ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿಯಲ್ಲಿ ಅರಣ್ಯ ಮಹಾವಿದ್ಯಾಲಯಕ್ಕೆ ಪ್ರಸ್ತಾವ

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಯೋಜನೆ
Last Updated 27 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ರಾಯಚೂರು: ಕಲ್ಯಾಣ ಕರ್ನಾಟಕ ಭಾಗದ ‘ಮಿನಿ ಮಲೆನಾಡು’ ಎಂದು ಕರೆಯಲ್ಪಡುವ ಕಲಬುರ್ಗಿ ಜಿಲ್ಲೆ ಚಿಂಚೋಳಿಯಲ್ಲಿ ಅರಣ್ಯ ಮಹಾವಿದ್ಯಾಲಯ ಸ್ಥಾಪಿಸಲು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

ವಿಶ್ವವಿದ್ಯಾಲಯದಿಂದ ಆರಂಭಿಸುವ ಮೊದಲ ಅರಣ್ಯ ಮಹಾವಿದ್ಯಾಲಯ ಇದಾಗಲಿದ್ದು, ನೂತನ ಕ್ಯಾಂಪಸ್‌ ಅಭಿವೃದ್ಧಿಗಾಗಿ 300 ಎಕರೆಯಷ್ಟು ಭೂಮಿ ಲಭ್ಯವಿದೆ ಎಂಬುದನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಗುರುತಿಸಿದ್ದಾರೆ. ಒಟ್ಟು ₹100 ಕೋಟಿ ಅನುದಾನದ ಅಗತ್ಯವಿದ್ದು, ಪ್ರಾರಂಭದಲ್ಲಿ ಸರ್ಕಾರ ₹10 ಕೋಟಿ ಅನುದಾನ ಒದಗಿಸಿದರೂ ಮಹಾವಿದ್ಯಾಲಯ ಸ್ಥಾಪನೆ ಪ್ರಕ್ರಿಯೆ ಶುರು ಮಾಡುವುದಕ್ಕೆ ವಿಶ್ವವಿದ್ಯಾಲಯ ಸಜ್ಜಾಗಿದೆ.

ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಶಿರಸಿಯಲ್ಲಿ ಅರಣ್ಯ ಮಹಾವಿದ್ಯಾಲಯ ಸ್ಥಾಪಿಸಿದೆ. ಅದೇ ರೀತಿ, ಬೆಂಗಳೂರು ವಿಶ್ವವಿದ್ಯಾಲಯವು ಚಿಂತಾಮಣಿಯಲ್ಲಿ ರೇಷ್ಮೆಕೃಷಿ ಮಹಾವಿದ್ಯಾಲಯ ಪ್ರಾರಂಭಿಸಿದೆ. ಇದೇ ಮಾದರಿಯಲ್ಲಿ ‘ಬಿಎಸ್‌ಸಿ ಫಾರೆಸ್ಟ್ರೀ’ ಪದವಿ ಅಧ್ಯಯನ ಆರಂಭಕ್ಕೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಮುಂದಾಗಿದೆ.

ಅರಣ್ಯ ಮಹಾವಿದ್ಯಾಲಯದಿಂದ ಪದವಿ ಪಡೆಯುವ ವಿದ್ಯಾರ್ಥಿಗಳು ಇಂಡಿಯನ್‌ ಫಾರೆಸ್ಟ್‌ ಸರ್ವಿಸ್‌ (ಐಎಫ್‌ಎಸ್‌) ಸೇವೆಗೆ ಸೇರಲು ದಾರಿ ಸುಗಮವಾಗುತ್ತದೆ. ಸದ್ಯ ಕಲ್ಯಾಣ ಕರ್ನಾಟಕ ಭಾಗದಿಂದ ಐಎಫ್‌ಎಸ್‌ ಸೇವೆಗೆ ಅಭ್ಯರ್ಥಿಗಳು ಆಯ್ಕೆಯಾಗುತ್ತಿಲ್ಲ. ಈ ಕೊರತೆ ನಿಗಿಸುವ ಉದ್ದೇಶದಿಂದಲೂ ಅರಣ್ಯ ಮಹಾವಿದ್ಯಾಲಯ ಸ್ಥಾಪನೆಯು ಮಹತ್ವದ ಪಾತ್ರ ವಹಿಸಲಿದೆ.

ಬಳ್ಳಾರಿ ಜಿಲ್ಲೆಯ ಹಗರಿ, ಬೀದರ್‌ ಜಿಲ್ಲೆಯ ಔರಾದ್‌, ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ರಾಯಚೂರಿನ ದೇವದುರ್ಗದಲ್ಲಿ ಹೊಸ ಕೃಷಿ ಪದವಿ ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆಯೂ ವಿಶ್ವವಿದ್ಯಾಲಯವು ಸರ್ಕಾರದ ಅನುಮತಿ ಕೋರಿದೆ. ಕೃಷಿಗೆ ಸಂಬಂಧಿಸಿದ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯಗಳನ್ನು ವ್ಯಾಪಿಸುತ್ತಿದೆ. ಚಿಂಚೋಳಿಯಲ್ಲಿ ಅರಣ್ಯ ಮಹಾವಿದ್ಯಾಲಯ ಪ್ರಾರಂಭಿಸಿದರೆ, ಅರಣ್ಯ ಅವಲಂಬಿಸಿ ಜೀವನ ನಡೆಸುವವರಿಗೂ ಇದರಿಂದ ಸಹಾಯವಾಗಲಿದೆ ಎಂಬುದು ವಿಶ್ವವಿದ್ಯಾಲಯದ ಅಧಿಕಾರಿಗಳ ವಿವರಣೆ.

*
ಕ.ಕ ಭಾಗದಲ್ಲಿ ಅರಣ್ಯ ಅಧ್ಯಯನಕ್ಕೆ ಬೇಕಾಗುವ ಸಂಪನ್ಮೂಲ ಹಾಗೂ ಸಾಕಷ್ಟು ಮರಗಳಿಂದ ಕೂಡಿದ ಏಕೈಕ ತಾಣ ಚಿಂಚೋಳಿ. ಇದು ಅರಣ್ಯ ಕಾಲೇಜಿಗೆ ಯೋಗ್ಯವಾದ ಸ್ಥಳ.
-ಡಾ.ಕೆ.ಎನ್‌. ಕಟ್ಟಿಮನಿ, ರಾಯಚೂರು ಕೃಷಿ ವಿಜ್ಞಾನಗಳ ವಿವಿ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT