ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ರಿಮ್ಸ್‌ ಆಡಳಿತದಲ್ಲಿ ಓರೆಕೋರೆಗಳು!

ಅನುದಾನವಿದ್ದರೂ ಸಿಬ್ಬಂದಿಗೆ ವೇತನ ಸಮರ್ಪಕವಾಗಿಲ್ಲ
Last Updated 15 ಜೂನ್ 2020, 20:15 IST
ಅಕ್ಷರ ಗಾತ್ರ

ರಾಯಚೂರು: ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್‌)ಯಲ್ಲಿ ಅನುದಾನ ಲಭ್ಯ ಇದ್ದರೂ ವೈದ್ಯಕೀಯ ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವು ಸಮರ್ಪಕವಾಗಿ ಜಮಾ ಆಗುತ್ತಿಲ್ಲ.

ಆರೋಗ್ಯದ ವಿಷಯದಲ್ಲಿ ಅಭಿವೃದ್ಧಿ ಮತ್ತು ಸಂಶೋಧನೆಗಳ ಮೈಲುಗಲ್ಲು ಸಾಧಿಸಬೇಕಾದ ಸಂಸ್ಥೆಯು ಅನುದಾನವನ್ನು ಸರಿಯಾಗಿ ಬಳಕೆ ಮಾಡುತ್ತಿಲ್ಲ. ಬೋಧಕರ ಕೊರತೆ ಹಾಗೂ ಸಿಬ್ಬಂದಿ ಕೊರತೆ ಇದೆ ಎನ್ನುವ ಕೊರತೆಗಳನ್ನು ಮುಂದಿಟ್ಟುಕೊಂಡು ಕಾಲ ಕಳೆಯುತ್ತಿದೆ. ರಿಮ್ಸ್‌ ಆಡಳಿತ ಮಂಡಳಿಯು ತೆರೆದಿರುವ 16 ಬ್ಯಾಂಕ್‌ ಖಾತೆಗಳು ಕೂಡಾ ಇದೀಗ ಸಂಶಯಕ್ಕೆ ಎಡೆಮಾಡಿವೆ.

ಸಂಸ್ಥೆಯಲ್ಲಿ ನಡೆಯುತ್ತಿರುವ ಈ ಏರುಪೇರುಗಳನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಸಂಸ್ಥೆಗೆ ಈಚೆಗೆ ಭೇಟಿನೀಡಿ ಒಂದೇ ದಿನದಲ್ಲಿ ಗುರುತಿಸಿರುವುದು ವಿಶೇಷ. ಲೋಪಗಳನ್ನು ಸರಿಪಡಿಸಲು ಸಚಿವರು ನೀಡಿರುವ ಸೂಚನೆಗಳನ್ನು ಗಂಭೀರವಾಗಿ ಜಾರಿಗೊಳಿಸುವ ಅನಿವಾರ್ಯತೆ ಆಡಳಿತ ಮಂಡಳಿಯ ಮೇಲಿದೆ.

ಜಿಲ್ಲೆಯ ಜನರ ಆರೋಗ್ಯದ ಸಮಸ್ಯೆಗಳಿಗೆ ರಿಮ್ಸ್‌ ಒಂದು ಪರಿಹಾರ ಕೇಂದ್ರವಾಗಿ ಬದಲಾಗಬೇಕು. ಅನುದಾನ ಬಳಕೆ ಮಾಡಲೇ ಬೇಕು. ವ್ಯವಸ್ಥೆ ಸುಧಾರಿಸುವುದಕ್ಕಾಗಿ ಮತ್ತೆ ಅನುದಾನ ಪಡೆದುಕೊಳ್ಳಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಲ್ಲದೆ, ಮತ್ತೆ ಪರಿಶೀಲನೆಗಾಗಿ ಬರುವುದಾಗಿ ಎಚ್ಚರಿಸಿದ್ದಾರೆ. ಓಪೆಕ್‌ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಪುನಶ್ವೇತನ ಮಾಡುವ ಬಗ್ಗೆಯೂ ಸಚಿವರು ಗಮನ ಹರಿಸಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳು ಕೂಡಾ ಈ ಬಗ್ಗೆ ಸಚಿವರಿಗೆ ಒತ್ತಾಯ ಮಾಡಿದ್ದು, ಮೂರು ತಿಂಗಳಲ್ಲಿ ಆಸ್ಪತ್ರೆಗೆ ಹೊಸ ರೂಪ ನೀಡುವುದಾಗಿ ಭರವಸೆ ಸಿಕ್ಕಿದೆ. ಹೊಸ ರೂಪ ತರುವ ಜವಾಬ್ದಾರಿ ಕೂಡಾ ರಿಮ್ಸ್‌ ಆಡಳಿತ ಮಂಡಳಿ ಮೇಲೆ ಬೀಳಲಿದೆ.

ಹೊರಗುತ್ತಿಗೆ ಸಿಬ್ಬಂದಿ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದ ದೂರುಗಳ ನಿರ್ವಹಣೆ ವಿಷಯಗಳಲ್ಲೇ ಆಡಳಿತ ಮಂಡಳಿಯು ಕಾಲಕಳೆಯುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸದಾಗಿ ನಡೆಯುತ್ತಿರುವ ಸಂಶೋಧನೆಗಳು ಮತ್ತು ಜಿಲ್ಲೆಯ ಜನರ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರವಾಗಿ ಎದ್ದು ನಿಲ್ಲಬೇಕು. ಇದಕ್ಕಾಗಿ ಬೋಧಕರನ್ನು ಆದ್ಯತೆಯಿಂದ ನೇಮಕ ಆಡಿಕೊಳ್ಳುವಂತೆಯೂ ಸಚಿವರು ಸೂಚನೆ ನೀಡಿದ್ದಾರೆ. ವೈದ್ಯಕೀಯ ಓದಿರುವ ಸಚಿವ ಡಾ.ಕೆ.ಸುಧಾಕರ್‌ ಅವರು ನೀಡಿದ ಸಲಹೆಗಳನ್ನು ಜಾರಿ ಮಾಡುವ ಕಾರ್ಯದಲ್ಲಿ ರಿಮ್ಸ್‌ ನಿರ್ದೇಶಕರು ಕಾರ್ಯಪ್ರವೃತ್ತರಾಗಿದ್ದಾರೆ.

ಹೃದ್ರೋಗ ವಿಭಾಗ, ಕಿಡ್ನಿರೋಗ ವಿಭಾಗ ಆರಂಭಿಸಬೇಕಿದೆ. ಜನಮಾಸಾನ್ಯರಿಗೆ ಸೂಪರ್‌ಸ್ಪೆಷಾಲಿಟಿ ಚಿಕಿತ್ಸೆ ದೊರಕಿಸಬೇಕಿದೆ. ಆಯುಷ್ಮಾನ್‌ ಭಾರತ್‌ ಯೋಜನೆಯಡಿ ನಡೆಯುವ ಶಸ್ತ್ರಚಿಕಿತ್ಸೆಗಳನ್ನು ಪ್ರತಿದಿನ ಮಾಹಿತಿ ಅಪ್‌ಲೋಡ್‌ ಮಾಡಲು ತಿಳಿಸಲಾಗಿದೆ. ಯಾವ ವಿಭಾಗ ಕೆಲಸ ಮಾಡುತ್ತಿದೆ ಅಥವಾ ಮಾಡುತ್ತಿಲ್ಲ ಎಂಬುದು ಇದರಿಂದ ತಿಳಿಯುತ್ತದೆ ಎಂಬುದನ್ನು ಸಚಿವರು ಒತ್ತುಕೊಟ್ಟು ಹೇಳಿದ್ದಾರೆ. ಪ್ರತಿಯೊಬ್ಬ ವೈದ್ಯರು ಎಷ್ಟು ಸಮಯವನ್ನು ರಿಮ್ಸ್‌ನಲ್ಲಿ ಕಳೆಯುತ್ತಿದ್ದಾರೆ. ಎಷ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂಬುದನ್ನು ಪರಿಶೀಲಿಸುವ ಕಾರ್ಯಕ್ಕೂ ಸಚಿವರು ಮುಂದಾಗಿರುವುದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT