ಮಂಗಳವಾರ, ಸೆಪ್ಟೆಂಬರ್ 29, 2020
22 °C
ಮಿನಿವಿಧಾನಸೌಧ ಮುಂದೆ ಕೆಆರ್‌ಎಸ್ ಪ್ರತಿಭಟನೆ

ಸಿಂಧನೂರು: ಜನವಿರೋಧಿ ತಿದ್ದುಪಡಿ ಕಾಯ್ದೆಗಳ ರದ್ದತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಸಂಸತ್ ಮತ್ತು ವಿಧಾನಮಂಡಲಗಳನ್ನು ಕತ್ತಲಲ್ಲಿಟ್ಟು, ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ಜನ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ (ಎಐಕೆಕೆಎಸ್) ಜಿಲ್ಲಾ ಘಟಕದಿಂದ ಭಾನುವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಲಾಯಿತು.

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ರೈತ, ಕಾರ್ಮಿಕರಿಗೆ ಅಪಾಯ ತಂದೊಡ್ಡುವ ನೀತಿಗಳನ್ನು ಜಾರಿಗೊಳಿಸುತ್ತಿದೆ. ಸ್ವದೇಶಿ ಮಂತ್ರ ಹೇಳುತ್ತಾ ವಿದೇಶಿ ಕಂಪನಿಗಳಿಗೆ ದೇಶವನ್ನು ಒತ್ತೆಹಾಕಲಾಗಿದೆ. 70 ವರ್ಷಗಳಿಂದ ದೇಶವನ್ನು ಆಳಿದ ಕಾಂಗ್ರೆಸ್‍ನವರು ದೇಶದ ಸಂಪತ್ತನ್ನು ಮಾರಾಟ ಮಾಡಿದ್ದಲ್ಲದೇ ₹ 50 ಲಕ್ಷ ಕೋಟಿ ಸಾಲ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ ಕೇವಲ 6 ವರ್ಷಗಳಲ್ಲಿ ದೇಶದ ಸಂಪತ್ತನ್ನು ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡಿ ಕಾಂಗ್ರೆಸ್‍ನವರನ್ನು ಮೀರಿಸಲಾಗಿದೆ. ಇದಲ್ಲದೆ ದೇಶದ ಸಾಲ ₹ 86 ಲಕ್ಷ ಕೋಟಿ ಹೆಚ್ಚಾಗಿದೆ ಎಂದು ಕರ್ನಾಟಕ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್.ಪೂಜಾರ ಆಪಾದಿಸಿದರು.

ಕಾರ್ಪೋರೇಟ್ ಕಂಪನಿ ಪರವಾದ ಸುಗ್ರೀವಾಜ್ಞೆ ಸರಣಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಕೃಷಿ ಕಾಂಟ್ರ್ಯಾಕ್ಟ್ ಫಾರ್ಮಿಂಗ್ ತಿದ್ದುಪಡಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಅಂತರರಾಜ್ಯ ತಿದ್ದುಪಡಿ ಕಾಯ್ದೆ, ಹೊಸ ವಿದ್ಯುತ್ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡಿಯಬೇಕು. ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ಕೈಬಿಡಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಖಾತ್ರಿ ಪಡಿಸುವ ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಉದ್ಯೋಖಾತ್ರಿಯ ಕೆಲಸವನ್ನು 200 ದಿನಗಳಿಗೆ ಹೆಚ್ಚಿಸಿ, ದಿನದ ಕೂಲಿ ₹ 800 ನಿಗದಿಪಡಿಸಬೇಕೆಂದು ಒತ್ತಾಯಿಸಿದರು.

ಗ್ರಾಮ ಲೆಕ್ಕಿಗ ಯೂನೂಸ್ ಮನವಿ ಪತ್ರ ಸ್ವೀಕರಿಸಿದರು. ಕೆಆರ್‌ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ ಬೇರಿಗಿ, ಮುಖಂಡರಾದ ಬಿ.ಎನ್.ಯರದಿಹಾಳ, ದ್ಯಾಮಣ್ಣ ನಾಯಕ, ಬಿಟ್ಟಿಬಾಬು, ಅಮೀನಸಾಬ ನದಾಫ, ಎನ್.ಗೋಪಾಲರಾವ್, ಎಂ.ಗಂಗರಾಜ, ಶಿವು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು