ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಮ್ಸ್‌ ವೈದ್ಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

ತರಬೇತಿಯಲ್ಲಿದ್ದ ವೈದ್ಯರಿಬ್ಬರ ಮೇಲೆ ಹಲ್ಲೆ ಆರೋಪ
Last Updated 17 ಜುಲೈ 2021, 15:01 IST
ಅಕ್ಷರ ಗಾತ್ರ

ರಾಯಚೂರು: ರೋಗಿಯು ಚಿಕಿತ್ಸೆಗೆ ಸ್ಪಂದಿಸದೆ ತೀರಿಕೊಂಡಿದ್ದರಿಂದ ರೋಗಿ ಸಂಬಂಧಿಗಳು ತರಬೇತಿಯಲ್ಲಿದ್ದ ಇಬ್ಬರು ವೈದ್ಯರ ಮೇಲೆ ಶುಕ್ರವಾರ ತಡರಾತ್ರಿ ಹಲ್ಲೆ ಮಾಡಿದ್ದಾರೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್‌)ಯ ವೈದ್ಯ ವಿದ್ಯಾರ್ಥಿಗಳು ಆಸ್ಪತ್ರೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ವೈದ್ಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಆಸ್ಪತ್ರೆಯ ಪ್ರವೇಶದ್ವಾರದ ಮೆಟ್ಟಿಲುಗಳಲ್ಲಿ ಕುಳಿತಿದ್ದ ವೈದ್ಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಫಲಕಗಳನ್ನು ಹಿಡಿದು ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದರು. ತರಬೇತಿ (ಹೌಸ್‌ಮನ್‌ಶಿಪ್‌)ಯಲ್ಲಿದ್ದ ವೈದ್ಯರಾದ ಸಂತೋಷ ಹಾಗೂ ರೋಹಣ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಇಂತಹ ಘಟನೆಗಳು ಮರುಕಳಿಸುತ್ತಿವೆ. ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲೇಬೇಕು ಎಂದರು.

ತಡರಾತ್ರಿ ಆಸ್ಪತ್ರೆಗೆ ಕರೆತರಲಾಗಿದ್ದ ನರಸಿಂಹಲು ಎನ್ನುವ ರೋಗಿಯ ಸ್ಥಿತಿ ತೀರಾ ಚಿಂತಾಜನಕವಾಗಿತ್ತು. ಚಿಕಿತ್ಸೆಗಾಗಿ ದಾಖಲಿಸಿಕೊಂಡರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇದರಿಂದ ಆಕ್ರೋಶಕ್ಕೊಳಗಾದ ರೋಗಿ ಕಡೆಯ ಸಂಬಂಧಿಗಳು ವೈದ್ಯರನ್ನು ಅಟ್ಟಾಡಿಸಿ ಹೊಡೆದಿದ್ದಾರೆ ಎಂದು ವೈದ್ಯ ವಿದ್ಯಾರ್ಥಿಗಳು ಆರೋಪಿಸಿದರು

ಎಲ್ಲ ರೀತಿಯಿಂದಲೂ ಚಿಕಿತ್ಸೆಗೆ ವೈದ್ಯರು ವ್ಯವಸ್ಥೆ ಮಾಡಿಕೊಂಡಿದ್ದರು. ಆದರೂ ರೋಗಿಯು ಚಿಕಿತ್ಸೆಗೆ ಸ್ಪಂದಿಸಲಿಲ್ಲ. ವಿನಾಕಾರಣ ವೈದ್ಯರ ಮೇಲೆ ಹಲ್ಲೆಗೆ ಮುಂದಾಗಿದ್ದು ಖಂಡನೀಯ ಎಂದರು.

ರಿಮ್ಸ್‌ ನಿರ್ದೇಶಕ ಡಾ.ಬಸವರಾಜ ಪೀರಾಪುರೆ ಅವರು ಸ್ಥಳಕ್ಕೆ ಧಾವಿಸಿ, ವೈದ್ಯ ವಿದ್ಯಾರ್ಥಿಗಳ ಮೂಲಕ ಘಟನೆಯ ವಿವರ ಪಡೆದರು. ಹಲ್ಲೆ ಘಟನೆ ಸಂದರ್ಭದಲ್ಲಿ ಹೋಂ ಗಾರ್ಡ್ಸ್‌ ಕರ್ತದಲ್ಲಿದ್ದರೂ ತಡೆದಿಲ್ಲ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಹೋಂ ಗಾರ್ಡ್ಸ್‌ಗಳನ್ನು ಬೇರೆ ಕಡೆಗೆ ನಿಯೋಜಿಸಲಾಗುವುದು. ಕೂಡಲೇ ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗುವುದು ಎಂದು ಮನವರಿಕೆ ಮಾಡಿದರು.

ಆದರೆ, ಆರೋಪಿಗಳನ್ನು ಬಂಧಿಸುವವರೆಗೂ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಮಧ್ಯಾಹ್ನದವರೆಗೂ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT