ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು | ರಿಮ್ಸ್‌ನಲ್ಲಿ ‘ಬಿ’ ಬ್ಲಾಕ್‌ಗೆ ಚಾಲನೆ: ಸೌಲಭ್ಯ ವಿಸ್ತರಣೆ

ರಿಮ್ಸ್‌ನಲ್ಲಿ ಒಳ, ಹೊರ ರೋಗಿಗಳ ಸಂಖ್ಯೆ ಹೆಚ್ಚಳ: ಆಂಧ್ರಪ್ರದೇಶ, ತೆಲಂಗಾಣದಿಂದಲೂ ಬರುವ ಜನ
Published 19 ಮೇ 2024, 7:53 IST
Last Updated 19 ಮೇ 2024, 7:53 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್)ಯ ಆಸ್ಪತ್ರೆಗೆ ದಾಖಲಾಗುವ ಒಳ ರೋಗಿಗಳ ಹಾಗೂ ಚಿಕಿತ್ಸೆಗೆ ಬರುವ ಹೊರ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವ ಕಾರಣ ರಿಮ್ಸ್ ಆವರಣದ ಪಕ್ಕದಲ್ಲಿ ಮತ್ತೊಂದು ಕಟ್ಟಡ ‘ಬಿ’ ಬ್ಲಾಕ್ ನಿರ್ಮಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಗೂ ಮುಂಚೆ ಮಾರ್ಚ್ 24ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಹೋಬಳಿಯ ಸಿರವಾರ ಕ್ರಾಸ್ ಬಳಿ ₹4,100 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ವರ್ಚ್ಯುವಲ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿದ್ದರು. ಇದೇ ವೇಳೆ ರಿಮ್ಸ್‌ನ ‘ಬಿ ಬ್ಲಾಕ್’ ಅನ್ನೂ ಉದ್ಘಾಟನೆ ಮಾಡಿದ್ದರು.

ಆದರೆ ಇಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ಸಣ್ಣಪುಟ್ಟ ಕಾರ್ಯ ಬಾಕಿ ಇದ್ದ ಕಾರಣ ಕೆಲಸ ಆರಂಭಿಸಿರಲಿಲ್ಲ. ಈಗ ಎಲ್ಲ ಕಾಮಗಾರಿ ಮುಗಿದಿರುವುದರಿಂದ ರಿಮ್ಸ್ ಆಡಳಿತ ಮಂಡಳಿ ನೂತನ ಕಟ್ಟಡದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾರಂಭಿಸಿದೆ.

‘ಬಿ’ ಬ್ಲಾಕ್ ಏಕೆ: ರಿಮ್ಸ್‌ ಆರಂಭವಾದಾಗ ಅಂದರೆ 2014ರಲ್ಲಿ ಆಸ್ಪತ್ರೆಯಲ್ಲಿ ಮೊದಲು ದಿನಕ್ಕೆ ಸರಾಸರಿ 700 ರೋಗಿಗಳ ನೋಂದಣಿ ಆಗುತ್ತಿತ್ತು. ಪ್ರಸ್ತುತ 1,000 ಜನರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಕೇವಲ 520 ಹಾಸಿಗೆಗಳ ವ್ಯವಸ್ಥೆ ಇತ್ತು. ಆನಂತರ ಅದನ್ನು 650ಕ್ಕೆ ಹೆಚ್ಚಿಸಲಾಯಿತು. ಈಗ ಇದೇ ಸ್ಥಳದಲ್ಲಿ ಹೆಚ್ಚುವರಿಯಾಗಿ ಒಟ್ಟು 800 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

ನೆರೆಯ ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಿಂದ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ 1000 ಹಾಸಿಗೆ ವ್ಯವಸ್ಥೆ ಮಾಡುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ‘ಬಿ’ ಬ್ಲಾಕ್ ಲೋಕಾರ್ಪಣೆ ಮಾಡಲಾಗಿದೆ ಎನ್ನುತ್ತಾರೆ ಆಸ್ಪತ್ರೆಯ ಅಧಿಕಾರಿಗಳು.

‘ರಿಮ್ಸ್ ಆಸ್ಪತ್ರೆಯ ಪಕ್ಕದಲ್ಲಿಯೇ ನಿರ್ಮಿಸಿದ ಬಿ ಬ್ಲಾಕ್ ಥೇಟ್ ಹಳೆ ಕಟ್ಟಡದ ವಿನ್ಯಾಸ ಹೊಂದಿದೆ. ಆದರೆ ಒಳಗೆ ಕೆಲವು ಬದಲಾವಣೆ ಮಾಡಲಾಗಿದೆ. ರೋಗಿಗಳಿಗೆ ಎಲ್ಲ ರೀತಿಯ ಸೌಲಭ್ಯ ದೊರಕುವಂತೆ ಮಾಡಲಾಗಿದೆ’ ಎಂದು ರಿಮ್ಸ್ ನಿರ್ದೇಶಕ ಡಾ.ರಮೇಶ ಬಿ ತಿಳಿಸುತ್ತಾರೆ.

ರೋಗಿಗಳಿಗೆ ಲಿಫ್ಟ್‌ ವ್ಯವಸ್ಥೆ ಮಾಡಿರುವುದು
ರೋಗಿಗಳಿಗೆ ಲಿಫ್ಟ್‌ ವ್ಯವಸ್ಥೆ ಮಾಡಿರುವುದು

ಹೊಸ ಬ್ಲಾಕ್‌ನಲ್ಲಿರುವ ಸೌಲಭ್ಯ

ನೆಲ ಮಹಡಿ ಹಾಗೂ ಮೊದಲ ಮಹಡಿ ಹೊಂದಿರುವ ನೂತನ ಕಟ್ಟಡದಲ್ಲಿ ಆಮ್ಲಜನಕ ಸೌಲಭ್ಯ ಹೊಂದಿದ 120  ಹಾಸಿಗೆಗಳ ವ್ಯವಸ್ಥೆ ಐಸಿಯು ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ಮನೋರೋಗಿಗಳ ಕೊಠಡಿ ಚರ್ಮ ರೋಗ ವೈದ್ಯಕೀಯ ವಿಭಾಗ (ವೈದ್ಯಶಾಸ್ತ್ರ) ಎಚ್‌ಐವಿ ಟಿ.ಬಿ ರೋಗಿಗಳ ನೋಂದಣಿ ಆಪ್ತ ಸಮಾಲೋಚಕರ ವಿಭಾಗ ಔಷಧಾಲಯ ನಾಲ್ಕು ದಿಕ್ಕುಗಳಿಗೆ ಬಾಗಿಲು ಶೌಚಾಲಯ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಅಂಗವಿಕಲರಿಗೆ ರ್‍ಯಾಂಪ್ ನಿರ್ಮಾಣ ಲಿಫ್ಟ್ ವ್ಯವಸ್ಥೆ ಸೇರಿ ಇತರೆ ಆಧುನಿಕ ಸೌಲಭ್ಯ ಒದಗಿಸಲಾಗಿದೆ.

ಸ್ಟಾಫ್ ನರ್ಸ್ ತಂತ್ರಜ್ಞರ ನೇಮಕ: ನೂತನ ಕಟ್ಟಡದಲ್ಲಿ ವೈದ್ಯರ ಕೊರತೆಯಿಲ್ಲ. 56 ಸ್ಟಾಫ್ ನರ್ಸ್ ಹಾಗೂ 40 ತಂತ್ರಜ್ಞರ ಅವಶ್ಯಕತೆ ಇದೆ. ನೇಮಕ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಆದರೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಜೂನ್ 4ರ ನಂತರ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗುವುದು. ಒಂದು ವಾರದೊಳಗೆ ರಕ್ತ ಪ್ರಯೋಗಾಲಯ ಎಕ್ಸ್ ರೇ ವಿಭಾಗದ ಅನುಕೂಲ ಮಾಡಿಕೊಡಲಾಗುವುದು ಎಂದು ಡಾ.ರಮೇಶ ಬಿ ಪ್ರತಿಕ್ರಿಯಿಸಿದರು.

‘ನೂತನ ಕಟ್ಟಡದಲ್ಲಿ ಯಾವ ವಿಭಾಗ ಎಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಫಲಕ ಹಾಕಬೇಕು. ಆಸ್ಪತ್ರೆಯ ಸುತ್ತಮುತ್ತ ಸಸಿ ಮರಗಳನ್ನು ಬೆಳೆಸಿ ತಂಪಿನ ವಾತಾವರಣ ನಿರ್ಮಿಸಬೇಕು. ಒಳ ರೋಗಿಗಳ ಸಂಬಂಧಿಕರಿಗೆ ರಾತ್ರಿ ವೇಳೆ ಉಳಿದುಕೊಳ್ಳಲು ಕೊಠಡಿಗಳ‌ ವ್ಯವಸ್ಥೆ ಮಾಡಬೇಕು’ ಎಂದು ಒಳರೋಗಿಯ ಸಂಬಂಧಿ ವೀರೇಶ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT