ಸೋಮವಾರ, ನವೆಂಬರ್ 23, 2020
22 °C
ಬದಲಾಗದ ಸಮಸ್ಯಾತ್ಮಕ ಆರ್‌ಓ ಪ್ಲಾಂಟ್‌ಗಳ ಸ್ಥಿತಿಗತಿ

ಶುದ್ಧ ನೀರಿನ ಘಟಕಗಳಲ್ಲೇ ಎರಡು ವಿಧ!

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ಗ್ರಾಮದಲ್ಲಿ ಶುದ್ಧ ನೀರಿನ ಘಟಕ ಇದ್ದರೂ ಪಕ್ಕದ ಗ್ರಾಮಕ್ಕೆ ಹೋಗಿ ನೀರಿನ ಕ್ಯಾನ್‌ ತುಂಬಿಕೊಂಡು ಬರುವ ಅನಿವಾರ್ಯತೆ ಎದುರಿಸುತ್ತಿರುವ ಜನರ ಸ್ಥಿತಿಗತಿ ಇಂದಿಗೂ ಬದಲಾಗಿಲ್ಲ!

ಶುದ್ಧ ನೀರಿನ ಘಟಕಗಳಲ್ಲೇ ಕುಡಿಯಲು ಯೋಗ್ಯ, ಕುಡಿಯಲು ಅಯೋಗ್ಯ ಎನ್ನುವ ವ್ಯತ್ಯಾಸವನ್ನು ಜನರು ಅನುಭವದ ಆಧಾರದಲ್ಲಿ ಮಾಡಿಕೊಂಡಿದ್ದಾರೆ. ಕೆಲವರು ಯಾವುದನ್ನು ಲೆಕ್ಕಿಸದೆ ಶುದ್ಧ ನೀರಿನ ಘಟಕದಿಂದ ಬರುವ ನೀರೆಲ್ಲವೂ ಶುದ್ಧವಾಗಿಯೇ ಇರುತ್ತವೆ ಎಂದು ಬಳಕೆ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಒಂದೇ ಕುಟುಂಬದೊಳಗಿನ ಹಿರಿಯರೆಲ್ಲ ಕೆರೆ, ಭಾವಿ ಅಥವಾ ಕೊಳವೆಯಿಂದ ತರುವ ನೀರನ್ನು ಸೇವಿಯಲು ಇಷ್ಟಪಡುತ್ತಾರೆ. ಆದರೆ, ಮನೆಯ ಸೊಸೆಯಂದಿರು ಸೇರಿದಂತೆ ಕಿರಿಯರಿಗೆಲ್ಲ ಶುದ್ಧ ನೀರಿನ ಘಟಕದಿಂದಲೇ ನೀರು ಬೇಕು. ಅದಕ್ಕಾಗಿ ಎರಡು ದಿನಗಳಿಗೊಮ್ಮೆ ಐದು ಕಿಲೋ ಮೀಟರ್‌ವರೆಗೂ ದೂರ ಕ್ರಮಿಸಿ ನೀರು ತಂದುಕೊಳ್ಳುವ ಅನಿವಾರ್ಯತೆ ಇದೆ.

ರಾಯಚೂರು ತಾಲ್ಲೂಕಿನ ಚಂದ್ರಬಂಡಾದಲ್ಲಿ ಶುದ್ಧನೀರಿನ ಘಟಕವಿದ್ದರೂ ಕಡ್ಗಂದೊಡ್ಡಿ ಘಟಕದಿಂದ ನೀರು ತಂದುಕೊಳ್ಳುತ್ತಾರೆ. ಕಮಲಾಪುರದಲ್ಲಿ ನೀರಿನ ಘಟಕ ಇದ್ದರೂ ಉಡಮಗಲ್‌ಖಾನಾಪುರ ಗ್ರಾಮದಿಂದ ನೀರು ತರುತ್ತಾರೆ. ಅತ್ತನೂರು ಗ್ರಾಮದಲ್ಲಿ ನೀರಿನ ಘಟಕ ಇದ್ದರೂ ಬಳಕೆ ಮಾಡುವುದಿಲ್ಲ. ಇಂತಹ ಸ್ಥಿತಿ ಜಿಲ್ಲೆಯಾದ್ಯಂತ ಸಾಮಾನ್ಯವಾಗಿದೆ. ಶುದ್ಧ ನೀರಿನ ಘಟಕಗಳಿಂದ ಪಡೆಯುವ ನೀರಿನಲ್ಲಿಯೇ ವ್ಯತ್ಯಾಸವಿದೆ. ಸಿರವಾರ ತಾಲ್ಲೂಕು ಜಕ್ಕಲದಿನ್ನಿಯಲ್ಲಿ ಶುದ್ಧ ನೀರಿನ ಘಟಕದ ನೀರು ಸೇವಿಸಿದವರಿಗೆ ವಾಕರಿಕೆ ಬರುತ್ತಿತ್ತು. ಜನರು ನಿರಂತರ ದೂರು ನೀಡಿದ್ದರಿಂದ, ಸಿರವಾರ ಪಟ್ಟಣದಿಂದ ಶುದ್ಧ ನೀರಿನ ಘಟಕಕ್ಕೆ ನೀರು ಪೂರೈಕೆ ಮಾಡುವ ವ್ಯವಸ್ಥೆಯಾಗಿದೆ.

ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಎಂಟು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಎಲ್ಲವನ್ನು ಜನರು ಬಳಕೆ ಮಾಡುತ್ತಿದ್ದಾರೆ. ರಾಯಚೂರು ತಾಲ್ಲೂಕಿನ ದೇವಸೂಗೂರು, ನೆಲಹಾಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಯಶಸ್ವಿಯಾಗಿ ನಿರ್ವಹಣೆ ಆಗುತ್ತಿವೆ. ಯಶಸ್ವಿಯಾಗಿದ್ದವು ಮೊದಲಿನಿಂದಲೂ ಸರಿಯಾಗಿವೆ. ಆದರೆ ನೀರಿನ ಗುಣಮಟ್ಟ ಹಾಗೂ ಇತರೆ ಸಮಸ್ಯೆ ಇರುವ ನಿರ್ಲಕ್ಷ್ಯಕ್ಕೊಳಗಾದ ಘಟಕಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸ ಆಗುತ್ತಿಲ್ಲ. ಜಿಲ್ಲೆಯ ವಿವಿಧೆಡೆ ಸ್ಥಗಿತವಾಗಿರುವ ಘಟಕಗಳನ್ನು ದುರಸ್ತಿ ಮಾಡಿಸಲು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ದುರಸ್ತಿ ಕಾರ್ಯಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದಕ್ಕೆ ಮಾಡುತ್ತಿರುವ ಪ್ರಯತ್ನ ವಿಫಲವಾಗುತ್ತಿವೆ.

ನಿರ್ವಹಣೆ ಸವಾಲು: ಜಿಲ್ಲೆಯ ಪ್ರತಿ ಗ್ರಾಮದಲ್ಲೂ ಶುದ್ಧ ನೀರಿನ ಘಟಕ ಸ್ಥಾಪಿಸುವ ಯೋಜನೆ ಮಾಡಗಿತ್ತು. ಆದರೆ, ಘಟಕಗಳ ಬಗ್ಗೆ ಸಲ್ಲಿಕೆಯಾಗುವ ದೂರುಗಳು ಮತ್ತು ಅವುಗಳನ್ನು ಸ್ಥಾಪಿಸಲು ಎದುರಾದ ಚಡಚಣೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ. ಇವೆಲ್ಲದರ ಮಧ್ಯೆ ಗ್ರಾಮ ಪಂಚಾಯಿತಿ ನಿರ್ವಹಣೆಯಲ್ಲಿರುವ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಏಜೆನ್ಸಿಗಳಿಗೆ ವಹಿಸಿರುವುದು ಮಾತ್ರ ಸಮಸ್ಯೆಗಳ ಸುಳಿಯಲ್ಲಿವೆ. ನಿರ್ವಹಣೆ ಮಾಡುವುದಕ್ಕೆ ಸಾಧ್ಯವಾಗದೆ ಕೆಲವು ಏಜೆನ್ಸಿಗಳು ಪರಾರಿಯಾಗಿವೆ. ಆಂಥವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದರೆ, ಜನರು ಎದುರಿಸುವ ಸಮಸ್ಯೆಗೆ ಪಹಾರ ಕಲ್ಪಿಸುವ ಕಾರ್ಯ ಆಗುತ್ತಿಲ್ಲ.

ಇದುವರೆಗೂ ಒಟ್ಟು 623 ಶುದ್ಧ ನೀರಿನ ಘಟಕಗಳು ಜಿಲ್ಲೆಗೆ ಮಂಜೂರಿಯಾಗಿದ್ದು, ಅವುಗಳಲ್ಲಿ 612 ಘಟಕಗಳನ್ನು ಸ್ಥಾಪಿಸಲಾಗಿದೆ. 610 ಘಟಕಗಳು ಮಾತ್ರ ಕಾರ್ಯದಲ್ಲಿವೆ. 496 ಘಟಕಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ, 84 ಘಟಕಗಳನ್ನು ಕೆಆರ್‌ಐಡಿಎಲ್‌ ಮೂಲಕ ಮತ್ತು 30 ಘಟಕಗಳನ್ನು ಸಹಕಾರಿ ಸಂಘಗಳು ನಿರ್ವಹಣೆ ನೋಡಿಕೊಳ್ಳುತ್ತಿವೆ. ಸದ್ಯಕ್ಕೆ 538 ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿವೆ.

ಜಿಲ್ಲೆಯಲ್ಲಿ ಒಟ್ಟು 72 ಘಟಕಗಳು ದುರಸ್ತಿಗೀಡಾಗಿವೆ. ಘಟಕಕ್ಕೆ ಪೂರೈಕೆ ಆಗುವ ನೀರಿನ ಮೂಲದಲ್ಲೇ ಸಮಸ್ಯೆ ಇದೆ ಎಂದು ಆರು ಘಟಕಗಳನ್ನು ಸ್ಥಗಿತ ಮಾಡಲಾಗಿದೆ. ಏಜೆನ್ಸಿಗಳಿಂದ ನಿರ್ವಹಣೆ ಸಮಸ್ಯೆ ಆಗಿದ್ದರಿಂದ 42 ಘಟಕಗಳು ಕೆಲಸ ಮಾಡುತ್ತಿಲ್ಲ. ಅದೇ ರೀತಿ ಕೆಆರ್‌ಐಡಿಎಲ್‌ಗೆ ವಹಿಸಿದ್ದ ಘಟಕಗಳ ಪೈಕಿ 7 ಘಟಕಗಳು ಕೆಲಸ ಮಾಡುತ್ತಿಲ್ಲ.

ಪ್ರತಿ ಕ್ಯಾನ್‌ (20 ಲೀಟರ್‌) ಶುದ್ಧ ನೀರು ತುಂಬಿಸಿಕೊಳ್ಳಲು ₹4 ಪಾವತಿಸಬೇಕು. ಕೆಲವು ಕಡೆ ₹5 ಪಡೆಯುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ಖಾಸಗಿ ಕಂಪೆನಿಗಳು ಕೂಡಾ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಒಂದು ಕ್ಯಾನ್‌ ಭರ್ತಿಗೆ ₹8 ಪಡೆಯುತ್ತಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.