ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಂಧನೂರು | ಆತ್ಮಹತ್ಯೆ ಪ್ರಕರಣ: ನ್ಯಾಯಾಂಗ ತನಿಖೆಗೆ ಆಗ್ರಹ

ಮಿನಿವಿಧಾನಸೌಧ ಮುಂದೆ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
Published 21 ಫೆಬ್ರುವರಿ 2024, 15:36 IST
Last Updated 21 ಫೆಬ್ರುವರಿ 2024, 15:36 IST
ಅಕ್ಷರ ಗಾತ್ರ

ಸಿಂಧನೂರು: ‘ತಾಲ್ಲೂಕಿನ ಗುಂಜಳ್ಳಿ ಗ್ರಾಮದ ವಿದ್ಯಾರ್ಥಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕರ ಮೆಟ್ರಿಕ್ ನಂತರ ವಸತಿ ನಿಲಯದಲ್ಲಿ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಘಟಕದಿಂದ ಬುಧವಾರ ಸ್ಥಳೀಯ ಮಿನಿವಿಧಾನಸೌಧ ಮುಂದೆ ಪ್ರತಿಭಟನೆ ನಡೆಸಲಾಯಿತು.

‘‌ವಿದ್ಯಾರ್ಥಿ ಕುಟುಂಬಕ್ಕೆ ಪರಿಹಾರ, ಉದ್ಯೋಗ ಹಾಗೂ ಸರ್ಕಾರಿ ಭೂಮಿ ಮಂಜೂರು ಮಾಡಬೇಕು’ ಎಂದೂ ಆಗ್ರಹಿಸಲಾಯಿತು.

ಒಕ್ಕೂಟದ ಸಂಚಾಲಕ ನಿರುಪಾದಿ ಸಾಸಲಮರಿ ಮಾತನಾಡಿ, ‘ನಗರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮೇಲ್ಭಾಗದ ಡಾ.ಅಂಬೇಡ್ಕರ್ ಹಾಸ್ಟೆಲ್‌ ವಿದ್ಯಾರ್ಥಿ ಹಿರೇಹುಸೇನಪ್ಪ ಮೂಲಸೌಕರ್ಯಗಳ ಕುರಿತು ವಾರ್ಡನ್ ರವಿಚಂದ್ರ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಾ ಅವರನ್ನು ಪ್ರಶ್ನಿಸಿದ್ದ. ಅದಕ್ಕೆ ಅಧಿಕಾರಿಗಳು ಜಾತಿ ನಿಂದನೆ ಮಾಡಿದಷ್ಟೇ ಅಲ್ಲದೆ, ಇತರೆ ವಿದ್ಯಾರ್ಥಿಗಳಿಂದ ದೌರ್ಜನ್ಯ ಮಾಡಿಸಿ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಕುರಿತು ವಿಚಾರಿಸಲು ಬಂದ ಪೋಷಕರಿಗೂ ಅಧಿಕಾರಿಗಳು ಸಿಕ್ಕಿಲ್ಲ. ಇದರಿಂದ ಮನನೊಂದ ವಿದ್ಯಾರ್ಥಿ ಹಿರೇಹುಸೇನಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಅಧಿಕಾರಿಗಳೇ ನೇರ ಹೊಣೆ’ ಎಂದು ಕಿಡಿಕಾರಿದರು.

‘ಹಿರೇಹುಸೇನಪ್ಪ ಅವರ ಪೋಷಕರು ಬಡವರು. ಅವರಿಗೆ ಸರ್ಕಾರ ₹25 ಲಕ್ಷ ಪರಿಹಾರ, ಉದ್ಯೋಗ ಹಾಗೂ ಸರ್ಕಾರಿ ಭೂಮಿ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸಲ್ಲಿಸಿರುವ ಮನವಿ ಪತ್ರದಲ್ಲಿ ಹೇಳಿರುವ ಅಂಶಗಳು ಸತ್ಯಕ್ಕೆ ದೂರವಿದ್ದು, ಅದನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ದಲಿತ ಸಂಘಟನೆಗಳೆಲ್ಲ ಒಗ್ಗೂಡಿ ತಾಲ್ಲೂಕಿನಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಮನವಿ ಪತ್ರ ಸ್ವೀಕರಿಸಿದರು. ಮುಖಂಡರಾದ ಹನುಮಂತಪ್ಪ ಹಂಪನಾಳ, ಯಮನೂರಪ್ಪ ಪರಾಪೂರ, ಖಾಸಿಮಪ್ಪ ಗುಂಜಳ್ಳಿ, ಶಿವರಾಜ ಉಪ್ಪಲದೊಡ್ಡಿ, ಬಸವರಾಜ ತಿಡಿಗೋಳ, ಜಯಣ್ಣ ಉಪ್ಪಲದೊಡ್ಡಿ, ಪರಶುರಾಮ ದೀನಸಮುದ್ರ, ಬಸವರಾಜ ಧುಮತಿ, ಮುತ್ತು ಸಾಗರ, ಎಂ.ಬಿ.ದೊಡ್ಡಮನಿ, ಕೆ.ಮರಿಯಪ್ಪ, ಕೆ.ಪರಶುರಾಮ, ಹುಸೇನಪ್ಪ ದಾರಿಮನಿ, ಸಿದ್ದಪ್ಪ ಸೋಮಲಾಪುರ, ನರಸಪ್ಪ ಕಟ್ಟಿಮನಿ, ಮುನಿಯಪ್ಪ, ವೀರೇಶ, ಚನ್ನಬಸವ ಯದ್ದಲದೊಡ್ಡಿ, ಹುಲುಗಪ್ಪ ಸತ್ಯವತಿ ಕ್ಯಾಂಪ್, ಸುರೇಶ ಎಲೆಕೂಡ್ಲಿಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT