ಸೋಮವಾರ, ಮೇ 23, 2022
22 °C

ಸಿಂಧನೂರು: ಹಂಸಲೇಖರಿಗೆ ಬೆದರಿಕೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಹಂಸಲೇಖ ಅವರಿಗೆ ಬೆದರಿಕೆ ಹಾಕುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಾವಿತ್ರಿಬಾಯಿ ಫುಲೆ, ಡಾ.ಅಂಬೇಡ್ಕರ್, ಭಗತ್‍ಸಿಂಗ್ ವೇದಿಕೆ, ಬಹುಜನ ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಜಂಟಿಯಾಗಿ ಶನಿವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಿದರು.

ಹಂಸಲೇಖ ಅವರು ಸಮಾಜದ ಅವ್ಯವಸ್ಥೆ, ತಾರತಮ್ಯವನ್ನು ಬಹಿರಂಗವಾಗಿ ಹೇಳುವ ಮೂಲಕ ದಿಟ್ಟತನ ಪ್ರದರ್ಶಿಸಿದ್ದಾರೆ. ಅವರ ಹೇಳಿಕೆಯೂ ಕಟುಸತ್ಯದಿಂದ ಕೂಡಿದೆ. ಹಾಗಾಗಿ ಧರ್ಮವನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಅಜ್ಞಾನ, ಮೌಢ್ಯ, ಅಂಧಕಾರದಲ್ಲಿ ಮುಳುಗಿಸಿ ಶೋಷಣೆ ಮಾಡುತ್ತಿರುವವರಿಗೆ ಸಹಿಸಲಾಗುತ್ತಿಲ್ಲ. ಕೆಲವರು ಹಂಸಲೇಖ ಅವರನ್ನು ಮನಬಂದಂತೆ ತೇಜೋವಧೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಂಚಾಲಕ ನಾಗರಾಜ್ ಪೂಜಾರ್ ದೂರಿದರು.

ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಭೀಮೇಶ ಕವಿತಾಳ ಮಾತನಾಡಿ, ಪರಿಶಿಷ್ಟ ಜಾತಿ ಕೇರಿಗೆ ಪ್ರವೇಶಿಸುವ ನಾಟಕವಾಡುವ ಮಠಾಧಿಪತಿಗಳು ಜಾತಿಯ ಅಂತರವನ್ನು ಹೆಚ್ಚಿಸುವ ದುರುದ್ದೇಶಗಳು ಈಗಾಗಲೇ ಸಾಕಷ್ಟು ಬಯಲಾಗಿವೆ. ಯಾವುದೇ ಸ್ವಾಮೀಜಿ ಹಾಗೂ ಮಠಾಧಿಪತಿಗಳು ಪರಿಶಿಷ್ಟ ಕೇರಿಗೆ ಭೇಟಿ ಎನ್ನುವುದೇ ಸಂವಿಧಾನ ಬಾಹಿರವಾಗಿದೆ. ಇದು ಪರಿಶಿಷ್ಟ ಜಾತಿ ಜನಾಂಗದವರನ್ನು ಸಣ್ಣವರನ್ನಾಗಿ ಮಾಡಿ ಪುನಃ ಮೇಲ್ಜಾತಿಗಳನ್ನು ವೈಭವೀಕರಿಸುವ ಕುತಂತ್ರವಾಗಿದೆ ಎಂದು ಆಪಾದಿಸಿದರು.

ಹಂಸಲೇಖ ಅವರು ಸತ್ಯವನ್ನು ಪುನರುಚ್ಚರಿಸುವ ಮೂಲಕ ವಾಸ್ತವಕ್ಕೆ ಕೈಗನ್ನಡಿ ಹಿಡಿದಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಕೆಲ ಕಿಡಿಗೇಡಿಗಳು ಅವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಒಂದು ವೇಳೆ ಇದು ಹೀಗೆಯೇ ಮುಂದುವರಿದರೆ ಸಂಘಟನೆಯಿಂದ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಬಿ.ಎನ್.ಯರದಿಹಾಳ, ಹನುಮಂತಪ್ಪ ಹಂಪನಾಳ, ಮಂಜುನಾಥ ಗಾಂಧಿನಗರ, ನಾಗರಾಜ ತುರ್ವಿಹಾಳ, ಮಲ್ಲಿಕಾರ್ಜುನ ಕುರುಗೋಡು, ಶಿವರಾಜ ಉಪ್ಪಲದೊಡ್ಡಿ, ಶ್ರೀನಿವಾಸ ಬುಕ್ಕನಟ್ಟಿ, ಮಹಾದೇವ ಅಮರಾಪುರ, ಸೋಮನಾಥ, ವಿಜಯಕುಮಾರ, ಮೌನೇಶ ಬುದ್ದಿನ್ನಿ, ಶೇಕ್‍ದಾದಾ, ಅನ್ಸರ್‍ಪಾಷಾ, ನಾಗರಾಜ್ ಸಾಸಲಮರಿ, ಕೃಷ್ಣ ಇಂದಿರಾನಗರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು