ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಪಿಟಿಸಿಎಲ್ ಕಚೇರಿ ಸ್ಥಳಾಂತರಿಸಿದರೆ ಪ್ರತಿಭಟನೆ

ಪ್ರಸರಣ ಮಾರ್ಗ- ಉಪ ಕೇಂದ್ರಗಳ ವಿಭಾಗ ಕಚೇರಿ ಸ್ಥಳಾಂತರ ಹುನ್ನಾರ?
Published 12 ಜೂನ್ 2024, 15:41 IST
Last Updated 12 ಜೂನ್ 2024, 15:41 IST
ಅಕ್ಷರ ಗಾತ್ರ

ಲಿಂಗಸುಗೂರು: ಕರ್ನಾಟಕ ವಿದ್ಯುತ್‍ ಪ್ರಸರಣ ನಿಗಮ (ಕೆಪಿಟಿಸಿಎಲ್‌)ನಿಯಮಿತದ ಪ್ರಸರಣ ಮಾರ್ಗ ಮತ್ತು ಉಪ ಕೇಂದ್ರಗಳ ವಿಭಾಗ (ಕೊಪ್ಪಳ-ರಾಯಚೂರು) ಕಚೇರಿಯನ್ನು ಜಿಲ್ಲಾ ಕೇಂದ್ರ ರಾಯಚೂರಿಗೆ ಸ್ಥಳಾಂತರಕ್ಕೆ ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಗತಿಪರ ಸಂಘಟಕರು ಎಚ್ಚರಿಸಿದ್ದಾರೆ.

ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲರ ಪತ್ರದ ನೆಪ ಮುಂದಿಟ್ಟು ಅಧಿಕಾರಿಗಳು ಸ್ಥಳಾಂತರಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಶಿವರಾಜ ಪಾಟೀಲರು ಏಪ್ರಿಲ್‍ ತಿಂಗಳಲ್ಲಿ ನಿಗಮದ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು, ಇದಕ್ಕೆ ಸಂಬಂಧಿಸಿದಂತೆ ಕಲಬುರಗಿ ವಲಯದ ಮುಖ್ಯ ಎಂಜಿನಿಯರ್ ಕೂಡ 2024 ಮೇ ತಿಂಗಳಲ್ಲಿ ಉತ್ತರ ನೀಡಿದ್ದಾರೆ. ಲಿಂಗಸುಗೂರು ವಿಭಾಗದ ಕಾರ್ಯ ನಿರ್ವಾಹಕರ ಅಭಿಪ್ರಾಯ ಕೊರಿ ಬಂದಿರುವ ಪತ್ರದ ಹಿಂದೆ ಅಧಿಕಾರಿಗಳ ಷಡ್ಯಂತ್ರ ಬಹಿರಂಗಗೊಂಡಿದ್ದು, ರಾಯಚೂರಿಗೆ ಸ್ಥಳಾಂತರಿಸದಂತೆ ಸರ್ಕಾರ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವ ಎನ್‍.ಎಸ್‍. ಬೋಸರಾಜು ಅವರು ಸಂಘಟನೆಯೊಂದರ ಮನವಿ ಆಧಾರದಲ್ಲಿ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಠಿಯಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್‍, ಬಿಜೆಪಿ ಪ್ರತಿನಿಧಿಗಳು ಲಿಂಗಸುಗೂರಲ್ಲಿನ ವಿಭಾಗ ಕಚೇರಿ ಸ್ಥಳಾಂತರಕ್ಕೆ ಸಂಚು ರೂಪಿಸಿದ್ದಾರೆ. ಸ್ಥಳೀಯ ಶಾಸಕ ಮಾನಪ್ಪ ವಜ್ಜಲ, ವಿಧಾನ ಪರಿಷತ್‍ ಸದಸ್ಯ ಶರಣಗೌಡ ಪಾಟೀಲ ಬಯ್ಯಾಫುರ ಮೌನ ವಹಿಸಿದ್ದರ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿವೆ.

ರಾಯಚೂರು, ಕೊಪ್ಪಳ ಜಿಲ್ಲೆಗಳ ಲಿಂಗಸುಗೂರು ವಿಭಾಗ ಕಚೇರಿ ವ್ಯಾಪ್ತಿಗೆ ರಾಯಚೂರು, ಸಿಂಧನೂರು, ಮಲ್ಲಟ, ಲಿಂಗಸುಗೂರು, ಹಲವರ್ತಿ 220ಕೆವಿ ಕೇಂದ್ರಗಳು ಸೇರಿದಂತೆ 55ಕ್ಕೂ ಹೆಚ್ಚು 110ಕೆ.ವಿ ಕೆಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ವಿಭಾಗ ಕಚೇರಿ ವ್ಯಾಪ್ತಿಗೆ ಕರ್ತವ್ಯ ನಿರ್ವಹಿಸಲು ಕಾರ್ಯನಿರ್ವಾಹಕ ಎಂಜಿನಿಯರ್ ಒಳಗೊಂಡ 427 ಹುದ್ದೆಗಳಿಗೆ ಕೇವಲ 270 ನೌಕರರಿದ್ದು, ವಿಭಾಗ ಕಚೇರಿಗೆ ಕಾರ್ಯನಿರ್ವಾಹಕರ ನೇಮಕ ಇನ್ನೂ ಆಗಿಲ್ಲ.

ದಶಕಗಳಿಂದ ಕಾಯಂ ಕಾರ್ಯನಿರ್ವಾಹಕ ಅಧಿಕಾರಿ, ಅಕೌಂಟಂಟ್‍ ಸೇರಿದಂತೆ ಹುದ್ದೆ ಆಧರಿಸಿ ಸಿಬ್ಬಂದಿ ನಿಯೋಜನೆ ಮಾಡುತ್ತಿಲ್ಲ. ಬೇಡವಾದ ಅಧಿಕಾರಿಗಳಿಗೆ ಪ್ರಭಾರ ಹೊಣೆ ನೀಡಿ, ವಿಭಾಗ ಕಚೇರಿ ಲಿಂಗಸುಗೂರದಿಂದ ಸ್ಥಳಾಂತರ ಮಾಡಲು ಅಭಿಪ್ರಾಯ ಸಂಗ್ರಹ ನಡೆಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಅಧ್ಯಕ್ಷ ಜಿಲಾನಿ ಪಾಷ ತೀವ್ರವಾಗಿ ಖಂಡಿಸಿದ್ದಾರೆ.

ಜೆಸ್ಕಾಂ ಕಚೇರಿ ಆವರಣದಲ್ಲಿ ಸುಸಜ್ಜಿತ ಕಟ್ಟಡ, ಅಗತ್ಯ ಸೌಲಭ್ಯ, ಪೀಠೋಪಕರಣ ವ್ಯವಸ್ಥೆ ಕಲ್ಪಿಸಿದೆ. ಅಧಿಕಾರಿ, ಸಿಬ್ಬಂದಿ ನಿಯೋಜಿಸಿ ಕೆಲಸ ಮಾಡಿಸಿಕೊಳ್ಳಲಾಗದ ವ್ಯವಸ್ತಾಪಕ ನಿರ್ದೇಶಕರು ದಶಕದ ಅವಧಿಯಲ್ಲಿ ಸ್ಥಳಾಂತರಕ್ಕೆ ಮೂರನೆ ಬಾರಿ ಪ್ರಯತ್ನ ನಡೆಸಿದ್ದಾರೆ. ಸ್ಥಳಾಂತರಕ್ಕೆ ಮುಂಚೆ ಪ್ರತಿನಿಧಿಗಳ ಸಭೆ ಕರೆದು ಸತ್ಯ ಸಂಗತಿ ಬಹಿರಂಗಪಡಿಸಲು ಸಂಘಟಕರು ಒತ್ತಾಯಿಸಿದ್ದಾರೆ.

’ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸ್ಥಳಾಂತರಕ್ಕೆ ಮುಂದಾಗದೇ ವಿಭಾಗ ಕಚೇರಿಗೆ ಪೂರ್ಣ ಪ್ರಮಾಣದ ಸಿಬ್ಬಂದಿ ನಿಯೋಜಿಸಿ ಕೆಲಸ ಮಾಡಿಸಿಕೊಳ್ಳಬೇಕು. ಇಲ್ಲದೆ ಹೋದರೆ ಬೀದಿಗಳಿದು ಹೋರಾಟ ನಡೆಸುತ್ತೇವೆ’ ಎಂದು ರೈತ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಶಿವಪುತ್ರಗೌಡ ಪಾಟೀಲ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಪ್ರಭುಲಿಂಗ ಮೇಗಳಮನಿ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಶಾಸಕ ಡಿ.ಎಸ್‍ ಹೂಲಗೇರಿ ಮಾತನಾಡಿ, ‘ಕೆಪಿಟಿಸಿಎಲ್‍ ವಿಭಾಗ ಕಚೇರಿ ಸ್ಥಳಾಂತರ ಕುರಿತಂತೆ ಪತ್ರ ವ್ಯವಹಾರ ನಡೆದಿರುವ ವಿಷಯ ಗಮನಕ್ಕೆ ಬಂದಿದೆ. ಕೂಡಲೇ ಸಂಬಂಧಿಸಿದ ಸಚಿವರ ಭೇಟಿ ಮಾಡಿ ವಾಸ್ತವ ಚಿತ್ರಣದ ಮಾಹಿತಿ ನೀಡಿ ಸ್ಥಳಾಂತರದ ಬದಲು ಕಾಯಂ ಸಿಬ್ಬಂದಿ ನಿಯೋಜನೆಗೆ ಒತ್ತಡ ಹೇರುವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT