ಪಿಯು ಫಲಿತಾಂಶ: ಒಂದು ಸ್ಥಾನ ಕುಸಿದ ರಾಯಚೂರು

ಶನಿವಾರ, ಏಪ್ರಿಲ್ 20, 2019
25 °C
ಮೈಲುಗೈ ಸಾಧಿಸಿರುವ ಗ್ರಾಮೀಣ ಭಾಗದ ಕಾಲೇಜು ವಿದ್ಯಾರ್ಥಿನಿಯರು

ಪಿಯು ಫಲಿತಾಂಶ: ಒಂದು ಸ್ಥಾನ ಕುಸಿದ ರಾಯಚೂರು

Published:
Updated:
Prajavani

ರಾಯಚೂರು: 2018-19 ಶೈಕ್ಷಣಿಕ ಸಾಲಿನ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟಿಸಲಾಗಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ರಾಯಚೂರು 27 ನೇ ಸ್ಥಾನದಲ್ಲಿದೆ. ಹಿಂದಿನ ವರ್ಷಕ್ಕಿಂತಲೂ ಈ ಸಲ ಒಂದು ಸ್ಥಾನ ಕುಸಿತ ಕಂಡಿದೆ.

ಜಿಲ್ಲೆಯ ಒಟ್ಟು ಶೇಕಡಾವಾರು ಫಲಿತಾಂಶದಲ್ಲಿ ಶೇ 0.51 ರಷ್ಟು ಹೆಚ್ಚಿನ ಸಾಧನೆಯಾಗಿದೆ. 2017-18 ನೇ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಪರೀಕ್ಷೆ ಬರೆದವರಲ್ಲಿ ಶೇ 56.22 ರಷ್ಟು ಪಾಸಾಗಿದ್ದರು.‌ ಈ ವರ್ಷ ಶೇ 56.73 ರಷ್ಟು ಪಾಸಾಗಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳು ಪಡೆದಿರುವ ಫಲಿತಾಂಶವನ್ನು ಹೋಲಿಸಿದರೆ, ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಿಗಿಂತ ರಾಯಚೂರು ಸ್ವಲ್ಪ ಮುಂಚೂಣಿಯಲ್ಲಿದೆ. ಬಳ್ಳಾರಿ ಪ್ರಥಮ, ಕೊಪ್ಪಳ ದ್ವಿತೀಯ ಹಾಗೂ ರಾಯಚೂರು ತೃತೀಯ ಸ್ಥಾನದಲ್ಲಿರುವುದು ಗಮನಾರ್ಹ.

ಪುನಾವರ್ತನೆ (ರಿಪೀಟ್‌) ಹಾಗೂ ಹೊಸದಾಗಿ ಪರೀಕ್ಷೆ ಬರೆದಿದ್ದ ಒಟ್ಟು 20,524 ವಿದ್ಯಾರ್ಥಿಗಳ ಪೈಕಿ 9,840 (ಶೇ 47.94) ಉತ್ತೀರ್ಣರಾಗಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 1.55 ರಷ್ಟು ಪ್ರಗತಿಯಾಗಿದೆ. ವಿಶೇಷವೆಂದರೆ ವಾಣಿಜ್ಯ ವಿಭಾಗದಲ್ಲಿ ಶೇ 54.22 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿಜ್ಞಾನ ಮತ್ತು ಕಲಾ ವಿಭಾಗಕ್ಕಿಂತಲೂ ವಾಣಿಜ್ಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ.

ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಗ್ರಾಮೀಣ ಭಾಗದಿಂದ 4,193 ಹಾಗೂ 16,331 ವಿದ್ಯಾರ್ಥಿಗಳಿದ್ದರು. ಫಲಿತಾಂಶದಲ್ಲಿ ನಗರದ ವಿದ್ಯಾರ್ಥಿಗಳು ಶೇ 47.38 ರಷ್ಟು ಪಾಸಾಗಿದ್ದಾರೆ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಶೇ 50.16 ರಷ್ಟು ಪಾಸಾಗಿದ್ದಾರೆ.

ಖಾಸಗಿ ಪಿಯುಸಿ ಕಾಲೇಜು ವಿದ್ಯಾರ್ಥಿಗಳು ಹಿಂದಿನ ವರ್ಷಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಪಾಸಾಗಿದ್ದಾರೆ. ಕಳೆದ ವರ್ಷ ಪರೀಕ್ಷೆ ಬರೆದಿದ್ದ 1,1,29 (ಶೇ 23.12) ವಿದ್ಯಾರ್ಥಿಗಳ ಪೈಕಿ 261 ವಿದ್ಯಾರ್ಥಿಗಳು ಪಾಸಾಗಿದ್ದರು. ಈ ವರ್ಷ 1,071 ವಿದ್ಯಾರ್ಥಿಗಳ ಪೈಕಿ 233 (ಶೇ 21.76) ಮಾತ್ರ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆ

ಎಂದಿನಂತೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರು ಗರಿಷ್ಠ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ನಗರದ ವಿದ್ಯಾರ್ಥಿನಿಯರಿಗೆ ಹೋಲಿಕೆ ಮಾಡಿದರೆ, ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಶೇಕಡಾವಾರು ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿರುವುದು ವಿಶೇಷ.

ಪರಿಶಿಷ್ಟರಲ್ಲಿ ಸುಧಾರಣೆ

ಪಿಯುಸಿ ಪರೀಕ್ಷೆ ಬರೆದಿದ್ದ ಪರಿಶಿಷ್ಟ ಜಾತಿ/ ಪಂಗಡದ ವಿದ್ಯಾರ್ಥಿಗಳಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಪರಿಶಿಷ್ಟ ಜಾತಿಯ ಶೇ 39.72 ವಿದ್ಯಾರ್ಥಿಗಳು ಪಾಸಾಗಿದ್ದರೆ, ಈ ವರ್ಷ ಶೇ 41.57 ರಷ್ಟು ಉತ್ತೀರ್ಣರಾಗಿದ್ದಾರೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಕಳೆದ ವರ್ಷ ಶೇ 44.87 ರಷ್ಟು ಪಾಸಾಗಿದ್ದರೆ, ಈ ವರ್ಷ ಶೇ 47.24 ರಷ್ಟು ಉತ್ತೀರ್ಣರಾಗಿದ್ದಾರೆ.

ಇಂಗ್ಲಿಷ್‌ ಮಾಧ್ಯಮ ಮೈಲುಗೈ

ಪಿಯುಸಿ ಪರೀಕ್ಷೆ ಬರೆದಿದ್ದ ಕನ್ನಡ ಮಾಧ್ಯಮ ಹಾಗೂ ಇಂಗ್ಲಿಷ್‌ ಮಾಧ್ಯಮ ವಿದ್ಯಾರ್ಥಿಗಳ ಪೈಕಿ ಶೇಕಡವಾರು ಇಂಗ್ಲಿಷ್‌ ಮಾಧ್ಯಮದವರು ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 15,503 ವಿದ್ಯಾರ್ಥಿಗಳ ಪೈಕಿ 7,131 (ಶೇ 46) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಇಂಗ್ಲಿಷ್‌ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 5,021 ವಿದ್ಯಾರ್ಥಿಗಳ ಪೈಕಿ 2,709 (ಶೇ 53.95) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !