಲಾತಿಗೆ ಅಡ್ಡಿಯಾಗಿತ್ತು. ಕಾರಣ ಸರ್ಕಾರ ಜೂನ್ 30ರವರೆಗೆ ಸಾಲ ಮರುಪಾವತಿಯ ದಿನಾಂಕವನ್ನು ವಿಸ್ತರಿಸಿತ್ತು.

ಮಾನ್ವಿ ಪಿಕಾರ್ಡ್ ಬ್ಯಾಂಕಿನಿಂದ ನೀಡಲಾದ ಒಟ್ಟು ₹ 2.60 ಕೋಟಿ ಸಾಲ ವಸೂಲಾತಿಗೆ ಗುರಿ ಹೊಂದಲಾಗಿತ್ತು. ಒಟ್ಟು 350 ಸುಸ್ತಿದಾರರ ಪೈಕಿ 110 ಜನ ರೈತರು ತಮ್ಮ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಿದ್ದು ಒಟ್ಟು ₹ 1.25ಕೋಟಿ ಸಂಗ್ರಹವಾಗಿದೆ.

ಸಾಲ ವಸೂಲಾತಿಯ ಸಾಧನೆ ಬ್ಯಾಂಕಿನ ಆರ್ಥಿಕ ಪ್ರಗತಿಗೆ ಸಹಕಾರಿಯಾಗಿದೆ. ಸಿಬ್ಬಂದಿಯ ವೇತನಕ್ಕೂ ಪರದಾಡುವಂತಹ ಸಂಕಷ್ಟದಲ್ಲಿದ್ದ ಪಿಕಾರ್ಡ್ ಬ್ಯಾಂಕ್ ಆರ್ಥಿಕವಾಗಿ ಚೇತರಿಕೆ ಕಂಡಿದೆ. ಹೊಸದಾಗಿ ಸಾಲ ನೀಡಲು ರಾಜ್ಯ ಸಹಕಾರಿ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕಿನಿಂದ ₹ 5ಕೋಟಿ ಆರ್ಥಿಕ ಹಂಚಿಕೆಯಾಗುವ ನಿರೀಕ್ಷೆಯನ್ನು ಬ್ಯಾಂಕಿನ ಆಡಳಿತ ಮಂಡಳಿ ಹೊಂದಿದೆ. ‌‌

‘ಹೆಚ್ಚಿನ ಪ್ರಮಾಣದ ಅನುದಾನ ಹಂಚಿಕೆಯಾದರೆ ಅಧಿಕ ಸಂಖ್ಯೆಯ ರೈತರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ನೀಡಿ ನೆರವಾಗಲು ಸಾಧ್ಯ’ ಎಂದು ಬ್ಯಾಂಕಿನ ವ್ಯವಸ್ಥಾಪಕ ರಾಜಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT