ಶುಕ್ರವಾರ, ನವೆಂಬರ್ 27, 2020
20 °C

ರಾಯಚೂರು: ಸರಳವಾಗಿ ಈದ್ ಮಿಲಾದ್ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ಮುಸ್ಲಿಮರು ಆಚರಿಸುವ ಈದ್ ಮಿಲಾದ್ ಹಬ್ಬವನ್ನು ಶುಕ್ರವಾರ ಜಿಲ್ಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಪ್ರತಿ ಬಾರಿ ಮುಖಂಡರಿಂದ ಮಸೀದಿಗಳಲ್ಲಿ ಅನ್ನಸಂತರ್ಪಣೆ ಮಾಡಲಾಗುತ್ತಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸಾಕಷ್ಟು ಮಸೀದಿಗಳಲ್ಲಿ ಊಟ ಮಾಡಿಸದೇ ಮನೆಗಳಲ್ಲಿಯೇ ಸಿಹಿ ಊಟ ಹಂಚಿದರು. ಆಯಾ ಬಡಾವಣೆಗಳ ಮಸೀದಿಗಳಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಸುವ ಜುಲೂಸ್ (ಮೆರವಣಿ) ಗೆ ಈ ಬಾರಿ ಅನುಮತಿ ನೀಡದ ಕಾರಣ, ಮನೆಯಲ್ಲಿಯೇ ಸಂಭ್ರಮಾಚರಣೆ ಮಾಡಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ತೀನ್ ಖಂದಿಲ್ ವೃತ್ತದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸರ್ಕಾರದ ಮಾರ್ಗಸೂಚಿಯ ಪ್ರಕಾರ ಹಬ್ಬದ ಆಚರಣೆಗೆ ಮುಂದಾಗಿರುವ ಜನರು ಕೆಲವೇ ಸಂಖ್ಯೆಗಳಲ್ಲಿ ಜನರು ಸೇರಿ ಪ್ರಮುಖ ರಸ್ತೆಗಳ ಹಾಗೂ ಕೆಲ ಬಡಾವಣೆಗಳಲ್ಲಿ ತಂಪು ಪಾನೀಯ, ಸಿಹಿ ಹಂಚಿದರು. ಕೆಲ ಸಂಘಟನೆ ಹಾಗೂ ಯುವಕರು ನಗರದ ಅನಾಥ ಆಶ್ರಮಗಳಲ್ಲಿ ಮಕ್ಕಳಿಗೆ ಅನ್ನ ಸಂತರ್ಪಣೆ ಮಾಡಿದರು.

ಮುಸ್ಲಿಮರು ತಮ್ಮ ಮನೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದ್ದರು.  ಸಿಹಿ ಖಾದ್ಯಗಳನ್ನು ಮಾಡಿ ಪರಸ್ಪರ ಹಂಚಿಕೊಂಡು ಪ್ರವಾದಿ ಮುಹಮ್ಮದರ ಜನ್ಮ ದಿನವನ್ನು ಸರಳವಾಗಿ ಆಚರಿಸಿದರು. ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಮರು ಅಂಗಡಿ, ಮುಂಗಟ್ಟು ಬಂದ್ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ವರ್ಷ ಧ್ವನಿವರ್ಧಕಗಳ ಅಬ್ಬರ ಇರಲಿಲ್ಲ. ನಗರದ ಹೃದಯ ಭಾಗದ ತೀನ್ ಖಂದಿಲ್, ಸರಾಫ್ ಬಜಾರ್ ಮತ್ತಿತರೆಡೆ ಮದ್ಯಾಹ್ನದ ಬಳಿಕ ಹಣ್ಣು, ಟೀ ಅಂಗಡಿ, ಹೂವಿನ ವ್ಯಾಪಾರ ಇತ್ತು. ಆದರೆ ಎಂದಿನಂತೆ ವ್ಯಾಪಾರ ಇರಲಿಲ್ಲ.

ಪ್ರವಾದಿ ಮುಹಮ್ಮದ್‌ ಅವರ ಜೀವನ ಹಾಗೂ ಸಂದೇಶಗಳನ್ನು ವೈಯಕ್ತಿಕವಾಗಿ ಮನನ ಮಾಡಿಕೊಳ್ಳುವುದಕ್ಕೆ ಈ ವರ್ಷ ಅನುವು ಮಾಡಿತು. ಮನೆಗಳಲ್ಲಿ ಸಂಭ್ರಮಾಚರಣೆ ಇತ್ತು. ಸಾರ್ವಜನಿಕವಾಗಿ ಗುಂಪಾಗುವುದಕ್ಕೆ ಅವಕಾಶ ಇರಲಿಲ್ಲ. ಮೊಬೈಲ್‌ ಸಂದೇಶಗಳನ್ನು ಕಳುಹಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.