ಸಿಂಧನೂರು: ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ತಾಲ್ಲೂಕು ಘಟಕ ಸೋಮವಾರ ಸ್ಥಳೀಯ ನಗರಸಭೆ ಕಚೇರಿಯ ಮುಂದೆ ಪ್ರತಿಭಟಿಸಿ ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ಮನವಿ ಪತ್ರ ಸಲ್ಲಿಸಿತು.
23 ವಲಯದ ಅಸಂಘಟಿತ ಕಾರ್ಮಿಕರಿಗೆ ಜಾರಿ ಮಾಡುತ್ತಿರುವ ಸೌಲಭ್ಯಗಳೊಂದಿಗೆ ಸಹಜ ಮರಣಕ್ಕೂ ₹1 ಲಕ್ಷ ಪರಿಹಾರ ನೀಡಬೇಕು ಹಾಗೂ ಶವ ಸಂಸ್ಕಾರ ಪರಿಹಾರದ ಮೊತ್ತವನ್ನು ₹25 ಸಾವಿರಕ್ಕೆ ಹೆಚ್ಚಿಸಬೇಕು. ಹಮಾಲಿ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆ ಜಾರಿ ಮಾಡಬೇಕು. ಎಪಿಎಂಸಿ ಹಮಾಲಿ ಕಾರ್ಮಿಕರಿಗಾಗಿ ಈ ಹಿಂದೆ ಪ್ರಾರಂಭಿಸಲಾದ ಕಾಯಕ ನಿಧಿ ಯೋಜನೆ ಬಡ ಹಮಾಲಿ ಕಾರ್ಮಿಕರಿಗೆ ಅತ್ಯಂತ ಪ್ರಯೋಜನಕಾರಿ ಆಗಿದ್ದು, ಸರ್ಕಾರ ಹಾಗೂ ಎಪಿಎಂಸಿ ಸಮಿತಿಗಳಿಂದ ನಿರಂತರ ಹಣಕಾಸು ಸಹಾಯ ಪಡೆದು ವೈದ್ಯಕೀಯ ಮರುಪಾವತಿ ಯೋಜನೆ ಮುಂದುವರಿಸಬೇಕು. 60 ವರ್ಷವಾದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಠ ₹1 ಲಕ್ಷ ನಿವೃತ್ತಿ ಪರಿಹಾರ ನೀಡಬೇಕು. ಮರಣ ಪರಿಹಾರ ₹2 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ಘಟಕದ ಉಪಾಧ್ಯಕ್ಷ ಶೇಕ್ಷಾಖಾದ್ರಿ ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಯಂಕಪ್ಪ ಕೆಂಗಲ್, ಮುಖಂಡರಾದ ವೀರೇಶ ನಾಯಕ ತುರ್ವಿಹಾಳ, ಸತ್ತಾರ್‍ಖಾನ್, ಮಹಿಬೂಬ್‍ಸಾಬ, ಭಂಡಾರೆಪ್ಪ, ವೀರೇಶ ಸಿಂಗಾಪುರ ಇದ್ದರು.