ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೋಟ ವೈರಸ್ ಮಕ್ಕಳ ಪಾಲಿಗೆ ಮಾರಕ ಕಾಯಿಲೆ’

Last Updated 3 ಆಗಸ್ಟ್ 2019, 12:53 IST
ಅಕ್ಷರ ಗಾತ್ರ

ರಾಯಚೂರು: ರೋಟ ವೈರಸ್ ಮಕ್ಕಳ ಪಾಲಿಗೆ ಮಾರಕವಾದ ಕಾಯಿಲೆಯಾಗಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೇಶದಲ್ಲಿ ವರ್ಷಕ್ಕೆ 78 ಸಾವಿರಕ್ಕೂ ಅಧಿಕ ಮಕ್ಕಳು ಸಾವನ್ನಪ್ಪುತ್ತಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಡಿ.ಶಾಕೀರ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ರೋಟ ವೈರಸ್ ಲಸಿಕೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೋಟ ವೈರಸ್ ವೈರಲ್ ಸೋಂಕಾಗಿದ್ದು, ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಈ ರೋಗಕ್ಕೆ ತುತ್ತಾಗುವ ಮಕ್ಕಳು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ದೇಶದಲ್ಲಿ 32.7 ಲಕ್ಷ ಮಕ್ಕಳು ಒಪಿಡಿಗೆ ಬಂದರೆ 8.72 ಲಕ್ಷ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಕೆ.ವಿಜಯಾ ಮಾತನಾಡಿ, ರೋಟ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡಬಲ್ಲ ವೈರಾಣು ಸೋಂಕಾಗಿದೆ. ಕಲುಷಿತ ನೀರು, ಆಹಾರ ಮತ್ತು ಕೊಳೆಯಾದ ಕೈಗಳ ಸಂಪರ್ಕದಿಂದ ರೋಗ ಹರಡುತ್ತದೆ ಎಂದು ಹೇಳಿದರು.

ವೈರಾಣು ಬಹಳಷ್ಟು ಸಮಯದವರೆಗೆ ಮಕ್ಕಳ ಕೈಯಲ್ಲಿ ಮತ್ತು ಇತರ ಗಟ್ಟಿಯಾದ ಮೇಲ್ಪದರಗಳಲ್ಲಿ ಜೀವಂತವಾಗಿರುತ್ತದೆ. ಇದರ ನಿಯಂತ್ರಣಕ್ಕೆ ಲಸಿಕೆ ಹಾಕಿಸುವುದರಿಂದ ಭೇದಿಕಾರಣಕ್ಕೆ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವುದು ತಪ್ಪಿಸಬಹುದು. ಮಕ್ಕಳಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಆಗಾಗ ಕೈ ತೊಳೆದುಕೊಳ್ಳುವುದು, ಸ್ವಚ್ಛ-ಸುರಕ್ಷಿತ ನೀರು ಕುಡಿಯುವುದು, ಸುರಕ್ಷಿತ ಆಹಾರ ಸೇವಿಸುವುದು, ಮಗು ಹುಟ್ಟಿದ ಮೊದಲ 6 ತಿಂಗಳು ಕೇವಲ ತಾಯಿ ಎದೆ ಹಾಲುಣಿಸುವುದು ಹಾಗೂ ವಿಟಮಿನ್ ಎ ಇರುವಂತಹ ಪೂರಕ ಆಹಾರ ಸೇವನೆಯ ಉಪಾಯಗಳನ್ನು ಪಾಲಿಸುವುದರ ಮೂಲಕ ಈ ಸೋಂಕಿನಿಂದ ಪಾರಾಗಬಹುದು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಂ.ಕೆ.ಎಸ್.ನಸೀರ ಮಾತನಾಡಿ, ಭೇದಿಯ ಲಕ್ಷಣಗಳ ಬಗ್ಗೆ ತಿಳಿಸಿದರು.ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ನಾಗರಾಜ, ವೈದ್ಯಾಧಿಕಾರಿ ಡಾ.ರಶಿದಹಾಸ್ಮಿ, ಮಲೇರಿಯಾ ತಾಂತ್ರಿಕ ಮೇಲ್ವಿಚಾರಕಿ ಸಂಧ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT