ಬುಧವಾರ, ಆಗಸ್ಟ್ 12, 2020
21 °C
ದುರಸ್ತಿ ಯೋಜನೆಯಲ್ಲೇ ಉಳಿದ ಲೋಕೋಪಯೋಗಿ ಇಲಾಖೆ

ರಾಯಚೂರು | ಹದ್ದುಮೀರಿ ಹದಗೆಟ್ಟಿದೆ ರಾಜ್ಯಹೆದ್ದಾರಿ!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಜಿಲ್ಲಾ ವ್ಯಾಪ್ತಿಯಲ್ಲಿ ಬೆಳಗಾವಿ–ರಾಯಚೂರು ರಾಜ್ಯಹೆದ್ದಾರಿ ಸಂಖ್ಯೆ–20 ರಲ್ಲಿ ಕಳೆದ ಮಳೆಗಾಲದಲ್ಲಿಯೇ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿ ಹಾಳಾಗಿದ್ದರೂ ದುರಸ್ತಿ ಭಾಗ್ಯ ಬರಲೇ ಇಲ್ಲ. ಈ ವರ್ಷವೂ ಮಳೆಯಿಂದ ಹದ್ದುಮೀರಿ ರಸ್ತೆ ಹಾಳಾಗುತ್ತಿದ್ದು, ವಾಹನಗಳ ಸಂಚಾರ ಸಂಕಷ್ಟಮಯವಾಗಿದೆ.

ರಾಯಚೂರಿನಿಂದ ಲಿಂಗಸುಗೂರು 90 ಕಿಲೋ ಮೀಟರ್‌ ದೂರ ಸಂಚರಿಸುವುದಕ್ಕೆ ಸರ್ಕಾರಿ ಬಸ್‌ಗಳು ಎರಡೂವರೆಯಿಂದ ಮೂರು ತಾಸು ಬೇಕಾಗುತ್ತದೆ. ಗುಂಡಿಗಳ ಹೊಡೆತಕ್ಕೆ ವಾಹನಗಳ ಟಾಯರ್‌ ಹಾಳಾಗುವ ಜೊತೆಗೆ ಇಡೀ ವಾಹನ ಜಖಂ ಆಗುತ್ತಿವೆ. ಅಸ್ಕಿಹಾಳ ದಾಡುತ್ತಿದ್ದಂತೆ ರಾಜ್ಯಹೆದ್ದಾರಿಯೋ, ಕಚ್ಚಾರಸ್ತೆಯೋ ಎನ್ನುವ ಅನುಮಾನ ಶುರುವಾಗುತ್ತದೆ.

ಸರಕು ಸಾಗಿಸುವ ಲಾರಿಗಳ ಭರಾಟೆಯಿಂದ ದೂಳು ಆವರಿಸಿಕೊಳ್ಳುತ್ತದೆ. ಬೈಕ್‌ನಲ್ಲಿ ಸಂಚರಿಸುವವರಿಗೆ ದೂಳಿನ ಮಜ್ಜನ. ಒಂದು ವಾಹನದ ಹಿಂದೆ ಇನ್ನೊಂದು ವಾಹನ ಸಂಚರಿಸುವುದೇ ದುಸ್ತರ ಎನ್ನುವ ಸ್ಥಿತಿ ಸಾತ್‌ಮೈಲ್‌ ಕ್ರಾಸ್‌ನಿಂದ ಕವಿತಾಳದವರೆಗೂ ಇದೆ. ಕಲ್ಮಲಾ–ಸಿರವಾರ ಮಧ್ಯೆ ವಾಹನಗಳ ವೇಗ ತಗ್ಗಿಸದ್ದರೆ, ವಾಹನ ಜಖಂ ಆಗುವುದು ಗ್ಯಾರಂಟಿ. 

ರಾಯಚೂರಿನಿಂದ ಬೆಳಗಾವಿ 354 ಕಿಲೋ ಮೀಟರ್‌ ಉದ್ದದ ರಾಜ್ಯ ಹೆದ್ದಾರಿಯನ್ನು ಲೋಕೋಪಯೋಗಿ ಇಲಾಖೆಯು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಪ್ರತಿವರ್ಷ ಮಳೆಗಾಲದ ನಂತರ ಗುಂಡಿಗಳನ್ನು ದುರಸ್ತಿ ಮಾಡುವುದಕ್ಕೆ ಯೋಜನೆ ರೂಪಿಸಲಾಗುತ್ತದೆ. ಈ ರಾಜ್ಯಹೆದ್ದಾರಿಯಲ್ಲಿ ನಿರ್ಮಾಣವಾದ ಗುಂಡಿಗಳನ್ನು ಮುಚ್ಚುವುದಕ್ಕೆ ಕಳೆದ ವರ್ಷವೇ ಯೋಜನೆ ಆಗಿತ್ತು. ಆದರೆ, ಅನುಷ್ಠಾನ ಮಾತ್ರ ಇನ್ನೂ ಆಗುತ್ತಿಲ್ಲ. ರಾಯಚೂರು ಜಿಲ್ಲಾ ಲೋಕೋಪಯೋಗಿ ಇಲಾಖೆಯಲ್ಲಿ ಒಂದು ವರ್ಷದಲ್ಲಿ ನಾಲ್ಕು ಜನ ಕಾರ್ಯನಿರ್ವಾಹಕ ಎಂಜಿನಿಯರುಗಳು ವರ್ಗಾವಣೆ ಆಗಿದ್ದಾರೆ.

‘ವಾಹನಗಳ ಸಂಚಾರ ಬಹಳಷ್ಟು ಹೆಚ್ಚಳವಾಗಿದೆ. ಭಾರವಾದ ಸರಕು ಸಾಗಣೆ ವಾಹನಗಳು ಬರುತ್ತವೆ. ಇದು ಪ್ರಮುಖ ರಾಜ್ಯ ಹೆದ್ದಾರಿ ಎನ್ನುವುದು ಕಡತಗಳಲ್ಲಿ ಮಾತ್ರ ಇದೆ. ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮುಖ್ಯತೆ ಬರುತ್ತಿಲ್ಲ. ಸಾರ್ವಜನಿಕರು ಪ್ರತಿದಿನ ಶಪಿಸುವಂತಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸಿರವಾರದ ನರಸಪ್ಪ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು