ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ಹದಗೆಟ್ಟ ರಸ್ತೆಗಳು: ಸಂಚಾರಕ್ಕೆ ಸಂಚಕಾರ

ಸತತ ಮಳೆಗೆ ಕೆಸರುಗದ್ದೆಯಂತಾದ ರಸ್ತೆಗಳು: ದುರಸ್ತಿಗೆ ಮುಂದಾಗದ ಅಧಿಕಾರಿಗಳು
ಮಂಜುನಾಥ ಎನ್‌.ಬಳ್ಳಾರಿ
Published 1 ಸೆಪ್ಟೆಂಬರ್ 2024, 4:45 IST
Last Updated 1 ಸೆಪ್ಟೆಂಬರ್ 2024, 4:45 IST
ಅಕ್ಷರ ಗಾತ್ರ

ಕವಿತಾಳ: ಕೆಲ ದಿನಗಳಿಂದ ಆಗಾಗ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರಸ್ತೆಗಳು ಹದಗೆಟ್ಟಿದ್ದು ಸಾರ್ವಜನಿಕರು ಓಡಾಡಲು ತೊಂದರೆ ಅನುಭವಿಸುವಂತಾಗಿದೆ.

ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಆಳವಾದ ಗುಂಡಿಗಳು ಬಿದ್ದಿದ್ದು ಅವುಗಳಲ್ಲಿ ಮಳೆ ನೀರು ಸಂಗ್ರಹವಾದ ಪರಿಣಾಮ ಗುಂಡಿ ಕಾಣದೆ ಬೈಕ್‌ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ರಸ್ತೆ ಬದಿ ಮಣ್ಣನ್ನೆ ಗುಂಡಿಗೆ ಹಾಕಿ ತೇಪೆ ಕೆಲಸ ಮಾಡಿದ ಪರಿಣಾಮ ರಸ್ತೆ ಅಕ್ಷರಶಃ ಕೆಸರು ಗದ್ದೆಯಂತಾಗಿದೆ.

ಸಮೀಪದ ಹಿರೇಹಣಿಗಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿಯಿಂದ ಊರೊಳಗೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಗ್ರಾಮಸ್ಥರು ಕೆಸರಿನಲ್ಲಿಯೇ ಓಡಾಡುವಂತಾಗಿದೆ. ರಸ್ತೆಯಲ್ಲಿ ತಗ್ಗುಗಳು, ಬದಿಯಲ್ಲಿ ಕಲ್ಲುಗಳು ಬಿದ್ದಿರುವುದು, ವೃದ್ಧರು, ಮಹಿಳೆಯರು, ಮಕ್ಕಳು ಜಾರಿ ಬೀಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಬೈಕ್‌ ಸವಾರರು ಓಲಾಡುತ್ತಾ ಸಾಗಬೇಕಿದೆ. ತಾತ್ಕಾಲಿಕವಾಗಿ ಮುರಮ್‌ ಹಾಕಿ ರಸ್ತೆ ದುರಸ್ತಿ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗ್ರಾಮದ ಪಂಪಣ್ಣ ಮತ್ತು ಶಿವಪ್ಪ ಆರೋಪಿಸಿದರು.

ಹುಸೇನಪುರ ಗ್ರಾಮದಲ್ಲಿ ಊರೊಳಗೆ ಹೋಗುವ ರಸ್ತೆ ಕೆಸರುಮಯವಾಗಿದ್ದು ರಸ್ತೆ ಬದಿ ಶೌಚ ಹಾಗೂ ಚರಂಡಿ ನೀರು ಹರಿದು ಗಲೀಜು ಉಂಟಾಗಿದೆ. ಚಿಂಚರಿಕಿ ಗ್ರಾಮದಲ್ಲಿಯೂ ಆಂತರಿಕ ರಸ್ತೆಗಳು ಹಾಳಾಗಿವೆ.

ಸಮೀಪದ ತೋರಣದಿನ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಕಾಪುರ ಗ್ರಾಮದಲ್ಲಿ ಬಸವಣ್ಣ ದೇವಸ್ಥಾನ ಮತ್ತು ಬಳಗಾನೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ಈಗಾಗಲೇ ಕಾಂಕ್ರೀಟ್‌ ರಸ್ತೆ ನಿರ್ಮಿಸಿದ್ದರೂ ಚರಂಡಿ ಎತ್ತರದಲ್ಲಿರುವ ಕಾರಣ ರಸ್ತೆಯಲ್ಲಿ ನೀರು ನಿಂತು ಭತ್ತದ ಗದ್ದೆಯಂತಾಗಿದೆ. ಅಲ್ಪಸ್ವಲ್ಪ ಮಳೆ ಸುರಿದರೂ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಕೆಸರು ಉಂಟಾಗಿ ಗ್ರಾಮಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕವಿತಾಳ ಸಮೀಪದ ಮಲ್ಕಾಪುರ ಗ್ರಾಮದಲ್ಲಿ ರಸ್ತೆಯ ದುಸ್ಥಿತಿ
ಕವಿತಾಳ ಸಮೀಪದ ಮಲ್ಕಾಪುರ ಗ್ರಾಮದಲ್ಲಿ ರಸ್ತೆಯ ದುಸ್ಥಿತಿ

‘ರಸ್ತೆ ದುರಸ್ತಿ ಮಾಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಓಡಾಡಲು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಆರ್.ಎಸ್.ಈರಣ್ಣ, ಎಂ.ಸಿದ್ದಯ್ಯ, ದುರುಗಪ್ಪ ಮೂಕಪ್ಪನವರ್‌, ಬಸವರಾಜ, ದಿಲೀಪ್‌ ಸಾಹುಕಾರ, ತಿಮ್ಮಣ್ಣ ಮತ್ತಿತರರು ಆಗ್ರಹಿಸಿದ್ದಾರೆ.

ಹೆದ್ದಾರಿ ದುರಸ್ತಿ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ತಾತ್ಕಾಲಿಕವಾಗಿ ಗುಂಡಿ ಮುಚ್ಚಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಶಫಿಯುದ್ದೀನ್, ಎಇಇ, ಡಿ.ಸಿ ಕಚೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT