ರಾಯಚೂರು ಆರ್‌ಟಿಪಿಎಸ್‌ನ 4 ವಿದ್ಯುತ್ ಘಟಕಗಳು ಸ್ಥಗಿತ

ಶಕ್ತಿ ನಗರ (ರಾಯಚೂರು ಜಿಲ್ಲೆ): ತಾಂತ್ರಿಕ ಸಮಸ್ಯೆಯಿಂದಾಗಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) 4 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ ಮಾಡಲಾಗಿದೆ.
ವಾರ್ಷಿಕ ನಿರ್ವಹಣೆಗಾಗಿ 4ನೇ ಘಟಕ, ಬಾಯ್ಲರ್ ಟ್ಯೂಬ್ ಸೋರಿಕೆಯಿಂದ 210 ಮೆಗಾ ವಾಟ್ ಸಾಮರ್ಥ್ಯದ 6ನೇ ಘಟಕದ ವಿದ್ಯುತ್ ಉತ್ಪಾದನೆ ಮತ್ತು 5ನೇ ವಿದ್ಯುತ್ ಘಟಕದಲ್ಲಿ ಹಾರುಬೂದಿ ಹೊರ ಹಾಕುವ ಪೈಪ್ ಲೈನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಕಳೆದ 6 ತಿಂಗಳಿಂದ 1ನೇ ಘಟಕ ಸ್ಥಗಿತಗೊಳಿಸಲಾಗಿದೆ. ಈ ಘಟಕವನ್ನು ಸಂಪೂರ್ಣವಾಗಿ ಮರು ನಿರ್ಮಾಣಗೊಳಿಸುವ ಸಾಧ್ಯತೆ ಇರುವುದರಿಂದ ವಿದ್ಯುತ್ ಉತ್ಪಾದನೆ ನಿಲ್ಲಿಸಲಾಗಿದೆ.
ಇಲ್ಲಿರುವ 8 ವಿದ್ಯುತ್ ಘಟಕಗಳಲ್ಲಿ 1, 4, 5 ಮತ್ತು 6ನೇ ವಿದ್ಯುತ್ ಘಟಕಗಳ ಉತ್ಪಾದನೆ ಸ್ಥಗಿತಗೊಂಡಿದ್ದರಿಂದ 1.720 ಮೆಗಾ ವಾಟ್ ಸಾಮರ್ಥ್ಯದ ಪೈಕಿ 560 ಮೆಗಾ ವಾಟ್ ಮಾತ್ರ ಉತ್ಪಾದನೆ ಆಗುತ್ತಿದೆ. ಕಲ್ಲಿದ್ದಲು ಗುಣಮಟ್ಟ ಮತ್ತು ಪೂರೈಕೆ ಪ್ರಮಾಣದಲ್ಲಿ ಯಾವುದೇ ತೊಂದರೆಯಿಲ್ಲ. ಸದ್ಯಕ್ಕೆ 3.20 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ದಾಸ್ತಾನಿದೆ. ಅಷ್ಟೇ ಅಲ್ಲದೆ ಮೂರು ಗಣಿಗಳು ಮತ್ತು ಆಮದು ಸೇರಿ ಪ್ರತಿದಿನ ತಲಾ 7–8 ರೈಲ್ವೆ ರೇಕ್ (ಪ್ರತಿ ರೇಕ್ 3,500 ಮೆಟ್ರಿಕ್ ಟನ್)ಗಳು ಆರ್‌ಟಿಪಿಎಸ್‌ಗೆ ತಲುಪುತ್ತಿವೆ ಎಂದು ಮೂಲಗಳು ತಿಳಿಸಿವೆ.
‘5ನೇ ವಿದ್ಯುತ್ ಘಟಕದಲ್ಲಿ ತಾಂತ್ರಿಕ ಸಮಸ್ಯೆ ನಿವಾರಿಸಿದ್ದು, ಕ್ರಮೇಣ ಪೂರ್ಣ ಸಾಮರ್ಥ್ಯದ ಉತ್ಪಾದನೆ ಸಾಧ್ಯವಾಗಲಿದೆ. ಬಾಯ್ಲರ್ ಟ್ಯೂಬ್ ಸೋರಿಕೆಯಿಂದ 6ನೇ ಘಟಕ ಸ್ಥಗಿತವಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಉತ್ಪಾದನೆ ಆರಂಭವಾಗಲಿದೆ’ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕಾ ನಿರ್ದೇಶಕ ಸಿ.ಎಂ. ದಿವಾಕರ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.