ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಗೆಮಡುವಿನ ‘ಸಂಗೀತಯಾನ’

ಶಾಸ್ತ್ರಿಯ ಸಂಗೀತ, ಗಮಕ ಕಲೆಯಲ್ಲಿ ಎಂ.ಖಾಸೀಮ್ ಸಾಧನೆ
ಬಸವರಾಜ ಭೋಗಾವತಿ
Published 21 ಜನವರಿ 2024, 6:21 IST
Last Updated 21 ಜನವರಿ 2024, 6:21 IST
ಅಕ್ಷರ ಗಾತ್ರ

ಮಾನ್ವಿ: ಜಾನಪದ, ಪೌರಾಣಿಕ, ದಾಸ ಸಾಹಿತ್ಯ, ಭಕ್ತ ಸಾಹಿತ್ಯ, ವನಚ ಸಾಹಿತ್ಯ... ಯಾವುದೇ ತರಹದ ಸಂಗೀತವಿರಲಿ  ಎಂ.ಖಾಸೀಮ್ ಮಲ್ಲಿಗೆಮಡುವು ಅವರ ಕಂಠದಿಂದ ಹಕ್ಕಿಯ ಹಾಡಿನಂತೆ ಹೊರಬರುತ್ತವೆ.

ಎಸ್ಸೆಸ್ಸೆಲ್ಸಿ ಪಾಸಾಗುತ್ತಲೇ ಸಂಗೀತ ಕ್ಷೇತ್ರದಲ್ಲಿ ಸಾಧಿಸುವ ಗುರಿಯೊಂದಿಗೆ ಯಾರ ಪರಿಚಯವೂ ಇಲ್ಲದೆ ಬೆಂಗಳೂರಿಗೆ ತೆರಳಿದ್ದ ಮಲ್ಲಿಗೆಮಡುವು ಗ್ರಾಮದ ಮೆಹಬೂಬಿ, ಬಾಬುಸಾಬ್ ಅವರ ಏಕೈಕ ಪುತ್ರ ಎಂ.ಖಾಸೀಮ್ ಈಗ ಸಂಗೀತ, ಗಮಕ ವಿದ್ವಾನ್.

ಸ್ವಗ್ರಾಮ ಹಾಗೂ ಸಂಗಾಪುರದಲ್ಲಿ ಪ್ರಾಥಮಿಕ ಶಿಕ್ಷಣ, ಮಾನ್ವಿ ಹಾಗೂ ಬಲ್ಲಟಗಿ  ಗ್ರಾಮದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಫ್ರೌಢ ಶಿಕ್ಷಣ ಪೂರೈಸಿದ ಎಂ.ಖಾಸೀಮ್ 2003ರಲ್ಲಿ ಎಸ್ಸೆಸ್ಸೆಲ್ಸಿ ಪಾಸಾಗಿ ಬೆಂಗಳೂರಿಗೆ ತೆರಳಿದ್ದರು. ಹಲವು ಖಾಸಗಿ ಕಂಪನಿ, ಸಂಸ್ಥೆಗಳಲ್ಲಿ ಸಣ್ಣಪುಟ್ಟ ನೌಕರಿ ಗಿಟ್ಟಿಸಿಕೊಂಡು ಬದುಕು ಸಾಗಿಸುತ್ತಲೇ ಸಂಗೀತವನ್ನು ತಪಸ್ಸಿನಂತೆ ಅಭ್ಯಾಸ ಮಾಡಿದರು.

ಸಂಗೀತ ಶಿಕ್ಷಣ: ಎಂ.ಖಾಸೀಮ್ ಅವರು ವಿದ್ವಾನ್ ಎಂ.ಜಿ.ವೆಂಕಟರಾಘವನ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿ, ವಿದ್ವಾನ್ ಎಂ. ಆರ್. ಸತ್ಯನಾರಾಯಣ ಮಾರ್ಗದರ್ಶನದಲ್ಲಿ ಗಮಕ ವಾಚನ ಅಭ್ಯಾಸ ಮಾಡಿದ್ದಾರೆ.

‘ಗಮಕ ಪ್ರೌಢ‘ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ‘ಗಮಕ ಕಾಜಾಣ’ದಲ್ಲಿ ದ್ವಿತೀಯ ಸ್ಥಾನ ಪಡಿದಿದ್ದಾರೆ. ಗಾಯಕಿ ಮಂಜುಳಾ ಗುರುರಾಜ್‌ ಅವರ ಸಂಸ್ಥೆಯಲ್ಲಿ ಚಿತ್ರ ಸಂಗೀತ ಕುರಿತು ವೃತ್ತಿಪರ ಸಂಗೀತ ಶಿಕ್ಷಣ ಪಡೆದಿದ್ದಾರೆ.

ಎಂ.ಖಾಸೀಮ್ ಮಲ್ಲಿಗೆಮಡುವು ಪ್ರಸ್ತುತ ಬೆಂಗಳೂರಿನಲ್ಲಿ ‘ವಿಶ್ವಮಾನವ ಸಂಗೀತಯಾನ’ ಸಂಸ್ಥೆ ಸ್ಥಾಪಿಸಿ ಸಂಗೀತ ಹಾಗೂ ಗಮಕ ಕಲೆಯ ಶಿಕ್ಷಣ ನೀಡುತ್ತಿದ್ದಾರೆ. ಬೆಂಗಳೂರು ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದ ‘ಬಿ’ ಗ್ರೇಡ್ ಕಲಾವಿದರಾಗಿದ್ದಾರೆ.

ಹಲವು ರಾಜ್ಯಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಂ.ಖಾಸೀಮ್ ಅವರು ಸಂಗೀತ ಗಾಯನ ಪ್ರದರ್ಶಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ, ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ನಾಡಿನ ಹಲವು ಸಂಘ ಸಂಸ್ಥೆಗಳು ಎಂ.ಖಾಸೀಮ್ ‌ಮಲ್ಲಿಗೆಮಡುವು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.

ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಮಕ ವಾಚನ ಮಾಡುತ್ತಿರುವ ಎಂ.ಖಾಸೀಮ್ ಮಲ್ಲಿಗೆಮಡುವು (ಎಡಗಡೆ ಇರುವವರು)
ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಮಕ ವಾಚನ ಮಾಡುತ್ತಿರುವ ಎಂ.ಖಾಸೀಮ್ ಮಲ್ಲಿಗೆಮಡುವು (ಎಡಗಡೆ ಇರುವವರು)

‘ಗಮಕ’ದಲ್ಲಿ ಎತ್ತಿದ ಕೈ ಕರ್ನಾಟಕ ಶಾಸ್ತ್ರೀಯ ಸಂಗೀತ ದಾಸಸಾಹಿತ್ಯ ವಚನ ಸಾಹಿತ್ಯ ಭಕ್ತಿಗೀತೆ ಮಂಕುತಿಮ್ಮನ ಕಗ್ಗ ಸುಗಮ ಸಂಗೀತ ರಂಗಗೀತೆ ತತ್ವಪದ ಜಾನಪದ ಪರಿಸರ ಗೀತೆ ಚಿತ್ರಗೀತೆ ಕನ್ನಡದ ಸಮಗ್ರ ಸಾಹಿತ್ಯವನ್ನೂ ಸಂಗೀತಕ್ಕೆ ಬೆರೆಸಿ ಹಾಡುವ ಕಲೆ ಎಂ.ಖಾಸೀಮ್ ಅವರಿಗೆ ಕರಗತವಾಗಿದೆ. ಕುಮಾರವ್ಯಾಸ ಭಾರತ ಜೈಮಿನಿ ಭಾರತ ಸಂಸ್ಕೃತ ಮಹಾಕಾವ್ಯ ತೊರವೆ ರಾಮಾಯಣ ಸಂಸ್ಕೃತ ಪಂಚಮಹಾಕಾವ್ಯ ಹರಿಭಕ್ತಿಸಾರ ನಳಚರಿತ್ರೆ ರಾಮಧಾನ್ಯ ಚರಿತ್ರೆ ಮೋಹನತರಂಗಿಣಿ ಶ್ರೀರಾಮಾಯಣದರ್ಶನಂ ಲಕ್ಕಣ್ಣ ದಂಡೇಶ ವಿರಚಿತ ಶಿವಪುರಾಣ ಭಗವದ್ಗೀತೆ ಸೇರಿದಂತೆ ವಿವಿಧ ಪ್ರಾಕಾರದ ಕಾವ್ಯಗಳನ್ನು ಗಮಕ ಕಲೆಯ ಮೂಲಕ ವಾಚನ ಮಾಡುವಲ್ಲಿಯೂ ಎಂ.ಖಾಸೀಮ್ ನಾಡಿನ ಎಲ್ಲೆಡೆ ಹೆಚ್ಚು ಮನ್ನಣೆ ಗಳಿಸಿದ್ದಾರೆ. ಭವನ ಬೆಂಗಳೂರು ಪ್ರೆಸ್ ಶಾಲೆ ಭಾರತೀಯ ವಿದ್ಯಾ ಭವನ ಚಿನ್ಮಯ ವಿದ್ಯಾಲಯ ಶಾಲೆಗಳಲ್ಲಿ ಅತಿಥಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸೇರಿದಂತೆ ನಾಡಿನ ಇತರ ವಿಶ್ವವಿದ್ಯಾಲಯಗಳಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ಸೇರಿದಂತೆ ಹಲವು ಮಹಾಕಾವ್ಯಗಳ ಗಮಕ ವಾಚನ ಮಾಡಿ ಹೆಸರಾಗಿದ್ದಾರೆ.

ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಗಮಕ ಕಲೆಯ ಮೂಲಕ ಸಮಗ್ರ ಕನ್ನಡ ಸಾಹಿತ್ಯದ ಮಹಾಕಾವ್ಯಗಳನ್ನು ಪ್ರಸಾರ ಮಾಡುವ ಉದ್ದೇಶ ಇದೆ ಎಂ.ಖಾಸೀಮ್ ‌ಮಲ್ಲಿಗೆಮಡುವು ಸಂಗೀತ ವಿದ್ವಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT