ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಸಂಚಾರದಲ್ಲಿ ಅಪಾಯ ಆಹ್ವಾನಿಸುತ್ತಿರುವ ಸೇತುವೆ

ಹಲವು ವರ್ಷಗಳು ಉರುಳಿದರೂ ಪರಿಹಾರ ಕಾಣದ ಸಮಸ್ಯೆ
Last Updated 12 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ರಾಯಚೂರು: ನಗರದ ವಿದ್ಯಾಭಾರತಿ ಶಾಲೆ ಪಕ್ಕದ ರೈಲ್ವೆ ಕೆಳಸೇತುವೆ ನಿರ್ಮಾಣದಿಂದ ವಾಹನಗಳು ಮತ್ತು ಜನಸಂಚಾರಕ್ಕೆ ಅನುಕೂಲವಾಗಿದೆ. ಆದರೆ, ಸೇತುವೆ ನಿರ್ವಹಣೆ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆ ಸರಿಪಡಿಸದೆ ಇರುವುದರಿಂದ ಈಗ ಅಪಾಯ ಆಹ್ವಾನಿಸುತ್ತಿರುವ ಸೇತುವೆಯಾಗಿ ಮಾರ್ಪಟ್ಟಿದೆ.

ಪಾದಚಾರಿಗಳು ಸೇತುವೆ ದಾಟಿಕೊಂಡು ಹೋಗಲು ಹರಸಾಹಸ ಪಡುತ್ತಿದ್ದಾರೆ. ಶಾಲೆಗೆ ನಡೆದುಕೊಂಡು ಬರುವ ವಿದ್ಯಾರ್ಥಿಗಳು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದು, ಧರಿಸಿದ ಬಟ್ಟೆಗಳು ಕೊಳೆಯಾಗುತ್ತವೆ ಎನ್ನುವ ಆತಂಕದಲ್ಲಿಯೇ ನಡೆದುಕೊಂಡು ಹೋಗಬೇಕಿದೆ. ಸೇತುವೆ ಕೆಳಗೆ ಸದಾ ಕೊಳಚೆ ನೀರು ಸಂಗ್ರಹವಾಗುತ್ತಿದೆ. ರಸ್ತೆ ಕೂಡಾ ಅಲ್ಲಲ್ಲಿ ಕಿತ್ತು ಹೋಗಿದೆ. ವಾಹನ ಚಕ್ರಗಳು ಹರಿದಾಗ ಕೊಳಚೆ ನೀರು ಸುತ್ತಮುತ್ತಲೂ ಸಿಡಿದುಕೊಳ್ಳುತ್ತಿದೆ. ಯಾವುದೇ ವಾಹನಗಳು ಬರುತ್ತಿಲ್ಲ ಎಂಬುದನ್ನು ಖಾತರಿ ಮಾಡಿಕೊಂಡೇ ಸೇತುವೆ ದಾಟಿಕೊಳ್ಳುವ ಅನಿವಾರ್ಯತೆ ಇದೆ.

ಮಳೆಗಾಲದಲ್ಲಿ ಸೇತುವೆಯಲ್ಲಿ ಒಂದು ಅಡಿಯಷ್ಟು ನೀರು ತುಂಬಿಕೊಂಡಿರುತ್ತದೆ. ಕೆಲವೊಮ್ಮೆ ವಾಹನಗಳು ಸಂಚರಿಸುವುದಕ್ಕೆ ಅಸಾಧ್ಯ ಎನ್ನುವ ಸ್ಥಿತಿಯೂ ನಿರ್ಮಾಣವಾಗುತ್ತದೆ. ಬೈಕ್‌ ಸವಾರರು ಕಾಲು ಮೇಲೆತ್ತಿಕೊಂಡು ಸಂಚರಿಸುತ್ತಾರೆ. ಆದರೆ ಹಿಂಬದಿ ಸವಾರರಿಗೆ ನೀರು ಸಿಡಿದುಕೊಳ್ಳುವುದನ್ನು ತಪ್ಪಿಸಲಾಗುವುದಿಲ್ಲ. ಬೈಕ್‌ ಹಿಂಬದಿ ಮಹಿಳೆಯರನ್ನು ಕರೆದುಕೊಂಡು ಬರುವವರು ಈ ಮಾರ್ಗವನ್ನೇ ಬದಲಿಸಿಕೊಂಡು ಜಿಲ್ಲಾಧಿಕಾರಿ ಬಂಗ್ಲೆ ಮೂಲಕ ಸುತ್ತುವರಿಗೂ ರಾಯಚೂರು ನಗರದೊಳಗೆ ಸಂಚರಿಸುತ್ತಾರೆ. ಬೈಕ್‌ ಸವಾರರು ಸ್ವಲ್ಪ ಯಾಮಾರಿದರೂ ಕೊಳಚೆ ನೀರಿನಲ್ಲಿ ಮುಗ್ಗರಿಸುಸುತ್ತಾರೆ.

ಭಾರಿ ವಾಹನಗಳು ಸಂಚರಿಸುವುದಕ್ಕೆ ಈ ಮಾರ್ಗದಲ್ಲಿ ಅವಕಾಶವಿಲ್ಲ. ಆದರೆ ಲಘು ವಾಹನಗಳಾದ ಕಾರು, ಆಟೋ ಹಾಗೂ ಜೀಪ್‌ಗಳು ಸಂಚರಿಸುವಾಗ ಇತರೆ ವಾಹನಗಳು ನಿಲುಗಡೆ ಮಾಡಿಕೊಳ್ಳಲೇ ಬೇಕು. ಇಲ್ಲದಿದ್ದರೆ ಕೊಳಚೆ ಸಿಡಿದುಕೊಳ್ಳುತ್ತದೆ. ಈ ಮಾರ್ಗದಲ್ಲಿ ಸಂಚರಿಸುವವರಿಗೆ ಕೊಳಚೆ ಸ್ಪರ್ಶದಿಂದ ತಪ್ಪಿಸಿಕೊಳ್ಳುವುದು ವಿರಳ.

ಸೇತುವೆ ಕೆಳಭಾಗ ರಸ್ತೆಗೆ ಅಡ್ಡಲಾಗಿ ಅಳವಡಿಸಿರುವ ಕಬ್ಬಿಣದ ಗ್ರಿಲ್‌ಗಳು ಕಿತ್ತುಕೊಂಡು ಹೋಗಿವೆ. ಕೆಲವೊಂದು ಆಕಾರ ಕಳೆದುಕೊಂಡು ವಾಹನಗಳು ಸಂಚರಿಸುವುದಕ್ಕೆ ಸಂಚಕಾರವಾಗಿವೆ. ಈ ಬಗ್ಗೆ ನಗರಸಭೆ ಗಮನ ಸೆಳೆಯುವುದಕ್ಕಾಗಿ ಹಲವು ಸಂಘ–ಸಂಸ್ಥೆಗಳು ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸುತ್ತಾ ಬರುತ್ತಿವೆ. ಆದರೆ, ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ರಾಂಪೂರ, ಹೊಸೂರ ಸೇರಿದಂತೆ ಹಲವು ಬಡಾವಣೆಗಳಿಗೆ ಸಂಪರ್ಕಿಸುವ ಈ ಸೇತುವೆಯಿಂದ ಆರಂಭದಲ್ಲಿ ಅನುಕೂಲ ಆಗಿದ್ದಷ್ಟೇ ಈಗ ಸಮಸ್ಯಾತ್ಮಕವಾಗುತ್ತಿದೆ.

ಹಾಳಾದ ಕೆಳಸೇತುವೆ ರಸ್ತೆ

ಶಕ್ತಿನಗರ: ಸಮೀಪದ ಕಾಡ್ಲೂರು ಮಾರ್ಗದ ರೈಲ್ವೆ ಕೆಳ ಸೇತುವೆ ರಸ್ತೆ ಸಂಪೂರ್ಣ ಹಾಳಾಗಿದ್ದು, ತೆಗ್ಗು ದಿನ್ನೆಗಳಿಂದ ಕೂಡಿದೆ. ಮಳೆ ಸುರಿದಾ ಸಂಪೂರ್ಣವಾಗಿ ಜಲಾವೃತವಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತದೆ. ಈ ಮಾರ್ಗದಲ್ಲಿ ಕಾಡ್ಲೂರು, ಗುರ್ಜಾಪುರ, ಅರಷಣಿಗಿ ಗ್ರಾಮಗಳಿಗೆ ತೆರಳುವ ಜನರು ಸಂಚರಿಸುತ್ತಿರುವುದರಿಂದ ಹಲವಾರು ಬಾರಿ ಕೆಳಗೆ ಬಿದ್ದು ಅಪಘಾತಗಳು ಸಂಭವಿಸಿವೆ.

‘ಶಾಲಾ ವಿದ್ಯಾರ್ಥಿಗಳು, ವಿವಿಧ ಕಾರ್ಖಾನೆಗಳು ತೆರಳುವ ಕಾರ್ಮಿಕರು, ರೈತರು ಮತ್ತು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಕಾಡ್ಲೂರು ಮಾರ್ಗದ ರೈಲ್ವೆ ಕೆಳಸೇತುವೆ ರಸ್ತೆಯನ್ನು ದುರಸ್ತಿಗೊಳಿಸಬೇಕು’ ಎಂದು ಗುರ್ಜಾಪುರ ನಿವಾಸಿ ವಿಶ್ವನಾಥರೆಡ್ಡಿ ಒತ್ತಾಯಿಸಿದರು.


ಜೀವ ಕಳೆಯುತ್ತಿದೆ ಅವೈಜ್ಞಾನಿಕ ಸೇತುವೆ

ಮಾನ್ವಿ: ಪಟ್ಟಣದ ಹೊರವಲಯದಲ್ಲಿ ರಾಯಚೂರು ರಸ್ತೆಯಲ್ಲಿರುವ ಹಿರೇಹಳ್ಳದ ಸೇತುವೆ, ನಸಲಾಪುರ ಗ್ರಾಮದ ಸಮೀಪ ಇರುವ ಹಳ್ಳದ ಸೇತುವೆ ವಾಹನ ಸವಾರರಿಗೆ ಜೀವ ಕಳೆಯುವ ಸೇತುವೆಗಳಾಗಿ ಮಾರ್ಪಟ್ಟಿವೆ.

ರಾಯಚೂರು -ಸಿಂಧನೂರು ರಾಜ್ಯ ಹೆದ್ದಾರಿಗೆ ಅಡ್ಡಲಾಗಿರುವ ಈ ಸೇತುವೆಗಳ ಸಮೀಪ ಸವಾರರು ಬಹಳ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಇದೆ. 2004ರಲ್ಲಿ ರಾಜ್ಯ ಸರ್ಕಾರ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ರಸ್ತೆ ಅಭಿವೃದ್ಧಿಪಡಿಸಿದ್ದ ಸಂದರ್ಭದಲ್ಲಿ ಈ ಸೇತುವೆಗಳನ್ನು ನಿರ್ಮಿಸಲಾಗಿತ್ತು. ಈ ಸೇತುವೆಗಳ ನಿರ್ಮಾಣ ಸಂದರ್ಭದಲ್ಲಿ ತಾಂತ್ರಿಕವಾಗಿ ಅವೈಜ್ಞಾನಿಕ ನಿಯಮಗಳನ್ನು ಅನುಸರಿಸಿದ ಕಾರಣ ಮೇಲಿಂದ ಮೇಲೆ ಅಪಘಾತ ಪ್ರಕರಣಗಳು ಸಂಭವಿಸುತ್ತಿವೆ.

ನಸಲಾಪುರ ಗ್ರಾಮದ ಸಮೀಪ ಇರುವ ಸೇತುವೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಸೇತುವೆ ಸಂಪೂರ್ಣ ಬಾಗಿದ್ದು ವಕ್ರವಾಗಿದೆ. ಹಳೆಯ ಸೇತುವೆ ಇದ್ದಾಗಿನಿಂದಲೂ ವಕ್ರವಾಗಿರುವ ಈ ಸೇತುವೆಯನ್ನು ಸ್ಥಳೀಯರು ‘ಸೊಟ್ಟ ಮೋರಿ’ ಎಂದು ಕರೆಯುತ್ತಾರೆ. ಈ ಸೇತುವೆ ಹತ್ತಿರ ವೇಗವಾಗಿ ಬರುವ ವಾಹನಗಳು ದಿಢೀರನೆ ನಿಯಂತ್ರಣ ತಪ್ಪಿ ಅಪಘಾತಕ್ಕೊಳಗಾಗುತ್ತಿವೆ.

ಈ ಸೇತುವೆಗಳ ಸಮೀಪದ ರಸ್ತೆ ಬದಿ ಸ್ಥಳದಲ್ಲಿ ಮುಂದೆ ಸೇತುವೆ ಇರುವ ಕುರಿತು ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ವರ್ಷದುದಕ್ಕೂ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸುರಕ್ಷಿತ ಸಂಚಾರಕ್ಕೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಇಕ್ಕಟ್ಟಾದ ಸೇತುವೆಯಿಂದ ತೊಂದರೆ ‌

ಸಿಂಧನೂರು: ನಗರದಿಂದ ರಾಯಚೂರು ಮಾರ್ಗದ ಹಿರೇಹಳ್ಳದ ಸೇತುವೆ ಇಕ್ಕಟ್ಟಾಗಿದ್ದು, ಜನರು ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಭಾರಿ ವಾಹನಗಳು ಎದರುರಾಗೊಮ್ಮೆ ದಟ್ಟಣೆ ಆರಂಭವಾಗುತ್ತದೆ. ಪುನ: ಸಂಚಾರ ಸುಗಮಗೊಳಿಸಲು ತಾಸುಗಟ್ಟಲೇ ಪೊಲೀಸರು ಹರಸಾಹಸ ಮಾಡಬೇಕಾಗುತ್ತದೆ. ಕಳೆದ ಐದು ವರ್ಷದಿಂದ ಈ ಸೇತುವೆಯನ್ನು ಅಗಲೀಕರಣ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂದಾಜು ಪತ್ರಿಕೆ ತಯಾರಿಸಿ ಶಂಕು ಸ್ಥಾಪನೆಯನ್ನು ನೆರವೇರಿಸಲಾಗಿದೆ.

ಬಾದರ್ಲಿ ಹಂಪನಗೌಡ ಅವರು ಶಾಸಕರಾಗಿದ್ದಾಗ ಹಾಗೂ ಹಾಲಿ ಶಾಸಕ ವೆಂಕಟರಾವ್ ನಾಡಗೌಡ ಶಂಕುಸ್ಥಾಪನೆಗಳಾಗಿವೆ. ಕಾಮಗಾರಿ ಪ್ರಾರಂಭವಾಗದಿರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಸೇತುವೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕೆಲಸ ಪ್ರಾರಂಭಿಸಬೇಕು. ಇಲ್ಲದಿದ್ದರೆ ಪ್ರತಿನಿತ್ಯ ವಾಹನ ಸವಾರರು ಟ್ರಾಫಿಕ್ ತೊಂದರೆ ಅನುಭವಿಸಬೇಕಾಗುತ್ತದೆ’ ಎಂಬುದು ಕಿರಾಣಿ ವ್ಯಾಪಾರಿ ಶಿವಕುಮಾರ ತೊಂತನಾಳ ಅವರ ಮನವಿ.

ಮಳೆಯಿಂದ ಹಾಳಾದ ಸೇತುವೆ

ದೇವದುರ್ಗ: ಗಬ್ಬೂರು ಸಮೀಪದ ಕೊಳೂರು ಗ್ರಾಮದಲ್ಲಿನ ಹಳ್ಳದ ಸೇತುವೆ ನಿರ್ಮಾಣಗೊಂಡು ಸುಮಾರು ಹದಿನಾಲ್ಕು ವರ್ಷ ಕಳೆದಿದೆ. ಎಡ ಮತ್ತು ಬಲ ಇರುವ ತಡೆಗೋಡೆಗಳು 2019 ಮತ್ತು 2020 ರಲ್ಲಿ ಬಂದ ಭಾರಿ ಮಳೆ ಜಲಪ್ರವಾಹಕ್ಕೆ ಸೇತುವೆ ತಡೆಗೋಡೆಗಳು ಕೊಚ್ಚಿಹೋಗಿವೆ.

ರಸ್ತೆ ಕೂಡಾ ಕೊಚ್ಚಿಹೋಗಿದೆ. ಸೇತುವೆಯ ಮೇಲೆ ಸದ್ಯ ವಾಹನಗಳು ಸಂಚರಿಸುತ್ತಿಲ್ಲ. ಕೇವಲ ಕಾಲ್ನಡಿಗೆ ಮೂಲಕ ಜನಗಳು ಓಡಾಡುತ್ತಿದ್ದಾರೆ. ಪಕ್ಕದ ಗ್ರಾಮವಾದ ಹೇಮನಾಳ ಗ್ರಾಮದಿಂದ ಕೋಳೂರಿಗೆ ಕೇವಲ ಅರ್ಧ ಕಿಲೋಮೀಟರ್ ಸಂಪರ್ಕ ಆದರೆ ಹಳ್ಳದ ಸೇತುವೆಯ ಶಿಥಿಲಗೊಂಡು ಪ್ರಯಾಣಿಕರಿಗೆ ಅಪಾಯ ತಂದೊಡ್ಡಿದೆ. ಹೊಲಗಳಿಗೆ ತೆರಳುವ ರೈತರಿಗೆ, ಗ್ರಾಮಸ್ಥರಿಗೆ, ಕೆಲಸ ಕಾರ್ಯಗಳಿಗೆ ಒಂದು ಹೋಬಳಿ ಕೇಂದ್ರಕ್ಕೆ ಹೋಗಲು 10 ರಿಂದ 15 ಕಿಲೋಮೀಟರ್ ಸುತ್ತುವರಿದು ಹೋಗಬೇಕಾದ ಪರಿಸ್ಥಿತಿನಿವಾರ್ಯತೆ ನಿರ್ಮಾಣವಾಗಿದೆ.

ಪೂರಕ ವರದಿಗಳು: ಡಿ.ಎಚ್‌.ಕಂಬಳಿ, ಬಸವರಾಜ ಭೋಗಾವತಿ, ಯಮುನೇಶ ಗೌಡಗೇರಾ, ಉಮಾಪತಿ ರಾಮೋಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT