ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು: ರೈಲ್ವೆ ಸ್ಟೇಷನ್ ರಸ್ತೆ ಸಂಚಾರ ಹೈರಾಣು!

ತೆಗ್ಗುದಿನ್ನೆಗಳಿಂದ ಕೂಡಿದ ರಸ್ತೆ: ₹9 ಕೋಟಿ ಬಿಡುಗಡೆಯಾಗಿದ್ದರೂ ಕೆಲಸ ಆರಂಭಕ್ಕೆ ವಿಳಂಬ
Published 23 ಆಗಸ್ಟ್ 2024, 4:46 IST
Last Updated 23 ಆಗಸ್ಟ್ 2024, 4:46 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಗಂಗಾವತಿ-ರಾಯಚೂರು ಮುಖ್ಯ ರಸ್ತೆಯಿಂದ ರೈಲ್ವೆ ಸ್ಟೇಷನ್‍ಗೆ ಹೋಗುವ ರಸ್ತೆಯು ತೆಗ್ಗುದಿನ್ನೆಗಳಿಂದ ಕೂಡಿದ್ದು, ಮಳೆ ಬಂದರೆ ಸಾಕು ಕೆಸರುಗದ್ದೆಯಂತೆ ಆಗಿರುವುದರಿಂದ ಪ್ರಯಾಣಿಕರು, ವಾಹನ ಸವಾರರು ಸಂಚರಿಸಲು ಹೈರಾಣು ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿಂಧನೂರಿಗೆ ರೈಲ್ವೆ ಸೌಕರ್ಯ ಭಾಗ್ಯ ಬಹುದಿನಗಳ ನಂತರ ಲಭಿಸಿದೆ. ಆದರೆ, ಸ್ಟೇಷನ್‍ಗೆ ಹೋಗುವ ಒಂದುವರೆ ಕಿಲೋ ಮೀಟರ್ ರಸ್ತೆ ಅತ್ಯಂತ ಕೆಟ್ಟ ರೀತಿಯಲ್ಲಿ ಹದಗೆಟ್ಟಿದ್ದು, ಸಾರ್ವಜನಿಕ ಸಂಚಾರ ಯಾತನಾಮಯವಾಗಿದೆ. ಈ ಮೊದಲು ತೆಗ್ಗುದಿನ್ನೆಗಳು ಇದ್ದುದರಿಂದ ಬೈಕ್, ಕಾರು, ಆಟೊ ಮತ್ತಿತರ ವಾಹನಗಳನ್ನು ಚಲಾಯಿಸಲು ಹರಸಾಹಸ ಪಡಬೇಕಾಗಿತ್ತು. ಈಗ ಮಳೆಯಾಗಿದ್ದು, ತೆಗ್ಗುಗಳಲ್ಲಿ ನೀರು ನಿಂತಿರುವುದರಿಂದ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಿದೆ.

ಹುಬ್ಬಳ್ಳಿಯಿಂದ ಸಿಂಧನೂರಿಗೆ ಬರುವ ಪ್ರಯಾಣಿಕರು ರಾತ್ರಿ ಸಮಯದಲ್ಲಿ ರೈಲ್ವೆ ಸ್ಟೇಷನ್‍ನಲ್ಲಿ ಇಳಿದು ಮುಖ್ಯರಸ್ತೆಗೆ ಬರಬೇಕಾದರೆ ಅರ್ಧ ತಾಸಿಗಿಂತ ಹೆಚ್ಚು ಸಮಯ ಬೇಕಾಗುತ್ತದೆ. ಕಪ್ಪು ಮಣ್ಣಿನ ರಸ್ತೆಯಾಗಿರುವುದರಿಂದ ಹಲವು ವಾಹನಗಳು ರಸ್ತೆಯಲ್ಲಿ ಸಿಕ್ಕು ಬೀಳುತ್ತಿವೆ. ದ್ವಿಚಕ್ರ ವಾಹನಗಳ ಸವಾರರಂತೂ ಈ ರಸ್ತೆಯಲ್ಲಿ ಬಿದ್ದು ಎದ್ದು ಹೋಗುವ ದುಸ್ಥಿತಿಯಿದೆ.

ರೈಲ್ವೆ ಸ್ಟೇಷನ್ ಉದ್ಘಾಟನೆಗೆ ಪೂರ್ವದಲ್ಲಿಯೇ ಕೂಡಲೇ ರಸ್ತೆಯನ್ನು ನಿರ್ಮಾಣ ಮಾಡುವಂತೆ ಆಗಿನ ಸಂಸದರಾಗಿದ್ದ ಕರಡಿ ಸಂಗಣ್ಣ ಮತ್ತು ಶಾಸಕ ಹಂಪನಗೌಡ ಬಾದರ್ಲಿ ಅವರು ಹೇಳಿದರೂ ಸಹ ಪ್ರತಿಫಲ ಮಾತ್ರ ಶೂನ್ಯವಾಗಿದೆ ಎಂದು ವರ್ತಕರ ಸಂಘದ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

’ರಾತ್ರಿ 11 ಗಂಟೆಗೆ ಹುಬ್ಬಳ್ಳಿಯಿಂದ ಸಿಂಧನೂರಿಗೆ ಬರುವ ರೈಲು ಬಂದು ನಿಂತರೆ ಸಾಕು. ಅದ್ಹೇಗೆ ಗಂಗಾವತಿ-ರಾಯಚೂರು ರಸ್ತೆಯನ್ನು ಮುಟ್ಟಬೇಕೆನ್ನುವುದೇ ಸಾರ್ವಜನಿಕರಿಗೆ ದೊಡ್ಡ ಚಿಂತೆಯಾಗುತ್ತದೆ. ಆಟೊ, ಟ್ಯಾಕ್ಸಿ ಗಾಡಿಗಳಿಗೆ ಎರಡು ನೂರು ರೂಪಾಯಿಗಳಿಗಿಂತ ಹೆಚ್ಚಿಗೆ ಹಣ ಕೊಟ್ಟು ವಾಲಾಡುತ್ತಾ ಬರಬೇಕಿದೆ’ ಎನ್ನುತ್ತಾರೆ ಸಾಹಿತಿ ಶಂಕ್ರಯ್ಯ ಮಠ.

’ರಸ್ತೆ ದಯನೀಯ ಸ್ಥಿತಿಯಲ್ಲಿ ಹದಗೆಟ್ಟಿರುವುದರಿಂದ ರೈಲ್ವೆ ಮುಖಾಂತರ ಬೆಂಗಳೂರು ಮತ್ತು ಹುಬ್ಬಳ್ಳಿಗೆ ಹೋಗುವುದನ್ನೇ ಬಿಟ್ಟಿದ್ದೇವೆ’ ಎನ್ನುತ್ತಾರೆ ಗೌತಮ್ ಶೇಠ್.

ರೈಲ್ವೆ ಸ್ಟೇಷನ್ ಪ್ರಾರಂಭವಾಗುವುದಕ್ಕಿಂತ ಪೂರ್ವದಲ್ಲಿಯೇ ರಸ್ತೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಕೆಲವೇ ದಿನಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗುತ್ತಿದೆ ಎಂದು ಆಗಿನ ಸಂಸದರು ಹೇಳಿದ್ದರು. ಇಲ್ಲಿಯವರೆಗೆ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗದಿರುವುದನ್ನು ಗಮನಿಸಿದರೆ ಅವರು ಕೂಡ ಸುಳ್ಳು ಹೇಳಿದ್ದಾರೆ ಎಂದು ಭಾವಿಸಬೇಕಾಗಿದೆ.

’ಸಂಸದರಾಗಿ ಆಯ್ಕೆಯಾಗಿರುವ ರಾಜಶೇಖರ್ ಹಿಟ್ನಾಳ್ ಅವರು ರೈಲ್ವೆ ಪ್ರಯಾಣಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು’ ಎಂದು ಸಿಪಿಐಎಂಎಲ್ ಲಿಬರೇಶನ್ ಪಾರ್ಟಿಯ ಜಿಲ್ಲಾ ಘಟಕದ ಕಾರ್ಯದರ್ಶಿ ನಾಗರಾಜ್ ಪೂಜಾರ್ ಒತ್ತಾಯಿಸಿದ್ದಾರೆ.

’ರೈಲ್ವೆ ಉದ್ಘಾಟನಾ ಸಮಯದಲ್ಲಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಹಾಜರಿದ್ದರು. ರಸ್ತೆಯನ್ನು ಕಣ್ಣಾರೆ ಕಂಡಿದ್ದಾರೆ. ಆದರೂ ಇಲ್ಲಿಯವರೆಗೆ ಹದಗೆಟ್ಟಿರುವ ರಸ್ತೆ ನಿರ್ಮಾಣದ ಬಗ್ಗೆ ಕಿಂಚಿತ್ತು ಗಮನ ಹರಿಸದೆ ನಿಷ್ಕಾಳಜಿ ವಹಿಸಿರುವುದು ಖಂಡನೀಯ. ತಕ್ಷಣವೇ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಎಐಟಿಯುಸಿ ಮುಖಂಡರಾದ ಬಾಷುಮಿಯಾ, ವೆಂಕನಗೌಡ ಗದ್ರಟಗಿ ಮತ್ತು ಚಂದ್ರಶೇಖರ್ ಕ್ಯಾತ್ನಟ್ಟಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT