ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು ವಿವಿ ಸಮಗ್ರ ಅಭಿವೃದ್ದಿಗೆ ನೀಲಿನಕ್ಷೆ ಸಿದ್ಧ -ಕುಲಪತಿ ಡಾ.ಹರೀಶ್‌

ವಿಶ್ವವಿದ್ಯಾಲಯದ ಕುಲಪತಿ ಮತ್ತು ಅಧಿಕಾರಿಗಳಿಂದ ವಿವರಣೆ
Last Updated 20 ಜನವರಿ 2023, 12:21 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ಯರಗೇರಾದಲ್ಲಿ 250 ಎಕರೆ ವಿಸ್ತಾರವುಳ್ಳ ರಾಯಚೂರು ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ವಾಸ್ತುಶಿಲ್ಪಿಗಳ ತಂಡವು ನೀಲಿನಕ್ಷೆ ಸಿದ್ಧಪಡಿಸಿಕೊಟ್ಟಿದೆ ಎಂದು ಕುಲಪತಿ ಡಾ.ಹರೀಶ್‌ ರಾಮಸ್ವಾಮಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ವಿಶ್ವವಿದ್ಯಾಲಯಕ್ಕೆ ಕುಲಪತಿ ಜವಾಬ್ದಾರಿ ವಹಿಸಿಕೊಂಡು ಎರಡು ವರ್ಷಗಳಾಗಿವೆ. ವಿಶ್ವವಿದ್ಯಾಲಯವನ್ನು ಅಭಿವೃದ್ಧಿ ಪಡಿಸಲು ಮತ್ತು ಅನುದಾನ ದೊರಕಿಸಲು ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಂಡಿಕೇಟ್‌ ಸದಸ್ಯರು ಹಾಗೂ ಮಾಧ್ಯಮಗಳು ಸಾಕಷ್ಟು ಪೂರಕವಾಗಿ ನಿಂತಿದ್ದಾರೆ ಎಂದರು.

2022–23ನೇ ಸಾಲಿನ ಬಜೆಟ್‌ನಲ್ಲಿ ವಿಶ್ವವಿದ್ಯಾಲಯದ ಮೂಲಸೌಕರ್ಯಗಳ ಅಭಿವೃದ್ಧಿಗೆ ₹15 ಕೋಟಿ ಅನುದಾನ ಘೋಷಿಸಲಾಗಿತ್ತು. ಅದರಂತೆ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಭಾಗದ ಕೊಠಡಿಗಳು, ಪ್ರಯೋಗಾಲಯ, ಪೀಠೋಪಕರಣಗಳು, ಒಳಾಂಗಣ ಅಭಿವೃದ್ಧಿಯ ಡಿಪಿಆರ್‌ ಸಿದ್ಧಪಡಿಸಿ ಸಲ್ಲಿಸಿರುವುದಕ್ಕೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಕಳೆದ ನವೆಂಬರ್‌ನಲ್ಲಿ ಅನುದಾನ ಕೂಡಾ ಬಿಡುಗಡೆಯಾಗಿದೆ. 175 ಕಾಯಂ ಹುದ್ದೆಗಳ ಪೈಕಿ 31 ಹುದ್ದೆಗಳಿಗೆ ಮೊದಲ ಹಂತದಲ್ಲಿ ಮಂಜೂರಾತಿ ಸಿಕ್ಕಿದೆ. ಬೋಧಕೇತರ 200 ಹುದ್ದೆಗಳ ಪೈಕಿ 36 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ತುಂಬಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ಕೆಕೆಆರ್‌ಡಿಬಿ ಅನುದಾನ: ವಿವಿಧ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ₹200 ಕೋಟಿ ಅನುದಾನಕ್ಕಾಗಿ ಪ್ರಸ್ತವನೆ ಸಲ್ಲಿಸಲಾಗಿತ್ತು. ಅದರಲ್ಲಿ ಸರ್ಕಾರವು ತನ್ನ ವಿವೇಚನಾ ಕೋಟಾದಡಿ ₹9.85 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ವಸತಿ ನಿಲಯಗಳಿಗೆ ಸುಸಜ್ಜಿತ ಅಡುಗೆ ಮನೆ, ಡೈನಿಂಗ್‌ ಟೇಬಲ್‌ ಸೆಟ್‌, ಇಡೀ ಕ್ಯಾಂಪಸ್‌ಗೆ ಸೋಲಾರ್‌ ವಿದ್ಯುತ್‌ದೀಪ, ಹೈಮಾಸ್ಟ್‌, ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು. ಗವರ್ನಮೆಂಟ್‌ ಇಲೆಕ್ಟ್ರಾನಿಕ್‌ ಮಾರ್ಕೆಟಿಂಗ್‌ (ಜಿಇಎಂ) ಮೂಲಕ ಅಗತ್ಯ ಸಲಕರಣೆಗಳ ಖರೀದಿಗಾಗಿ ಟೆಂಡರ್‌ ಹಾಕಲಾಗಿದೆ. ಇದೆಲ್ಲವೂ ಪಾರದರ್ಶಕವಾಗಿ ಇರಲಿದೆ. ಜಿಇಎಂ ಮೂಲಕ ಖರೀದಿಸುತ್ತಿರುವ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂದು ಬೆಂಗಳೂರಿನ ಅಧಿಕಾರಿಗಳು ಶ್ಲಾಘಿಸಿದ್ದಾರೆ ಎಂದು ಹೇಳಿದರು.

ಸುಧಾರಿತ ಕೃತಕ ಬುದ್ಧಿಮತ್ತೆ ಕೇಂದ್ರ (ಅಡ್ವಾನ‌ಸ್ಡ್‌ ಆರ್ಟಿಫಿಸಿಯಲ್‌ ಇಂಟಲಿಜೆನ್ಸ್‌ ಸೆಂಟರ್‌) ಸ್ಥಾಪಿಸುವುದಕ್ಕಾಗಿ ಕೆಕೆಆರ್‌ಡಿಬಿಗೆ ₹9.23 ಕೋಟಿ ಮೊತ್ತಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ. ದೇಶದ ವಿವಿಧ ಭಾಗಗಳ ಐಐಟಿ/ಐಐಎಸ್‌ಸಿ ಪರಿಣಿತರ ತಂಡವೊಂದನ್ನು ರಚಿಸಿದ್ದು, ಈ ಸಮಿತಿ ಸಲ್ಲಿಸುವ ವರದಿಯನ್ನು ಅನುದಾನಕ್ಕಾಗಿ ಜಿಲ್ಲಾಧಿಕಾರಿ ಮುಖಾಂತರ ಕೆಕೆಆರ್‌ಡಿಬಿಗೆ ಸಲ್ಲಿಸಲಾಗುವುದು. ಇದಲ್ಲದೆ ಶಾಸಕ ಬಸನಗೌಡ ದದ್ದಲ ಅವರು ಕೆಕೆಆರ್‌ಡಿಬಿಯಿಂದ ₹1 ಕೋಟಿ ಅನುದಾನವನ್ನು ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ನೀಡಿದ್ದಾರೆ ಎಂದು ತಿಳಿಸಿದರು.

ಕ್ಯಾಂಪಸ್‌ನಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ನಿಲಯಕ್ಕಾಗಿ ₹9 ಕೋಟಿ ಅನುದಾನವನ್ನು ಕೆಕೆಆರ್‌ಡಿಬಿ ಮಂಜೂರಿಗೊಳಿಸಿದೆ. ಇದಕ್ಕಾಗಿ ಪರಿಶಿಷ್ಟ ಪಂಗಡದ ಇಲಾಖೆಗೆ ಕ್ಯಾಂಪಸ್‌ನಲ್ಲಿ ಒಂದು ಎಕರೆ ಜಾಗವನ್ನು ನಿಯಮಾನುಸಾರ ವರ್ಗಾಯಿಸಲಾಗಿದೆ. ಸ್ನಾತಕೋತ್ತರ ಪುರುಷ ಮತ್ತು ಮಹಿಳಾ ವಸತಿ ನಿಲಯಗಳ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆಯು ವಹಿಸಿಕೊಳ್ಳುತ್ತಿದೆ. ಇದಕ್ಕಾಗಿ ಎರಡು ಎಕರೆ ಜಾಗವನ್ನು ಹೊಸ ವಸತಿ ನಿಲಯಗಳನ್ನು ನಿರ್ಮಿಸಲು ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರವು ಮಂಡಿಸಲಿರುವ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಈಗಾಗಲೇ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ ಎಂದರು.

ಸಿಂಡಿಕೇಟ್‌ ಸದಸ್ಯರಾದ ಶಿವಬಸಪ್ಪ ಮಾಲಿಪಾಟೀಲ, ಜಗದೀಶ, ಶಂಕರರೆಡ್ಡಿ, ಹಣಕಾಸು ಅಧಿಕಾರಿ ನಾಗರಾಜ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ರಾಘವೇಂದ್ರ ಫತೇಪೂರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT