ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಥರಸ್‌ನಲ್ಲಿ ನಡೆದ ಅತ್ಯಾಚಾರ, ಕೊಲೆ ವಿರುದ್ಧ ಪ್ರತಿಭಟನೆ

Last Updated 5 ಅಕ್ಟೋಬರ್ 2020, 14:30 IST
ಅಕ್ಷರ ಗಾತ್ರ

ರಾಯಚೂರು: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಘಟನೆಯನ್ನು ಖಂಡಿಸಿ, ಅಲ್ಲಿನ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಸೋಮವಾರ ಮನವಿ ಸಲ್ಲಿಸಿದವು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ: ಉತ್ತರಪ್ರದೇಶದ ಹಾಥರಸ್‌ನಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಕೊಲೆ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಆಡಳಿತದಲ್ಲಿ ಸಂವಿಧಾನದ ಎಲ್ಲಾ ಆಶಯಗಳನ್ನು ಗಾಳಿಗೆ ತೂರಲಾಗಿದೆ. ಬೀದಿಬೀದಿಗಳಲ್ಲಿ ಕೊಲೆ ಆಗುತ್ತಿವೆ. ಅತ್ಯಾಚಾರ, ಕೊಲೆ ಪ್ರಕರಣಗಳನ್ನು ತಡೆಯುವಲ್ಲಿ ವಿಫಲವಾದ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ಸಂಘಟನಾ ಸಂಚಾಲಕರಾದ ಶರಣಪ್ಪ ದಿನ್ನಿ, ಚಿದಾನಂದ ಅರೋಲಿ, ಪರಶುರಾಮ ಅರೋಲಿ, ಚನ್ನಬಸವ ಯಕ್ಲಾಸಪುರ, ನಾಗರಾಜ ಹಾಲಭಾವಿ ಮತ್ತಿತರರು ಇದ್ದರು.

ಸಿಪಿಐ(ಎಂ) ಜಂಟಿ ಸಂಘಟನೆಗಳು: ಪರಿಶಿಷ್ಟರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿರುವ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘ, ದೇವದಾಸಿ ಮಹಿಳಾ ವಿಮೋಚನಾ ಸಂಘ, ದಲಿತ ಹಕ್ಕುಗಳ ಸಮಿತಿ, ಸಿಪಿಐ (ಎಂ) ಜಂಟಿ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.

ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ರಾಯಚೂರಿನ ಮಾನ್ವಿಯಲ್ಲಿ ಸಹೋದ್ಯೋಗಿ ಮೇಲೆ ಲೈಂಗಿಕ ಕಿರುಕುಳ ನೀಡಿರುವ ತಹಶೀಲ್ದಾರ್‌ರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಚ್‌.ಪದ್ಮಾ, ಕೆ.ಜಿ.ವೀರೇಶ, ಪಾರ್ವತಿ, ಜೆ.ತಾಯಮ್ಮ ನೇತೃತ್ವ ವಹಿಸಿದ್ದರು.

ಎಸ್‌ಯುಸಿಐ:ಹಾಥರಸ್‌ನಲ್ಲಿ ಯುವತಿಗೆ ಕೊಲೆಗೆ ಕಾರಣವಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಸೋಷಿಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ–ಸಿ)ದಿಂದ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಹೇಶ ಚೀಕಲಪರ್ವಿ, ಚನ್ನಬಸವ ಜಾನೇಕಲ್‌, ಮಲ್ಲನಗೌಡ, ಎನ್‌.ಎಸ್‌.ವೀರೇಶ್‌, ವಿನೋದ, ಅಪೂರ್ವ, ಗಾಯತ್ರಿ ಮತ್ತಿತರರು ಇದ್ದರು.

ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ: ಪರಿಶಿಷ್ಟ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ತೆಲಂಗಾಣದಲ್ಲಿ ಇಂತಹದೊಂದು ಘಟನೆ ನಡೆದಾಗ, ಅಲ್ಲಿನ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಉತ್ತರಪ್ರದೇಶದಲ್ಲಿಯೂ ತೆಗೆದುಕೊಂಡು ಯುವತಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರಭು ಹುಲಿನಾಯಕ, ಗುರುನಾಥ, ಯಲ್ಲಪ್ಪ ಜಾಲಿಬೆಂಚಿ, ಪ್ರಭು ತುರಾಯಿ, ಗೋಪಾಲ, ತಿಮ್ಮಪ್ಪ, ಮರಿಸ್ವಾಮಿ, ತನುಜಾ, ಲಕ್ಷ್ಮೀ ಇತರರು ಇದ್ದರು.

ಕರ್ನಾಟಕ ದಲಿತ ಮಹಿಳಾ ಮುಖಂಡರ ವೇದಿಕೆ: ಸಾಮೂಹಿಕ ಅತ್ಯಾಚಾರ ನಡೆಸಿರುವ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಮಹಿಳಾ ಮುಖಂಡರ ವೇದಿಕೆಯಿಂದ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ವಿಜಯರಾಣಿ, ಭಾಗ್ಯಮ್ಮ ಸಿರವಾರ, ಶಿವಮ್ಮ, ಅಮರಮ್ಮ, ಸಂಗಮ್ಮರೆಡ್ಡಿ, ಹನುಮಂತಿ ಮತ್ತಿತರರು ಇದ್ದರು.

ಮಾನವ ಹಕ್ಕುಗಳ ಪರಿಷತ್‌: ಹಾಥರಸ್‌ನಲ್ಲಿ ಪರಿಶಿಷ್ಟ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಪರಿಷತ್‌ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಸಂತ್ರಸ್ತೆಯ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು. ಉತ್ತರ ಪ್ರದೇಶ ಸರ್ಕಾರ ವಜಾಗೊಳಿಸಬೇಕು. ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಕೋರಿದರು.

ಸೈಯದ್‌ ಜಲಾಲ್‌, ಮೊಹ್ಮದ್‌ ಅಮೀರ್‌ಖಾನ್‌, ಅನ್ವರ್‌ಖಾನ್‌, ವಕೀಲ ತಾಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT