ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್ | ರಾಯಚೂರು ವಿವಿ; ಶಿಕ್ಷಣ ಸಂಸ್ಥೆಗಳಿಗೆ ಬೇಕಿದೆ ತಕ್ಷಣ ಅನುದಾನ

ಕಾಯಂ ಹುದ್ದೆಗಳ ಮಂಜೂರಾತಿಯಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆ
Last Updated 18 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ವಿಶ್ವವಿದ್ಯಾಲಯ ಹಾಗೂ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಗಳಿಂದ ಹಿಂದುಳಿದ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಆಗುತ್ತದೆ ಅಂದುಕೊಂಡಿದ್ದ ಜನರು ಭ್ರಮನಿರಸನಕ್ಕೆ ಒಳಗಾಗಿದ್ದಾರೆ. ಅನುದಾನಕ್ಕಾಗಿ ಸರ್ಕಾರದ ಮುಂದೆ ಅಂಗಲಾಚುವುದಕ್ಕೆ ಮತ್ತೆರಡು ವಿಷಯಗಳು ಸೇರ್ಪಡೆಗೊಂಡಿರುವುದನ್ನು ಬಿಟ್ಟರೆ, ಅವುಗಳಿಂದ ಯಾವುದೇ ಬದಲಾವಣೆ ಆಗಿಲ್ಲ.

ಸ್ವತಂತ್ರ ಕಾರ್ಯನಿರ್ವಹಣೆಗೆ ಅಗತ್ಯ ಅನುದಾನವಿಲ್ಲದೆ ಬಾಲಗ್ರಹ ಪೀಡಿತವಾಗಿ ಇವೆರಡು ಶಿಕ್ಷಣ ಸಂಸ್ಥೆಗಳು ಅಸ್ತಿತ್ವದಲ್ಲಿವೆ. ಅವುಗಳ ಮುಖ್ಯಸ್ಥರು ಸರ್ಕಾರದ ಕಚೇರಿಗಳಿಗೆ ಅಲೆದಾಡುವುದೇ ಪೂರ್ಣಾವಧಿ ಕೆಲಸವಾಗಿದೆ. ಗುಣಮಟ್ಟದ ಶಿಕ್ಷಣದ ಮೂಲಕ ಈ ಭಾಗದಲ್ಲಿ ಹೊಸ ಬೆಳಕು ಪಸರಿಸಲು ಈ ಬಾರಿಯಾದರೂ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ಘೋಷಿಸಬಹುದು ಎನ್ನುವ ನಿರೀಕ್ಷೆ ಆಳವಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ ಧ್ಯೇಯ ಇಟ್ಟುಕೊಂಡಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ವಹಿಸಿದೆ. ಆದರೆ, ರಾಯಚೂರು ವಿಶ್ವವಿದ್ಯಾಲಯ ಮತ್ತು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳಿಂದ ಸಲ್ಲಿಕೆಯಾಗಿರುವ ಬೇಡಿಕೆಗಳಿಗೆ ಮನ್ನಣೆಯನ್ನೇ ಕೊಡುತ್ತಿಲ್ಲ. ಕೆಕೆಆರ್‌ಡಿಬಿ ಕೂಡಾ ರಾಜಕಾರಣದ ಕಪಿಮುಷ್ಟಿಗೆ ಸಿಲುಕಿದೆ ಎಂಬುದು ಶಿಕ್ಷಣ ಪ್ರೇಮಿಗಳ ಆರೋಪ.

ಕೋವಿಡ್‌ ಮಹಾಮಾರಿ ಸಂಕಷ್ಟವಿದ್ದರೂ ಕೆಕೆಆರ್‌ಡಿಬಿಗೆ ಸರ್ಕಾರದಿಂದ ಅನುದಾನ ಬಂದಿದೆ. ನಿರೀಕ್ಷೆಗೆ ತಕ್ಕಂತೆ ಅನುದಾನ ವೆಚ್ಚವಾಗುತ್ತಿಲ್ಲ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದರು. ಆದರೆ, ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಸ್ಪಂದಿಸಿ ಅನುದಾನ ಒದಗಿಸುವ ಬಗ್ಗೆ ಜಿಲ್ಲೆಯ ರಾಜಕಾರಣಿಗಳು ಮನಸ್ಸು ಮಾಡುತ್ತಿಲ್ಲ. ಆಯಾ ಜಿಲ್ಲೆಯ ಶಾಸಕರು ಮತ್ತು ಜಿಲ್ಲಾಡಳಿತದ ಮೂಲಕ ಸಲ್ಲಿಕೆಯಾಗುವ ಪ್ರಸ್ತಾವನೆಗಳನ್ನು ಮಾತ್ರ ಕೆಕೆಆರ್‌ಡಿಬಿ ಪರಿಗಣಿಸುತ್ತದೆ.

’ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದಕ್ಕೆ ಹಾಗೂ ಸಂಶೋಧನೆ ಕೈಗೊಳ್ಳುವುದಕ್ಕೆ ಅನುದಾನ ಒದಗಿಸುವಂತೆ ಕೆಕೆಆರ್‌ಡಿಬಿಗೆ ಬೇಡಿಕೆ ಪತ್ರ ಸಲ್ಲಿಸುತ್ತಲೇ ಇದ್ದೇವೆ. ಈ ಬಗ್ಗೆ ರಾಜಕಾರಣಿಗಳಿಗೂ ಮನವಿ ಮಾಡಿದರೂ ಕೆಲಸವಾಗುತ್ತಿಲ್ಲ. ರಾಜ್ಯ ಸರ್ಕಾರವೇ ಅನುದಾನ ಕೊಡಬೇಕು‘ ಎನ್ನುತ್ತಾರೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT