ಗುರುವಾರ , ಆಗಸ್ಟ್ 18, 2022
25 °C
ವಿವಿಧೆಡೆಯಿಂದ ಚಿಂತಕರು, ಹೋರಾಟಗಾರರು ಭಾಗಿ

ಕರ್ನಾಟಕ ಜನಶಕ್ತಿ ರಾಜ್ಯ ಸಮ್ಮೇಳನಕ್ಕೆ ರಾಯಚೂರು ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ನಗರದಲ್ಲಿ ಜುಲೈ 3 ರಿಂದ ಎರಡು ದಿನಗಳವರೆಗೂ ನಡೆಯಲಿರುವ ಕರ್ನಾಟಕ ಜನಶಕ್ತಿ 3ನೇ ರಾಜ್ಯಸಮ್ಮೇಳನಕ್ಕೆ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪೂರ್ವಸಿದ್ಧತೆ ಮಾಡಲಾಗಿದೆ.

ಮಹಾರಾಷ್ಟ್ರದ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾದ್‌ ಅವರನ್ನು ಬಂಧಿಸಿರುವುದನ್ನು ಖಂಡಿಸಿ, ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಮೂಲಕವೇ ಈ ಸಮ್ಮೇಳನ ಉದ್ಘಾಟಿಸುತ್ತಿರುವುದು ವಿಶೇಷ. ಪೂರ್ವ ಯೋಜನೆಯ ಪ್ರಕಾರ, ಈ ಸಮ್ಮೇಳನದ ಉದ್ಘಾಟನೆಗೆ ತೀಸ್ತಾ ಸೆಟಲ್ವಾದ್‌ ಅವರು ಬರಬೇಕಿತ್ತು.

ಜುಲೈ 3 ರಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟನೆ ಜರುಗುವುದು. ಆನಂತರ ಸಂಸ್ಕೃತಿ ಚಿಂತಕ ಡಾ.ರಹಮತ್‌ ತರೀಕೆರೆ ಉದ್ಘಾಟನೆ ಭಾಷಣ ಮಾಡುವರು.  ವಕೀಲ ಕಾಂ.ಎಸ್‌.ಬಾಲನ್‌ ಅಧ್ಯಕ್ಷತೆ ವಹಿಸುವರು. ಸ್ವಾಗತ ಸಮಿತಿ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಅವರು ಸ್ವಾಗತಿಸುವರು. ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಕುಮಾರ ಸಮತಳ ಪ್ರಾಸ್ತಾವಿಕವಾಗಿ ಮಾತನಾಡುವರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಅಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಸೇರಿದಂತೆ ಅನೇಕ ಹೋರಾಟಗಾರರು ದಶಕದ ಪಯಣದ ಕುರಿತು ವಿಶೇಷ ಸಂದೇಶ.

ಮಧ್ಯಾಹ್ನ 2 ಗಂಟೆಗೆ ಪುಸ್ತಕ ಬಿಡುಗಡೆ ಗೋಷ್ಠಿ ನಡೆಯುವುದು. ರಮೇಶ ಗಬ್ಬೂರ್‌ ಅವರು ಬರೆದ ‘ಜನಮನದಂತೆ ಹಾಡುವೆ’ ಮತ್ತು ‘ಅಪರಿಮಿತ ಕತ್ತಲೆಯೊಳಗೆ ವಿಪರೀತದ ಬೆಳಕು’, ‘ಹಸಿರು ಹಾದಿಯ ಕಥನ’,  ನವೀನ್‌ ಸೂರಿಂಜೆಯವರ ’ನೇತ್ರಾವತಿಯಲ್ಲಿ ಉತ್ತಮ’ ಕೃತಿಗಳು ಬಿಡುಗಡೆಯಾಲಿವೆ. ಸಾಹಿತಿ ಗೊಲ್ಲಳ್ಳಿ ಶಿವಪ್ರಸಾದ್‌, ಹೋರಾಟಗಾರ ಪ್ರೊ.ನಗರಿ ಬಾಬಯ್ಯ, ಸಾಹಿತಿ ಪ್ರೊ.ಶಿವರಾಮಯ್ಯ, ಕವಿಗಳಾದ ದಾನಪ್ಪ ಸಿ.ನಿಲೋಗಲ್‌, ಅಂಬಣ್ಣ ಅರೋಲಿ, ವಾಲ್ಮೀಕಿ ಮಹಿಳಾ ಸಂಘ ಜಿಲ್ಲಾಧ್ಯಕ್ಷೆ ಡಾ.ಶಾರದಾ ಹುಲಿನಾಯಕ್‌, ಪ್ರಗತಿಪರ ಚಿಂತಕರಾದ ಲಾಲಪ್ಪ, ಎಂ.ಆರ್‌.ಭೇರಿ ಅವರು ಕೃತಿಗಳನ್ನು ಬಿಡುಗಡೆಗೊಳಿಸುವರು. ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಂಚಾಲಕ ಆರ್‌.ಮೋಹನ ರಾಜು ಸೇರಿದಂತೆ ಅನೇಕ ಚಿಂತಕರಿಂದ ವಿಶೇಷ ಸಂದೇಶ. 

ಮಧ್ಯಾಹ್ನ 3.15 ರಿಂದ ಅವಲೋಕನಾ ಗೋಷ್ಠಿ. ಪರಿಸರ ತಜ್ಞ ಕಲ್ಕುಳಿ ವಿಠ್ಠಲ ಹೆಗ್ಗಡೆ, ಕರ್ನಾಟಕ ಜನಶಕ್ತಿ ರಾಜ್ಯ ಪ್ರಧಾನಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಮಾತನಾಡುವರು. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಅಧ್ಯಕ್ಷತೆ ವಹಿಸುವರು. ಹೋರಾಟಗಾರ ರಾಘವೇಂದ್ರ ಕುಷ್ಠಗಿ ಸೇರಿದಂತೆ ಅನೇಕ ಹೋರಾಟಗಾರರು ವಿಶೇಷ ಸಂದೇಶ.

ಸಂಜೆ 6 ಗಂಟೆಗೆ ಜನಪ್ರಣಾಳಿ ಮಂಥನ ಗೋಷ್ಠಿ ನಡೆಯುವುದು. ಚಿಂತಕ ಪ್ರೊ.ಕೆ.ಫಣಿರಾಜ್‌, ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷ ನೂರ್‌ ಶ್ರೂಧರ್‌ ಮಾತನಾಡುವರು. ಜನಶಕ್ತಿ ರಾಜ್ಯ ಗೌರವಾಧ್ಯಕ್ಷ ಪ್ರೊ.ನಗರಗೆರೆ ರಮೇಶ್ ಅಧ್ಯಕ್ಷತೆ ವಹಿಸುವರು. ಆನಂತರ ಹೋರಾಟಗಾರರ ಸಂದೇಶ. ರಾತ್ರಿ 7.30 ಸಾಂಸ್ಕೃತಿಕ ಕಾರ್ಯಕ್ರಮ. ವಿಶೇಷ ಬಂಡಿಗಾಲಿ ತಮಟೆ ಪ್ರದರ್ಶನ ಹಾಗೂ ‘ಉಯ್‌ ದ ಪೀಪಲ್‌ ಆಫ್‌ ಇಂಡಿಯಾ‘ ವಿಚಾರಪೂರ್ಣ ನಾಟಕ ಪ್ರದರ್ಶನ ನಡೆಯುವುದು. 

ಜುಲೈ 4 ರಂದು ಬೆಳಿಗ್ಗೆ 9.30 ರಿಂದ ಜನಪ್ರಣಾಳಿ ಮಂಥನ ಗೋಷ್ಠಿ. ನವದೆಹಲಿಯ ಸಾಹಿತಿ ರಂಜನಾ ಮಾತನಾಡುವರು. ಆನಂತರ ಹೋರಾಟಗಾರರ ಸಂದೇಶ. ಬೆಳಿಗ್ಗೆ 11.30 ಕ್ಕೆ ಮುನ್ನೋಟ ಗೋಷ್ಠಿ. ಮಧ್ಯಾಹ್ನ 2.15ಕ್ಕೆ ಮುಂದಾಳತ್ವ ಆಯ್ಕೆ ಗೋಷ್ಠಿ, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯುವುದು. ರಾಷ್ಟ್ರೀಯ ಮಟ್ಟದ ಸಂಘಟನೆಗಳ ಮುಖಂಡರ ವಿಶೇಷ ಸಂದೇಶ. ಐಎಎಸ್‌ ಅಧಿಕಾರಿಯಾಗಿದ್ದ ಸಸಿಕಾಂತ್‌ ಸೆಂಥಿಲ್‌ ಸಮಾರೋಪ ಭಾಷಣ ಮಾಡುವರು. ಶಿಕ್ಷಣ ತಜ್ಞ ಪ್ರೊ.ಹರಗೋಪಾಲ್‌, ಹೋರಾಟಗಾರ ಹರ್ನೆಕ್‌ ಸಿಂಗ್‌, ಭಾಷಾ ತಜ್ಞ ಡಾ.ಗಣೇಶ್ ಎನ್‌.ದೇವಿ, ಟಿಯುಸಿಐ ರಾಜ್ಯಾಧ್ಯಕ್ಷ ಆರ್‌.ಮಾನಸಯ್ಯ, ಜನ ಚಿಂತನಾ ಕೇಂದ್ರ ಸಂಯೋಜಕಿ ಲಲಿತಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು