ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು ತಾಲ್ಲೂಕಿನ ದೊಡ್ಡಿಗಳಲ್ಲಿ ಜಲಕ್ಷಾಮ!

ಗ್ರಾಮದ ಸೌಲಭ್ಯಗಳಿಲ್ಲದೆ ಬವಣೆ ಅನುಭವಿಸುತ್ತಿರುವ ಕುಟುಂಬಗಳು
Last Updated 9 ಮೇ 2019, 19:45 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಗುರಗುಂಟಾ ಮತ್ತು ಹಟ್ಟಿ ಹೋಬಳಿ ವ್ಯಾಪ್ತಿಯ ದೊಡ್ಡಿಗಳಲ್ಲಿ ಬರಗಾಲ ಬೀಕರವಾಗಿದ್ದು, ಕುಡಿಯುವ ನೀರಿಗಾಗಿ ಜನರು ಪ್ರಾಣದ ಹಂಗು ತೊರೆದು ತೆರೆದ ಬಾವಿಯೊಳಗೆ ಇಳಿದು ಅದರಲ್ಲಿ ಒರತೆ ತೋಡಿ ನೀರು ಪಡೆಯುತ್ತಿದ್ದಾರೆ!

ಈ ಎರಡು ಹೋಬಳಿಗಳ ವ್ಯಾಪ್ತಿಯಲ್ಲಿ ಸುಮಾರು 90 ದೊಡ್ಡಿಗಳಿದ್ದು, ಗ್ರಾಮಗಳಲ್ಲಿ ಸಿಗುವ ಮೂಲ ಸೌಕರ್ಯಗಳಿಂದ ದೂರ ಉಳಿದು ಬದುಕು ಕಟ್ಟಿಕೊಂಡಿದ್ದಾರೆ. ಪ್ರತಿ ದೊಡ್ಡಿಯಲ್ಲೂ ಕುಡಿಯುವ ನೀರಿಗಾಗಿ 30 ರಿಂದ 40 ಅಡಿ ತೆರೆದ ಬಾವಿಗಳಿವೆ. ಇದೀಗ ಬರಗಾಲದಿಂದಾದ ಎಲ್ಲ ಬಾವಿಗಳು ಬತ್ತಿರುವುದರಿಂದ, ಬಾವಿಯೊಳಗೆ ಒರತೆ ತೋಡಿ ಹನಿಹನಿ ನೀರು ಸಂಗ್ರಹಿಸುವ ಸಾಹಸವನ್ನು ಮಹಿಳೆಯರು ಪ್ರತಿನಿತ್ಯ ಮಾಡುತ್ತಿದ್ದಾರೆ.

ಹಟ್ಟಿ ಚಿನ್ನದ ಗಣಿಯಿಂದ ಸುಮಾರು 20 ಕಿಲೋ ಮೀಟರ್‌ ದೂರದ ಪೈದೊಡ್ದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯರಜಂತಿ ಗ್ರಾಮದೊಂದಿಗೆ ಗುರುತಿಸಿಕೊಳ್ಳುವ ಮೂಕಬಸವನದೊಡ್ದಿ, ಗ್ವಾಡೋರ್‌ದೊಡ್ದಿ, ತೂಗುರೋರ್‌ದೊಡ್ಡಿ, ಬಾರಿಗಿಡದೊಡ್ದಿ ಹಾಗೂ ಗೌಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಬ್ಬಳ್ಳಿಯರ ದೊಡ್ಡಿ, ಹಡಗಲಿಯರ ದೊಡ್ಡಿ, ಗಂಗಣ್ಣ ಗೌಡರ ದೊಡ್ಡಿ, ಬೀಗದರದೊಡ್ಡಿಗಳಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ನೀರು ಸಂಗ್ರಹಿಸುವುದು ಮಹಿಳೆಯರ ಮುಖ್ಯ ಕೆಲಸವಾಗಿ ಬಿಟ್ಟಿದೆ.

ದೊಡ್ಡಿ ಎಂದರೆ ತೋಟಗಳು: ದೊಡ್ಡಿಯಲ್ಲಿ ಒಂದೇ ಮನೆತನಕ್ಕೆ ಸೇರಿದ ಸುಮಾರು ಐದರಿಂದ ಹತ್ತು ಗುಡಿಸಲುಗಳಿರುತ್ತವೆ. ರೈತರು ತಮ್ಮ ಜಮೀನುಗಳಲ್ಲಿ ವಾಸಿಸುವುದಕ್ಕೆ ದೊಡ್ಡಿಗಳನ್ನು ಕಟ್ಟಿಕೊಂಡಿದ್ದಾರೆ. ಕೆಲವು ಕಡೆಗಳಲ್ಲಿ ಕೂಲಿ ಕಾರ್ಮಿಕರು ಗುಡಿಸಲು ಕಟ್ಟಿಕೊಂಡು ವಾಸಿಸಲು ಜಮೀನು ಮಾಲೀಕರು ಅವಕಾಶ ನೀಡಿದ್ದಾರೆ. ಬಹುತೇಕ ದೊಡ್ಡಿಗಳಿಗೆ ವಿದ್ಯುತ್‌ ಸಂಪರ್ಕವಿಲ್ಲ.ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾಗಿ ದೊಡ್ಡಿಗಳ ಜನರು ವಾಸಿಸುತ್ತಿದ್ದಾರೆ.

‘ಸರ್ಕಾರಿ ಮನೆ ಕಟ್ಟಿಸಿಕೊಳ್ಳಲು ಅವಕಾಶ ಕೊಡಿ ಎಂದು ಪಂಚಾಯಿತಿಯವರಿಗೆ ಕೇಳಿಕೊಳ್ಳುತ್ತಿದ್ದೇವೆ. ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳು ಇತ್ತ ಬರುತ್ತಾರೆ. ಕನಿಷ್ಠ ಕುಡಿಯುವ ನೀರು ಒದಗಿಸುವ ಕೆಲಸವನ್ನೂ ಮಾಡುತ್ತಿಲ್ಲ’ ಎಂದು ಏಳು ಮಡಿಕೆ ದೊಡ್ಡಿ ನಿವಾಸಿ ಬಸಮ್ಮ ಅವರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

*
ದೊಡ್ಡಿಗಳಲ್ಲಿ ಕೊಳವೆಬಾವಿ ಕೊರೆಸಿ ಕೈಪಂಪುಗಳನ್ನು ಅಳವಡಿಸಲಾಗಿದೆ. ಕೆಲ ಕಡೆ ಕೈಪಂಪ್‌ನಲ್ಲಿ ನೀರು ಬತ್ತಿಹೋಗಿ ಸಮಸ್ಯೆಯಾಗಿದೆ. ಇದರ ಬಗ್ಗೆ ವರದಿ ಪಡೆಯುತ್ತೇನೆ.
-ನಲಿನ್‌ ಅತುಲ್‌, ಸಿಇಒ, ಜಿಲ್ಲಾ ಪಂಚಾಯಿತಿ

*
ದೊಡ್ಡಿಗಳಲ್ಲಿರುವ ಜನರು ಖಾಸಗಿ ತೆರೆದ ಬಾವಿ ಹೊಂದಿದ್ದಾರೆ. ಕೆಲ ಕಡೆ ನೀರು ಬತ್ತಿದ್ದರೂ ಬಾವಿಗೆ ಇಳಿಯುತ್ತಿದ್ದಾರೆ. ಪಕ್ಕದವರ ಬಾವಿಯಿಂದ ಕುಡಿಯುವ ನೀರು ಪಡೆಯುತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ನೀರು ಒದಗಿಸಲಾಗುವುದು.
-ಪ್ರಕಾಶ ವಡ್ಡರ, ಇಒ, ತಾಲ್ಲೂಕು ಪಂಚಾಯತಿ ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT