ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡುಗು ಸಹಿತ ಮಳೆ: ಮನೆಗಳಿಗೆ ನುಗ್ಗಿದ ನೀರು

Last Updated 2 ಆಗಸ್ಟ್ 2022, 12:51 IST
ಅಕ್ಷರ ಗಾತ್ರ

ಮಸ್ಕಿ: ಪಟ್ಟಣದಲ್ಲಿ ಸೋಮವಾರ ತಡರಾತ್ರಿಯಿಂದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಮಂಗಳವಾರ ಬೆಳಿಗ್ಗೆ ಹಾಲು, ತರಕಾರಿ ಖರೀದಿಸಲು ಸಾರ್ವಜನಿಕರು ಪರದಾಡಿದರು.

ರಾತ್ರಿ 2 ಗಂಟೆಗೆ ಆರಂಭವಾದ ಮಳೆ ಮಂಗಳವಾರ ಕೂಡ ಸತತವಾಗಿ ಸುರಿಯಿತು. ಕಟ್ಟೆ ದುರ್ಗಾದೇವಿ ದೇವಸ್ಥಾನದ ಬಳಿ ಅರೆಬರೆ ಚರಂಡಿ ನಿರ್ಮಾಣ ಮಾಡಿದ ಕಾರಣ ರಸ್ತೆ ಮೇಲೆ 3 ಅಡಿಗಳಷ್ಟು ನೀರು ಹರಿಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಕಷ್ಟಕ್ಕೆ ಸಿಲುಕಿದರು. ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಸವೇಶ್ವರ ನಗರದಲ್ಲಿ ಈಚೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಆದ್ದರಿಂದ ಬೆಟ್ಟದಿಂದ ಹರಿದು ಬಂದ ನೀರು ಮುಂದೆ ಹೋಗದೆ ನಿಂತಿತು. ರಸ್ತೆ ಪಕ್ಕದ ಬಿಜೆಪಿ ಕಚೇರಿಗೆ ನೀರು ನುಗ್ಗಿದೆ. ತಹಶೀಲ್ದಾರ್ ಕಚೇರಿ ಹಾಗೂ ಪುಟ್ಟರಾಜ ಉದ್ಯಾನ ಜಲಾವೃತಗೊಂಡಿವೆ. ಕಾಂಗ್ರೆಸ್ ಕಚೇರಿ ಸುತ್ತಮುತ್ತ ನೀರು ಸಂಗ್ರಹವಾಗಿದೆ. ಭಾರತ ಪೆಟ್ರೋಲ್‌ ಪಂಪ್‌ಗೆ ನೀರು ನುಗ್ಗಿದೆ.

ಬೆಟ್ಟದಿಂದ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಬಡಾವಣೆ ಮಾಲೀಕರು ಮಳೆ ನೀರು ಹೋಗುವ ಚರಂಡಿ ಬಂದ್ ಮಾಡಿದ್ದಾರೆ. ಕಾರಣ ಬಸವೇಶ್ವರ ನಗರದ ಅನೇಕ ಮನೆಗಳಲ್ಲಿ ನೀರು ನಿಂತಿದೆ.

ಸೋಮನಾಥ ನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಗಾಂಧಿ ನಗರ, ರಾಮಕೃಷ್ಣ ಕಾಲೊನಿ ಸೇರಿ ಮುಂತಾದ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ ಕಾರಣ ಜನರು ಪರದಾಡಿದರು.

ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ನೇತೃತ್ವದಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಮಳೆಯಲ್ಲೂ ಚರಂಡಿ ಸ್ವಚ್ಚಗೊಳಿಸಿ ನೀರು ಮುಂದಕ್ಕೆ ಹರಿದು ಹೋಗುವಂತೆ ಮಾಡಿದರು.

ಜಾಲಹಳ್ಳಿಯಲ್ಲಿ ಜನಜೀವನ ಅಸ್ತವ್ಯಸ್ತ

ಜಾಲಹಳ್ಳಿ: ಪಟ್ಟಣದಲ್ಲಿ ಮಂಗಳವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ನೀರು ಮನೆಗಳಿಗೆ ನುಗ್ಗಿತು. ಜನರು ಸಂಕಷ್ಟ ಅನುಭವಿಸಿದರು.

ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ವಸತಿ ನಿಲಯದ ಕಟ್ಟಡಗಳಿಗೆ ನೀರು ನುಗ್ಗಿದೆ.

ವಸತಿ ನಿಲಯದ ಪಕ್ಕದಲ್ಲಿರುವ ಗುರು ಸಿದ್ದಮ್ಮ ಕಾಲೊನಿಯಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇಲ್ಲಿ ವರ್ಷದ 12 ತಿಂಗಳೂ ನೀರು ನಿಂತಿರುತ್ತದೆ. ಇದು ತಗ್ಗು ಪ್ರದೇಶದಲ್ಲಿರುವುದೇ ಇದಕ್ಕೆ ಕಾರಣ.

‘2011-12ನೇ ಸಾಲಿನಲ್ಲಿ ₹4 ಕೋಟಿ ವೆಚ್ಚದಲ್ಲಿ ರಾಜ ಕಾಲುವೆ ನಿರ್ಮಿಸಲಾಗಿದೆ. ಅದನ್ನು ಸ್ವಚ್ಛ ಮಾಡಿಲ್ಲ. ಆದ್ದರಿಂದ ಕಾಲುವೆಯಲ್ಲಿ ಗಿಡ–ಗಂಟಿ ಬೆಳೆದು ನೀರು ಹರಿದು ಹೋಗದೆ ಕಾಲೊನಿಯಲ್ಲಿ ಸಂಗ್ರಹವಾಗುತ್ತದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಕಾಲೊನಿಯ ನಿವಾಸಿ ಮಲ್ಲಪ್ಪ ಇನಾಂದಾರ್ ಆರೋಪಿಸಿದರು.

ಪಟ್ಟಣದ ಗಂಗಾನಗರದಲ್ಲಿ ತಿಮ್ಮನಗುಡ್ಡದಿಂದ ಹರಿದು ಬರುವ ಮಳೆ ನೀರು ಹಾಗೂ ಗಾಜಲದಿನ್ನಿ ಹಳ್ಳದ ನೀರು ಮನೆಗಳಿಗೆ ನುಗ್ಗಿದೆ. ಹಳ್ಳದ ನೀರು ಸರಾಗವಾಗಿ ವ್ಯವಸ್ಥೆ ಮಾಡಲಾಗಿತ್ತು. ಅದರೆ, ಈಚೆಗೆ ಹಳ್ಳದ ಎರಡು ದಂಡೆಗೆ ಗೋಡೆ ನಿರ್ಮಿಸಿ ಅದನ್ನು ಚರಂಡಿಯಾಗಿ ಮಾರ್ಪಡಿಸಲಾಗಿದೆ. ಅದರಲ್ಲಿ ಹೊಳು ತುಂಬಿ ನೀರು ಮನೆಗಳಿಗೆ‌ ನುಗ್ಗಿದೆ. ಅಲ್ಲದೆ, ಪ್ರವಾಸಿ ಮಂದಿರದ ಅವರಣದಲ್ಲೂ ನೀರು ಸಂಗ್ರಹವಾಗಿದೆ.

ಪಟ್ಟಣದಲ್ಲಿ ನಿರ್ಮಾಣವಾಗಿರುವ ಹೊಸ ಬಡಾಣೆಗಳಿಗೆ ಮಾಲೀಕರು ಮೂಲ ಸೌಕರ್ಯ ಒದಗಿಸಿಲ್ಲ. ಆದರೂ ನಾಗರಿಕರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ನೀರು ನುಗ್ಗಿದಾಗ ಗ್ರಾ.ಪಂ ಅಧಿಕಾರಿಗಳಿಗೆ ಶಾಪ ಹಾಕಲಾಗುತ್ತದೆ ಎಂದು ಜನ ದೂರಿದರು.

ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಪಟ್ಟಣದ ವಾರ್ಡ್‌ಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾ.ಪಂ ಸದಸ್ಯ ಮಕ್ತೂಮ್ ಪಾರಶಿ ಒತ್ತಾಯಿಸಿದ್ದಾರೆ.

ಕವಿತಾಳ: ರಸ್ತೆ ಮೇಲೆ ಹರಿದ ನೀರು

ಕವಿತಾಳ: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದೆ.

ಸತತ ಎರಡು ತಾಸು ಸುರಿದ ರಭಸದ ಮಳೆಗೆ ಹಲವು ರಸ್ತೆಗಳ ಮೇಲೆ ನೀರು ಹರಿಯಿತು. ಸಂಚಾರಕ್ಕೆ ತೊಂದರೆಯಾಯಿತು. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಯಿತು.

ಇಲ್ಲಿನ ಶಿವಪ್ಪತಾತನ ಮಠದ ಪಕ್ಕದ ಚರಂಡಿ ತುಂಬಿ ಹರಿದ ಪರಿಣಾಮ ರಸ್ತೆಯಲ್ಲಿ ನೀರು ಹರಿದು ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸಿದರು.

‘ಮಸ್ಕಿ ತಾಲ್ಲೂಕಿನ ಹಾಲಾಪುರದಲ್ಲಿ ಹಳ್ಳದ ಹೊಸ ಸೇತುವೆ ಕಿತ್ತುಹೋದ ಪರಿಣಾಮ ಮಳೆ ನೀರು ಊರೊಳಗೆ ನುಗ್ಗಿದೆ. ಕರಿಯಪ್ಪ ತಾತನ ದೇವಸ್ಥಾನ ಹಾಗೂ ಜಾತ್ರೆ ಕಾರಣಕ್ಕೆ ಹಾಕಿದ್ದ ಅಂಗಡಿಗಳಿಗೆ ನೀರು ನುಗ್ಗಿ ವ್ಯಾಪಾರಸ್ಥರು ನಷ್ಟ ಅನುಭವಿಸುಂತಾಯಿತು’ ಎಂದು ಗ್ರಾಮದ ಸಿದ್ದಾರ್ಥ ಪಾಟೀಲ ಹೇಳಿದರು.

‘ಸಿರವಾರ ತಾಲ್ಲೂಕಿನ ಬಾಗಲವಾಡ ಗ್ರಾಮದ 7ನೇ ವಾರ್ಡ್‌ನಲ್ಲಿ ವಾಸಿಸುತ್ತಿರುವ ಅಲೆಮಾರಿ ಕುಟುಂಬಗಳ ಗುಡಿಸಲುಗಳಿಗೆ ನೀರು ನುಗ್ಗಿ ದವಸ–ಧಾನ್ಯ, ಬಟ್ಟೆಗಳು ಹಾಳಾಗಿವೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡರು.

ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ರಕ್ಷಣೆ

ಹಟ್ಟಿಚಿನ್ನದಗಣಿ: ಪಟ್ಟಣ ಸೇರಿ ಗ್ರಾಮೀಣ ಪ್ರದೇಶದಲ್ಲಿ ಸೋಮವಾರ ರಾತ್ರಿ 62 ಮಿ.ಮೀ ಮಳೆ ಸುರಿದಿದೆ.

ಪಟ್ಟಣದ ವಿವಿಧ ಕಾಲೊನಿಗಳ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು.

‘ಪ್ರತಿ ಬಾರಿ ಸುರಿದಾಗ ಇದೇ ಸ್ಥಿತಿ ನಿರ್ಮಾಣವಾಗುತ್ತದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸುತ್ತಿಲ್ಲ’ ಎಂದು ಅಂಬೇಡ್ಕರ್ ನಗರ ನಿವಾಸಿ ಬಸವಲಿಂಗಪ್ಪ ಹಾಗೂ ಇತರರು ದೂರಿದರು.

ಅಬ್ದುಲ್ಲಾ ಕಾಲೊನಿಯ ನಾಲೆ ನೀರು ಸೇತುವೆ ಮೇಲೆ ಹರಿಯಿತು. ವ್ಯಕ್ತಿಯೊಬ್ಬರು ಸೇತುವೆ ದಾಟಲು ಹೋಗಿ ನಾಲೆಯೊಳಗೆ ಕೊಚ್ಚಿ ಹೋಗು ತ್ತಿದ್ದರು. ಇದನ್ನು ಗಮನಿಸಿದ ಸಂಗೀತಂ ಎಂಬುವ ಯುವಕ ನಾಲೆಯೊಳಗೆ ಇಳಿದು ಆತನನ್ನು ರಕ್ಷಣೆ ಮಾಡಿದ್ದಾರೆ.

ಮೇದಿನಾಪುರ ಹಾಗೂ ಗುಡದನಾಳ ಹಳ್ಳಗಳು ತುಂಬಿ ಸೇತುವೆ ಮೇಲೆ ನೀರು ಹರಿಯಿತು. ಹಟ್ಟಿ–ಲಿಂಗಸುಗೂರು ಸಂಪರ್ಕ ಕೆಲಕಾಲ ಕಡಿತಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT