ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಹಿಜಾಬ್ ನಿರ್ಬಂಧ ವಿರೋಧಿಸಿ‌ ಮುಸ್ಲಿಂ ವ್ಯಾಪಾರಿಗಳಿಂದ ಅಂಗಡಿಗಳಿಗೆ ಬೀಗ

Last Updated 17 ಮಾರ್ಚ್ 2022, 7:56 IST
ಅಕ್ಷರ ಗಾತ್ರ

ರಾಯಚೂರು: ಹಿಜಾಬ್ ನಿರ್ಬಂಧ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಬೆಂಗಳೂರಿನ ಅಮಿರ್ ಎ ಶರಿಯಾದಿಂದ ಕರೆ ನೀಡಿದ್ದ 'ಕರ್ನಾಟಕ‌ ಬಂದ್'ಗೆ ಬೆಂಬಲ ‌ವ್ಯಕ್ತಪಡಿಸಿರುವ ರಾಯಚೂರು ಜಿಲ್ಲೆಯ ವ್ಯಾಪಾರಿಗಳು ಗುರುವಾರ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿಕೊಂಡಿದ್ದಾರೆ.

ರಾಯಚೂರಿನ ತೀನ್ ಕಂದಿಲ್, ಸರಾಫ್ ಬಜಾರ್, ಗಂಜ್ ಸೇರಿದಂತೆ ವಿವಿಧೆಡೆ ವ್ಯಾಪಾರಿಗಳು ಮಳಿಗೆ ಬಂದ್ ಮಾಡಿಕೊಂಡಿದ್ದಾರೆ.

ವಿಡಿಯೊಹಂಚಿಕೆ: ರಾಯಚೂರಿನ ಮುಸ್ಲಿಂ‌ ಮುಖಂಡ ಬಷೀರ್ ಅವರು ಬಂದ್ ಆಚರಿಸುವ ವಿಷಯವಾಗಿ ಜಿಲ್ಲೆಯ ಮುಸಲ್ಮಾನ‌ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಆನ್ ಲೈನ್ ನಲ್ಲಿ ಹಂಚಿಕೆಯಾಗಿದೆ.

'ಬೆಂಗಳೂರಿನ ಅಮಿರ್ ಎ ಶರಿಯಾ ನೀಡಿರುವ ಕರೆಗೆ ಜಿಲ್ಲೆಯ ಎಲ್ಲ ಮುಸ್ಲಿಂ‌ ವ್ಯಾಪಾರಿಗಳು ಬೆಂಬಲಿಸಿ ಮಾರ್ಚ್ 17 ರಂದು ವ್ಯಾಪಾರ ಬಂದ್ ಮಾಡಿಕೊಂಡು ಮನೆಯಲ್ಲೇ ಉಳಿದು ಆದೇಶದ ವಿರುದ್ಧ ಶೋಕ ವ್ಯಕ್ತಪಡಿಸಬೇಕು. ಹಿಜಾಬ್ ನಿರ್ಬಂಧನೆಯು ‌ಷರಿಯತ್ ಗೆ ವಿರುದ್ಧವಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಅಲ್ಲಿಯಾದರೂ ನಮ್ಮ ಹಕ್ಕು ರಕ್ಷಣೆ ಆಗುತ್ತದೆ ಎನ್ನುವ ವಿಶ್ವಾಸವಿದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಕೂಡಾ 17 ರಂದು ತರಗತಿಗೆ ಹೋಗದೆ ಮನೆಯಲ್ಲೇ ಉಳಿದು ಹಕ್ಕು ರಕ್ಷಿಸುವಂತೆ ಪ್ರಾರ್ಥನೆ ಮಾಡಬೇಕು. ಯಾವುದೇ ಮನವಿ ಸಲ್ಲಿಸುವುದು, ಹೋರಾಟ, ಮೆರವಣಿಗೆ ಮಾಡುವುದು‌ ಬೇಡ' ಎಂದು ವಿಡಿಯೋ‌ ಸಂದೇಶದಲ್ಲಿ ತಿಳಿಸಿದ್ದಾರೆ.

ಮಾಹಿತಿ ಗೊತ್ತಿಲ್ಲದೆ ಮಳಿಗೆ ತೆರೆದುಕೊಂಡಿದ್ದ ಮುಸ್ಲಿಂ ಕೆಲವು ವ್ಯಾಪಾರಿಗಳು, ಆನಂತರ ಬಂದ್ ಮಾಡಿಕೊಂಡರು.
ಹಣ್ಣು, ತರಕಾರಿ ಮಾರಾಟ ಮಾಡುವ ಮುಸ್ಲಿಮರು ಎಂದಿನಂತೆ ವ್ಯಾಪಾರದಲ್ಲಿ ತೊಡಗಿದ್ದಾರೆ. ಮಳಿಗೆ ಇದ್ದವರು ಬಂದ್ ಮಾಡಿಕೊಂಡಿದ್ದಾರೆ.

ಪಿಯುಸಿ ಪೂರ್ವ ಸಿದ್ಧತೆ ಪರೀಕ್ಷೆ ಬರೆಯುವುದಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಹಾಜರಾಗಿದ್ದರು. ಎಂದಿನಂತೆ ಮುಸ್ಲಿಂ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲಿಲ್ಲ. ಸಿಂಧನೂರು, ಮಾನ್ವಿ, ದೇವದುರ್ಗ ಹಾಗೂ ಲಿಂಗಸುಗೂರು ತಾಲ್ಲೂಕುಗಳಲ್ಲಿಯೂ ಮುಸ್ಲಿಂ‌ ವ್ಯಾಪಾರಿಗಳು ವಹಿವಾಟು ಬಂದ್ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT