ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ವಿರುದ್ಧ ಭುಗಿಲೆದ್ದ ಜನಾಕ್ರೋಶ

ರಾಯಚೂರು ಬಂದ್‌ಗೆ ನೀರಸ ಪ್ರತಿಕ್ರಿಯೆ
Last Updated 6 ಜೂನ್ 2022, 14:07 IST
ಅಕ್ಷರ ಗಾತ್ರ

ರಾಯಚೂರು: ನಗರಸಭೆ ಆಡಳಿತದ ವೈಫಲ್ಯವನ್ನು ವಿರೋಧಿಸಿ ರಾಯಚೂರು ನಾಗರಿಕರ ವೇದಿಕೆಯಿಂದ ಕರೆ ನೀಡಿದ್ದ ’ರಾಯಚೂರು ಬಂದ್‌‘ಗೆ ಸೋಮವಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ನಗರಸಭೆ ಎದುರು ನಡೆದ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಅನೇಕ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಮತ್ತು ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿ, ಆಕ್ರೋಶ ಹೊರಹಾಕಿದರು.

ಬಂದ್‌ಗೆ ಕರೆ ನೀಡಿದ್ದರೂ ನಗರದಲ್ಲಿ ಜನಜೀವನ, ವಾಹನಗಳ ಸಂಚಾರ ಮತ್ತು ವ್ಯಾಪಾರ ಎಂದಿನಂತೆ ನಡೆಯಿತು. ಪ್ರತಿಭಟನಾಕಾರರು ಬೈಕ್‌ ರ‍್ಯಾಲಿ ಮೂಲಕ ನಗರದ ವಿವಿಧ ಬೀದಿಗಳಲ್ಲಿ ಸಂಚರಿಸಿ ಅಂಗಡಿಗಳನ್ನು ಬಂದ್‌ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ನಗರಸಭೆ ಎದುರು ಧರಣಿ ನಡೆಸುವುದಕ್ಕೆ ವೇದಿಕೆ ನಿರ್ಮಾಣ ಮಾಡಲಾಗಿತ್ತು.. ಮುನ್ನಚ್ಚರಿಕೆ ವಹಿಸಿದ ಪೊಲೀಸರು ನಗರಸಭೆ ಎದುರು ಸಾರ್ವಜನಿಕರ ವಾಹನಗಳ ಸಂಚಾರವನ್ನು ಮಧ್ಯಾಹ್ನದವರೆಗೂ ಸ್ಥಗಿತಗೊಳಿಸಿದ್ದರು.

ರಾಯಚೂರು ನಾಗರಿಕರ ವೇದಿಕೆ ಕರೆಯನ್ನು ಬೆಂಬಲಿಸಿ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಜಿಲ್ಲಾ ಜೆಡಿಎಸ್‌ ಮುಖಂಡರು ಹಾಗೂ ಹಲವು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ, ನಗರಸಭೆ ಆಡಳಿತ ಹಾಗೂ ರಾಯಚೂರು ಶಾಸಕರ ಮಾತನಾಡಿದರು.

ಕಲುಷಿತ ನೀರು ಸೇವಿಸಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ಘೋಷಿಸಬೇಕು. ಸಾವಿಗೆ ಕಾರಣರಾದ ಎಲ್ಲ ಅಧಿಕಾರಿಗಳ ವಿರುದ್ಧವೂ ಕ್ರಮವಾಗಬೇಕು. ನಗರಕ್ಕೆ ನೀರು ಪೂರೈಕೆಯಾಗುವ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಬೇಕು. ರಾಂಪೂರ ಕೆರೆ ಮತ್ತು ಶುದ್ಧೀಕರಣ ಘಟಕಗಳನ್ನು ಸ್ವಚ್ಛಗೊಳಿಸಬೇಕು. ಯಂತ್ರಗಳನ್ನು ದುರಸ್ತಿಗೊಳಿಸಬೇಕು. ಜನರಿಗೆ ಶುದ್ಧ ನೀರು ಪೂರೈಸುವುದಕ್ಕೆ ಸೂಕ್ತ ವ್ಯವಸ್ಥೆ ಮಾಡುವವರೆಗೂ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಕಲುಷಿತ ನೀರು ಸೇವಿಸಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಮತ್ತು ಇನ್ನೂ ಚಿಕಿತ್ಸೆ ಪಡೆಯುತ್ತಿರುವವರ ಚಿಕಿತ್ಸಾ ವೆಚ್ಚ ಭರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಜಿಲ್ಲೆಗೆ ಭೇಟಿನೀಡಿ, ಸಮಸ್ಯೆಗೆ ಪರಿಹಾರ ಒದಗಿಸಬೇಕು. ನಗರಸಭೆ ಆಡಳಿತವನ್ನು ಸುಧಾರಿಸಬೇಕು. ಕಲುಷಿತ ನೀರು ಸರಬರಾಜು ಇಂದಿಗೂ ನಿಂತಿಲ್ಲ. ವ್ಯವಸ್ಥೆ ಸುಧಾರಣೆಗೆ ಮುಂದಾಗಬೇಕು. ಇಲ್ಲದಿದ್ದರೆ ನಗರದಲ್ಲಿ ಜನರು ಆಕ್ರೋಶದಿಂದ ಹೋರಾಟಕ್ಕೆ ಇಳಿಯಲಿದ್ದಾರೆ. ಇದಕ್ಕೆ ಆಡಳಿತ ಪಕ್ಷದವರು ದಾರಿ ಮಾಡಬಾರದು. ಆದಷ್ಟು ಬೇಗನೆ ವ್ಯವಸ್ಥೆ ಸುಧಾರಿಸಬೇಕು ಎಂದು ಒತ್ತಾಯಿಸಿದರು.

ಈ ಲೋಪಕ್ಕೆ ಕೇವಲ ನಗರಸಭೆ ಅಧಿಕಾರಿಗಳು ಮಾತ್ರ ಹೊಣೆಯಲ್ಲ. ಆಡಳಿತ ನಡೆಸುವವರು ಈ ಬಗ್ಗೆ ಗಮನ ಹರಿಸಬೇಕಾಗುತ್ತದೆ. ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ತುರ್ತು ಸಭೆ ನಡೆಸಿ, ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ನೀರು ಸರಬರಾಜು ವ್ಯವಸ್ಥೆಯಲ್ಲಿ ಆಗಿರುವ ತಪ್ಪಿನ ಬಗ್ಗೆ ಸಭೆಯಲ್ಲಿ ಸರ್ವಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವೇದಿಕೆ ಸಂಚಾಲಕ ಜಿ.ಅಮರೇಶ, ನಗರಸಭೆ ಹಿರಿಯ ಸದಸ್ಯ ಜಯಣ್ಣ, ಮುಖಂಡರಾದ ಖಾಜಾ ಅಸ್ಪಂ ಪಾಷಾ, ಎಸ್‌. ಮಾರೆಪ್ಪ, ಅಂಬಣ್ಣ ಅರೋಲಿ, ಶ್ರೀನಿವಾಸ ಕೊಪ್ಪರ, ಬಷಿರುದ್ಧೀನ್‌, ಸಾಜೀದ್‌ ಸಮೀರ್‌, ತಿಮ್ಮಾರೆಡ್ಡಿ, ರಜಾಕ್‌ ಉಸ್ತಾದ್‌, ಬಸವರಾಜ ಕಳಸ, ರವಿ ಬೋಸರಾಜ, ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಂ.ವಿರೂಪಾಕ್ಷಿ,ಅಕ್ಬರ್‌ ಹುಸೇನ್‌, ರಾಮನಗೌಡ, ಯೂರುಫ್‌ಖಾನ್‌, ಶಂಶುದ್ಧೀನ್‌, ರಮೇಶ ಯಾದವ್‌ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT