ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಗಟಾರು ಉಕ್ಕಿ ಹರಿದು ಸಂಚಾರಕ್ಕೆ ವ್ಯತ್ಯಯ

ದೇವದುರ್ಗದಲ್ಲಿ ಗರಿಷ್ಠ 46.5 ಮಿ.ಮೀ ಮಳೆ: ರಾಯಚೂರಿನ ಮಂತ್ರಾಲಯ ರಸ್ತೆಯಲ್ಲಿ ನೀರು, ಪರದಾಟ
Published 3 ಜೂನ್ 2024, 15:31 IST
Last Updated 3 ಜೂನ್ 2024, 15:31 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ವಿವಿಧೆಡೆ ಭಾನುವಾರ ತಡ ರಾತ್ರಿಯಿಂದ ಸೋಮವಾರ ಬೆಳಿಗ್ಗೆ 10 ಗಂಟೆವರೆಗೂ ಸಾಧಾರಣ ಮಳೆಯಾಗಿದೆ. ರಾತ್ರಿಯಿಡೀ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ಧಗೆ ಕಡಿಮೆಯಾಗಿಲ್ಲ.

ನಗರದ ಹೈದರಾಬಾದ್‌ ರಸ್ತೆ ಹಾಗೂ ಮಂತ್ರಾಲಯ ರಸ್ತೆಯ ಪೆಟ್ರೋಲ್‌ ಬಂಕ್‌ ಬಳಿ ಭಾರಿ ಪ್ರಮಾಣದಲ್ಲಿ ರಸ್ತೆ ಮೇಲೆ ನೀರು ನಿಂತುಕೊಂಡು ಸಂಚಾರಕ್ಕೆ ತೊಂದರೆ ಆಯಿತು. ಆಕಾಶವಾಣಿ ಸಮೀಪದ ತರಕಾರಿ ಮಾರುಕಟ್ಟೆ ಕೆಸರು ಗುಂಡಿಯಾಗಿತ್ತು. ವ್ಯಾಪಾರಸ್ಥರು ತರಕಾರಿ ಮಾರಾಟ ಮಾಡಲು ಪರದಾಡಬೇಕಾಯಿತು.

ನಗರದ ಸ್ಟೇಷನ್ ರಸ್ತೆಯಲ್ಲಿನ ಸೀತಾ ಸುಬ್ಬರಾಜು ಸ್ಮಾರಕ ಮಹಿಳಾ ಕಾಲೇಜು (ಎಸ್ಎಸ್ಆರ್‌ಜಿ), ನಿಜಲಿಂಗಪ್ಪ ಕಾಲೊನಿಯ ಕೆಇಬಿ ಶಾಲಾ ಮೈದಾನದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿ ಮಳೆ ನೀರಿನಲ್ಲೇ ನಡೆದುಕೊಂಡು ಶಾಲಾ–ಕಾಲೇಜಿಗೆ ತೆರಳಿದರು.

ನಗರದ ಗಂಜ್, ಗೋಶಾಲಾ, ಹೈದರಾಬಾದ್ ರಸ್ತೆ, ಸ್ಟೇಷನ್ ರಸ್ತೆ, ನೇತಾಜಿ ರಸ್ತೆ, ಬಂಗಾರ ಬಜಾರ್‌ನಲ್ಲಿ ಗಟಾರು ಉಕ್ಕಿ ರಸ್ತೆ ಮೇಲೆ ನೀರು ಹರಿಯಿತು. ತಗ್ಗು ಪ್ರದೇಶದ ಮಳಿಗೆಗಳಿಗೆ ನೀರು ನುಗ್ಗಿದ್ದರಿಂದ ಮಳಿಗೆ ಮಾಲೀಕರು ಮಳೆ ನೀರನ್ನು ತೆಗೆದು ಹೊರಗೆ ಚೆಲ್ಲಿದರು.

ರಾಯಚೂರು ನಗರದಲ್ಲಿ 44.2 ಮಿ.ಮೀ ಹಾಗೂ ನಗರ ಹೊರ ವಲಯದಲ್ಲಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ 34.4 ಮಿ.ಮೀ ಮಳೆ ದಾಖಲಾಗಿದೆ. ಚಂದ್ರಬಂಡಾ, ದೇವಸುಗೂರು, ಗಿಲ್ಲೆಸುಗೂರು, ಕಲ್ಮಲಾ ಪರಿಸರದಲ್ಲಿ 40 ಮಿ.ಮೀಯಿಂದ 45 ಮಿ.ಮೀ ಮಳೆ ಸುರಿದಿದೆ.

ದೇವದುರ್ಗದಲ್ಲಿ ಗರಿಷ್ಠ 46.5 ಮಿ.ಮೀ ಮಳೆಯಾಗಿದೆ. ದೇವದುರ್ಗ ತಾಲ್ಲೂಕಿನ ಅರಕೇರಾ, ಗಬ್ಬೂರ 39.5 ಮಿ.ಮೀ, ಮುದಗಲ್‌ನಲ್ಲಿ 43.9 ಮಿ.ಮೀ, ಜಾಲಹಳ್ಳಿ, ತುರ್ವಿಹಾಳದಲ್ಲಿ 42 ಮಿ.ಮೀ, ಸಿಂಧನೂರಲ್ಲಿ 40 ಮಿ.ಮೀ, ಕವಿತಾಳ, ಮಸ್ಕಿಯಲ್ಲಿ 37 ಮಿ.ಮೀ, ಲಿಂಗಸುಗೂರಲ್ಲಿ 34.7 ಮಿ.ಮೀ, ಸಿರವಾರಲ್ಲಿ 18.8 ಮಿ.ಮೀ ಹಾಗೂ ಮಾನ್ವಿಯಲ್ಲಿ 14 ಮಿ.ಮೀ ಮಳೆಯಾಗಿದೆ.

ಬೆಳಗಾವಿ–ರಾಯಚೂರು ಹಾಗೂ ರಾಯಚೂರು–ಬೆಳಗಾವಿ ಸ್ಲೀಪರ್‌ ಬಸ್‌ಗಳಲ್ಲಿ ಮಳೆ ನೀರು ಸೋರುತ್ತಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಬಸ್‌ಗಳಲ್ಲಿ ಮಲಗುವ ವ್ಯವಸ್ಥೆ ಇರುವ ಕಾರಣ ಸಾಮಾನ್ಯ ಬಸ್‌ಗಳ ದರಕ್ಕಿಂತ ಹೆಚ್ಚಿನ ಪ್ರಯಾಣ ದರ ಇರುವ ಸ್ಲೀಪರ್‌ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಆದರೆ, ಬೆಡ್‌ಗಳ ಮೇಲೆ ಮಳೆ ನೀರು ಸುರಿಯುತ್ತಿದ್ದರಿಂದ ಪ್ರಯಾಣಿಕರು ರಸ್ತೆ ಸಾರಿಗೆ ಸಂಸ್ಥೆಗೆ ಶಾಪ ಹಾಕಿದರು.

ನೆಲಕ್ಕುರುಳಿದ ವಿದ್ಯುತ್ ಕಂಬಗಳು

ಸಿಂಧನೂರು: ನಗರದ ಮಹಿಬೂಬಿಯಾ ಕಾಲೊನಿಯಲ್ಲಿ ಗಾಳಿ-ಮಳೆಯಿಂದ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಿರುವ ಘಟನೆ ನಡೆದಿದೆ.

ಭಾನುವಾರ ರಾತ್ರಿ 10.30ರ ಸುಮಾರಿಗೆ ಗಾಳಿ-ಮಳೆ ಸುರಿದ ಪರಿಣಾಮ ನಗರದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದೂಸಾಬ ಮುಳ್ಳೂರು ಅವರ ಮನೆ ಮುಂಭಾಗದಲ್ಲಿರುವ ವಿದ್ಯುತ್ ಕಂಬ ಪಕ್ಕದ ಮನೆಯ ಮುಂದೆ ನಿಲುಗಡೆ ಮಾಡಿದ್ದ ಕಾರಿನ ಮೇಲೆ ಬಿದ್ದಿದ್ದು, ಇದರಿಂದ ಕಾರಿನ ಟಾಪ್ ಜಖಂಗೊಂಡಿದೆ. ವಿದ್ಯುತ್ ತಂತಿಗಳು, ಡಿಶ್ ಕೇಬಲ್‍ಗಳು ಹರಿದು ಬಿದ್ದಿವೆ. ಈ ಕಂಬದಿಂದ ಸ್ವಲ್ಪ ಅಂತರದಲ್ಲಿರುವ ಮತ್ತೊಂದು ಕಂಬ ಅರ್ಧಕ್ಕೆ ಮುರಿದು ಬಿದ್ದಿದೆ. ಪ್ರಾಣಾಪಾಯ ಸಂಭವಿಸಿಲ್ಲ.

ಎರಡು ವಿದ್ಯುತ್ ಕಂಬಗಳು ನೆಲಕ್ಕುರಳಿದ ವಿಷಯವನ್ನು ತಕ್ಷಣವೇ ಸಾರ್ವಜನಿಕರು ಜೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಆ ಲೈನ್‍ನಲ್ಲಿ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಿ, ಸ್ಥಳಕ್ಕಾಗಮಿಸಿ ವೀಕ್ಷಿಸಿದರು. ಈ ಘಟನೆಯಿಂದ ರಾತ್ರಿಯಿಡೀ ವಿದ್ಯುತ್ ಪೂರೈಕೆ ಇಲ್ಲದೆ ಜನರು ತೊಂದರೆ ಅನುಭವಿಸಿದರು. ಸೋಮವಾರ ಬೆಳಿಗ್ಗೆ ಜೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದು ಹೊಸ ವಿದ್ಯುತ್ ಕಂಬ ಹಾಗೂ ತಂತಿಗಳನ್ನು ಅಳವಡಿಸಿದರು.

ರಾಯಚೂರಿನ ಎಸ್ಎಸ್‌ಆರ್‌ಜಿ ಮಹಿಳಾ ಕಾಲೇಜಿನ ಆವರಣದಲ್ಲಿ ನಿಂತಿದ್ದ ಮಳೆ ನೀರು
ರಾಯಚೂರಿನ ಎಸ್ಎಸ್‌ಆರ್‌ಜಿ ಮಹಿಳಾ ಕಾಲೇಜಿನ ಆವರಣದಲ್ಲಿ ನಿಂತಿದ್ದ ಮಳೆ ನೀರು
ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿರುವ ಕೆಇಬಿ ಶಾಲೆಯ ಆವರಣದಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ನಡೆದುಕೊಂಡು ಶಾಲೆಗೆ ಬಂದ ಮಕ್ಕಳು
ರಾಯಚೂರಿನ ಲಿಂಗಸುಗೂರು ರಸ್ತೆಯಲ್ಲಿರುವ ಕೆಇಬಿ ಶಾಲೆಯ ಆವರಣದಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ನಡೆದುಕೊಂಡು ಶಾಲೆಗೆ ಬಂದ ಮಕ್ಕಳು
ರಾಯಚೂರಿನ ಸರಾಫ್ ಬಜಾರ್‌ನಲ್ಲಿ ರಸ್ತೆ ಪಕ್ಕದ ಗಟಾರಿನಿಂದ ನೀರು ಉಕ್ಕಿ ಹರಿಯಿತು
ರಾಯಚೂರಿನ ಸರಾಫ್ ಬಜಾರ್‌ನಲ್ಲಿ ರಸ್ತೆ ಪಕ್ಕದ ಗಟಾರಿನಿಂದ ನೀರು ಉಕ್ಕಿ ಹರಿಯಿತು
ಲಿಂಗಸುಗೂರಲ್ಲಿ ಸುರಿದ ಧಾರಾಕಾರ ಮಳೆಗೆ ಸೋಮವಾರ ಶಾಸಕರ ಶಾಲಾ ಆವರಣ ಜಲಾವೃತಗೊಂಡಿರುವುದು
ಲಿಂಗಸುಗೂರಲ್ಲಿ ಸುರಿದ ಧಾರಾಕಾರ ಮಳೆಗೆ ಸೋಮವಾರ ಶಾಸಕರ ಶಾಲಾ ಆವರಣ ಜಲಾವೃತಗೊಂಡಿರುವುದು
ಸಿಂಧನೂರಿನ ಮಹಿಬೂಬಿಯಾ ಕಾಲೊನಿಯಲ್ಲಿ ಗಾಳಿ-ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿರುವುದು
ಸಿಂಧನೂರಿನ ಮಹಿಬೂಬಿಯಾ ಕಾಲೊನಿಯಲ್ಲಿ ಗಾಳಿ-ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿರುವುದು

ಲಿಂಗಸುಗೂರಿನಲ್ಲಿ ಧಾರಾಕಾರ ಮಳೆ

ತಾಲ್ಲೂಕಿನಾದ್ಯಂತ ಭಾನುವಾರ ಮಧ್ಯರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಭಾರಿ ಪ್ರಮಾಣದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ತಾಲ್ಲೂಕಿನ ಲಿಂಗಸುಗೂರಿನಲ್ಲಿ 34ಎಂಎಂ ಮುದಗಲ್‌ನಲ್ಲಿ 13 ಎಂಎಂ ಗುರುಗುಂಟಾದಲ್ಲಿ 26 ಎಂಎಂ ಹಟ್ಟಿಯಲ್ಲಿ 27ಎಂಎಂ ಮಳೆಯಾಗಿರುವುದು ವರದಿಯಾಗಿದೆ. ಧಾರಾಕಾರ ಮಳೆಗೆ ಬಹುತೇಕ ಶಾಲೆ–ಕಾಲೇಜುಗಳ ಆವರಣಗಳು ಜಲಾವೃತಗೊಂಡಿದ್ದು ಕೆಲವೆಡೆ ತಾರಸಿ ಸೋರಿಕೆಯಿಂದ ತೊಂದರೆ ಆಗಿರುವುದಾಗಿ ಶಿಕ್ಷಣ ಇಲಾಖೆ ಮೂಲಗಳು ದೃಢಪಡಿಸಿವೆ. ಧಾರಾಕಾರ ಮಳೆ ಗಾಳಿಗೆ ಬಹುತೇಕ ಕಡೆಗಳಲ್ಲಿ ಗಿಡ–ಮರಗಳು ಉರುಳಿ ಬಿದ್ದು ವಿದ್ಯುತ್‍ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಒಂದೆರೆಡು ಕಡೆ ಮನೆಗಳು ಬಿದ್ದಿದ್ದು ಬಿಟ್ಟರೆ ಯಾವುದೇ ನಷ್ಟ ಸಂಭವಿಸಿಲ್ಲ. ‘ಧಾರಾಕಾರ ಮಳೆಗೆ ಯಾವುದೇ ನಷ್ಟ ಸಂಭವಿಸಿಲ್ಲ. ಮಳೆಗಾಲ ಆರಂಭಗೊಂಡಿದ್ದು ಜನರು ಕೂಡ ಮುಂಜಾಗ್ರತೆ ವಹಿಸಬೇಕು’ ಎಂದು ತಹಶೀಲ್ದಾರ್‌ ಮಲ್ಲಪ್ಪ ಯರಗೋಳ ಸಲಹೆ ನೀಡಿದ್ದಾರೆ.

ವಿದ್ಯುತ್ ಸಂಪರ್ಕ ಕಡಿತ:

ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಬಿರುಗಾಳಿ ಗುಡುಗು–ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಗಾಳಿಯಿಂದಾಗಿ ಬಹುತೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಸಾರ್ವಜನಿಕರು ಪರದಾಡಿದರು. ಭಾನುವಾರ ರಾತ್ರಿ 11ರಿಂದ ಸೋಮವಾರ ಬೆಳಗಿನ ಜಾವ 3 ಗಂಟೆಯವರೆಗೆ ಮಳೆಯಾಗಿದೆ. ಪಟ್ಟಣದಲ್ಲಿ ಚರಂಡಿ ತುಂಬಿ ರಸ್ತೆ ಮೇಲೆ ನೀರು ಹರಿದಿದೆ. ತಾಲ್ಲೂಕಿನ ಮಾರಲದಿನ್ನಿ ಸಮೀಪದ ಮಸ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಎರಡು ದಿನಗಳಲ್ಲಿ 10 ಅಡಿ ನೀರು ಹರಿದು ಬಂದಿದ್ದು ಜಲಾಶಯ ಭರ್ತಿಗೆ 19 ಅಡಿ ನೀರು ಬರಬೇಕಾಗಿದೆ’ ಎಂದು ಯೋಜನೆಯ ಎಂಜಿನಿಯರ್ ದಾವುದ್ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ. ಮಳೆ ಪ್ರಮಾಣ: ‘ಮಸ್ಕಿಯಲ್ಲಿ 14.06 ಎಂ.ಎಂ ತಲೇಖಾನ 50 ಎಂ.ಎಂ ಹಾಲಾಪುರ 26 ಎಂ.ಎಂ ಪಾಮನಕೆಲ್ಲೂರು 36.02 ಎಂ.ಎಂ ಬಳಗಾನೂರು 30.06 ಎಂ.ಎಂ ಹಾಗೂ ಗುಡದೂರಿನಲ್ಲಿ 7.03 ಎಂ.ಎಂ ಮಳೆಯಾಗಿದೆ’ ಎಂದು ತಹಶೀಲ್ದಾರ್ ಸುಧಾ ಅರಮನೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT