ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹100 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣ ಅಭಿವೃದ್ಧಿ: ಸಚಿವ ಸೋಮಣ್ಣ ಭರವಸೆ

Published 3 ಸೆಪ್ಟೆಂಬರ್ 2024, 16:22 IST
Last Updated 3 ಸೆಪ್ಟೆಂಬರ್ 2024, 16:22 IST
ಅಕ್ಷರ ಗಾತ್ರ

ರಾಯಚೂರು: ‘ರಾಯಚೂರು ರೈಲು ನಿಲ್ದಾಣವನ್ನು ₹100 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಭರವಸೆ ನೀಡಿದರು.

ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಭಾರತ್ ಸ್ಟೇಷನ್ ಕಾಮಗಾರಿ ಪರಿಶೀಲನೆ ಸಂದರ್ಭ ಹಾಗೂ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ನಗರದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದರು.

‘ಮುಡಾ ಪ್ರಕರಣದಲ್ಲಿ ತಪ್ಪು ಮಾಡಿದವರು ನೀರು ಕುಡಿಯಲೇ ಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯವೇ ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಒಬ್ಬ ಮುತ್ಸದ್ಧಿ ರಾಜಕಾರಣಿ. ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆಯೋ, ಇಲ್ಲವೋ ಗೊತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಚರ್ಚಿಸುವ ಅಗತ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಮುಡಾ ಪ್ರಕರಣ ಅತ್ಯಂತ ಗಂಭೀರ ಹಾಗೂ ಆಳವಾಗಿದೆ. ನಾನು ಸಚಿವನಾಗಿದ್ದಾಗ ₹7,900 ನಿವೇಶನ ಮಾಡಿದ್ದೆ. ಆದರೆ, ರಾತ್ರೋರಾತ್ರಿ ನನ್ನನ್ನು ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ಮುಂದಿನ ಮೂರು ದಿನಗಳಲ್ಲಿ ಮುಡಾ ಪ್ರಕರಣದ ಎಲ್ಲವೂ ಬಹಿರಂಗವಾಗಲಿದೆ’ ಎಂದು ತಿಳಿಸಿದರು.

‘ಎಚ್‌.ಡಿ.ಕುಮಾರಸ್ವಾಮಿ ಯುಟರ್ನ್‌ ಹೊಡೆದಿಲ್ಲ. ಅದರ ಅಗತ್ಯವೂ ಇಲ್ಲ. ಕೋವಿಡ್‌ ಪ್ರಕರಣದ ತನಿಖೆ ಅಗತ್ಯವಿಲ್ಲ. ಅದು ಕಾಂಗ್ರೆಸ್‌ನ ಭಯಪಡಿಸುವ ತಂತ್ರ ಅಷ್ಟೇ’ ಎಂದು ಉತ್ತರಿಸಿದರು.

ಹೋರಾಟಗಾರರ ಮೈಕ್‌ ಕಸಿಯಲು ಯತ್ನಿಸಿದ ಸೋಮಣ್ಣ

ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವಂತೆ 845 ದಿನಗಳಿಂದ ನಗರದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತಿರುವ ಹೋರಾಟಗಾರರನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಭೇಟಿ ಮಾಡಿದರು.

ಏಮ್ಸ್‌ ಹೋರಾಟ ಸಮಿತಿ ಸಂಚಾಲಕ ಬಸವರಾಜ ಕಳಸ ಅವರು ‘ಏಮ್ಸ್‌ ಬೇಡಿಕೆ ಹಾಗೂ ಇದುವರೆಗಿನ ಹೋರಾಟದ ಕುರಿತು ಸಚಿವರಿಗೆ ವಿವರಿಸಲು ಮುಂದಾದರು. ಆಗ ಸಚಿವರು ‘ನೀವೇನು ಮಾತನಾಡುವುದು ಬೇಡ, ನಾನೇ ಮಾತನಾಡುವೆ’ ಎಂದು ಮೈಕ್ ಕಸಿಯಲು ಮುಂದಾದರು.

ಆಗ ಕಳಸ ಅವರು, ‘ನಾವು ಹೇಳುವುದನ್ನು ನೀವು ಕೇಳಲೇ ಬೇಕು. 845 ದಿನಗಳಿಂದ ಹೋರಾಟ ನಡೆಸಿದ್ದೇವೆ. ನಮ್ಮ ಬೇಡಿಕೆಗಳ ಬಗ್ಗೆ 10 ನಿಮಿಷ ಕೇಳುವ ತಾಳ್ಮೆಯೂ ನಿಮಗಿಲ್ಲವೆ?’ ಎಂದು ಗರಂ ಆದರು. ಇದರಿಂದಾಗಿ ಇಬ್ಬರ ನಡೆವೆಯೂ ಕೊಂಚ ಸಿಡಿಮಿಡಿಗೆ ಕಾರಣವಾಯಿತು. ಕಳಸ ಮಾತನಾಡುವಾಗ ಸೋಮಣ್ಣ ಮತ್ತೆ ಮೈಕ್‌ ಕಸಿಯಲು ಪ್ರಯತ್ನಿಸಿದರು.

ನಂತರ ಮಾತನಾಡಿದ ಸೋಮಣ್ಣ,‘ಹೋರಾಟಗಾರರಿಗೆ ತಾಳ್ಮೆ ಇರಬೇಕು. ರಾಯಚೂರಿಗೆ ಏಮ್ಸ್‌ ಮಂಜೂರು ಮಾಡುವ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡುವೆ’ ಎಂದು ಭರವಸೆ ಹೇಳಿದರು.

ಸೋಮಣ್ಣ ಅವರು ಮಾಜಿ ಶಾಸಕ ಶಿವನಗೌಡ ಒತ್ತಾಯದ ಮೇರೆ ಹೋರಾಟದ ಸ್ಥಳಕ್ಕೆ ಬಂದಿದ್ದರು. ಇನ್ನೊಂದು ಗುಂಪು ಸಚಿವರನ್ನು ಹೋರಾಟಗಾರರ ಸ್ಥಳಕ್ಕೆ ಸಚಿವರನ್ನು ಕರೆತರಲು ಆಸಕ್ತಿ ತೋರಿಸಿರಲಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಆಡಿಕೊಂಡರು.

ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯರು, ಮಾಜಿ ಸಂಸದ ಬಿ.ವಿ.ನಾಯಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT