ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿರವಾರ | ಬಡ ವಿದ್ಯಾರ್ಥಿಗಳಿಗೆ ಆಸರೆ ವಿಜ್ಞಾನ ಕಾಲೇಜು

ಸಿರವಾರ ಸರ್ಕಾರಿ ಪಿಯು ಕಾಲೇಜಿನಲ್ಲಿ 308 ಮಕ್ಕಳ ದಾಖಲಾತಿ
ಪಿ.ಕೃಷ್ಣ ಸಿರವಾರ
Published 23 ಜೂನ್ 2024, 5:26 IST
Last Updated 23 ಜೂನ್ 2024, 5:26 IST
ಅಕ್ಷರ ಗಾತ್ರ

ಸಿರವಾರ: ಸರ್ಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿ ಎಸ್ಎಸ್ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದು ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಳ್ಳುವ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜಿನಲ್ಲಿ ಓದುವುದು ಅನಿವಾರ್ಯ. ಉಪನ್ಯಾಸಕರ ಕೊರತೆಯ ನಡುವೆಯೂ ಅತಿಥಿ ಉಪನ್ಯಾಸಕರ ಸಹಕಾರದಿಂದ ಉತ್ತಮ ಶಿಕ್ಷಣ ನೀಡಿ ಬಡ ವಿದ್ಯಾರ್ಥಿಗಳ ಕೈ ಹಿಡಿಯುತ್ತಿರುವುದು ಸಿರವಾರ ತಾಲ್ಲೂಕಿನ ವಿಜ್ಞಾನ ವಿಭಾಗದ ಏಕೈಕ ಪದವಿ ಪೂರ್ವ ಕಾಲೇಜು.

ಇಲ್ಲಿನ ಕಾಲೇಜಿನ ಉತ್ತಮ ಶಿಕ್ಷಣಕ್ಕೆ ಸಹಕಾರಿ ಎಂಬಂತೆ ರಾಜ್ಯಕ್ಕೆ ಮಂಜೂರಾದ ಆದರ್ಶ ವಿಜ್ಞಾನ ವಿಭಾಗದ 40 ಕಾಲೇಜುಗಳಲ್ಲಿ ಪಟ್ಟಣದ ಕಾಲೇಜು ಕೂಡ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಅದಕ್ಕೆ ಪೂರಕವಾದ ಡಿಜಿಟಲ್ ಲ್ಯಾಬ್, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಸರ್ಕಾರದಿಂದ ಬರುವ ಅನುಕೂಲಗಳನ್ನು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ಒದಗಿಸಲು ಅಗತ್ಯ ಕೊಠಡಿಗಳ ವ್ಯವಸ್ಥೆಗಳನ್ನು ಸಿದ್ಧತೆ ಮಾಡಿಕೊಂಡಿದ್ದಾರೆ ಪ್ರಚಾರ್ಯ ಮತ್ತು ಉಪನ್ಯಾಸಕರು.

ಕಲಾ ವಿಭಾಗದಲ್ಲಿ 154, ವಾಣಿಜ್ಯ ವಿಭಾಗದಲ್ಲಿ 16 ಹಾಗೂ ವಿಜ್ಞಾನ ವಿಭಾಗದಲ್ಲಿ 138 ವಿದ್ಯಾರ್ಥಿಗಳು ಒಟ್ಟು 308 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಮೂರು ವಿಭಾಗಗಳಲ್ಲಿ ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿದ್ದರೂ ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳ ಕೊರತೆ ಅನುಭವಿಸುವಂತಾಗಿದೆ.

ವಿಜ್ಞಾನ ವಿಭಾಗದ ಉಪನ್ಯಾಸಕರ ಕಾಳಜಿ ಪಾಲಕರ ಮತ್ತು ವಿದ್ಯಾರ್ಥಿಗಳ ವಿಶ್ವಾಸ ಗಳಿಸಿದೆ. ಪ್ರತಿ ವರ್ಷವೂ ವಿಜ್ಞಾನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿರುವುದು ಕಾಲೇಜಿನ ಉಪನ್ಯಾಸಕರ ಶ್ರಮಕ್ಕೆ ಸಾಕ್ಷಿಯಾಗಿದೆ.

ಭೌತಶಾಸ್ತ್ರ ಉಪನ್ಯಾಸಕ ಶಿಕ್ಷಣ ಪ್ರೇಮ: 2009ರಲ್ಲಿ ವಿಜ್ಞಾನ ವಿಭಾಗವು ಇಬ್ಬರು ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾಯಿತು. 2011ರಲ್ಲಿ ವಿಜ್ಞಾನ ವಿಭಾಗದ ಭೌತಶಾಸ್ತ್ರ ಉಪನ್ಯಾಸಕ ಮಹ್ಮದ್ ಫರೀದ್ ಅಹ್ಮದ್ ಅವರು ಕಾಲೇಜಿಗೆ ಬೇರೆಡೆಯಿಂದ ವರ್ಗವಾಗಿ ಬಂದ ನಂತರ ಅವರ ವಿಶೇಷ ಕಾಳಜಿಯಲ್ಲಿ ಅಗತ್ಯ ವಿಷಯದ ಮಾರ್ಗದರ್ಶನವು ಸ್ಥಳೀಯ ಮತ್ತು ತಾಲ್ಲೂಕಿನ ಹಳ್ಳಿಗಳ ಬಡ ವಿದ್ಯಾರ್ಥಿಗಳನ್ನು ವಿಜ್ಞಾನ ವಿಭಾಗಕ್ಕೆ ಸೆಳೆಯುವಂತಾಯಿತು. ಉಪನ್ಯಾಸಕ ಮಹ್ಮದ್ ಫರೀದ್ ಅಹ್ಮದ್ ಅವರು ಪ್ರಾರಂಭದಿಂದಲೂ ವಿಜ್ಞಾನ ವಿಭಾಗಕ್ಕೆ ಬರುವ ಪ್ರಥಮ ಪಿಯು ವಿದ್ಯಾರ್ಥಿನಿಯರಿಗೆ ತಮ್ಮ ಸ್ವಂತ ಖರ್ಚಿನಿಂದ ಕಾಲೇಜಿನ ಶುಲ್ಕ ಭರಿಸುವ ಮೂಲಕ ದಾಖಲಾತಿ ಹೆಚ್ಚಿಸಿ, ಉತ್ತಮ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಪ್ರೇರಣೆಯಾಗಿದ್ದಾರೆ.

ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯವಾದ ಸೌಲಭ್ಯಗಳನ್ನು ಹೊಂದಿದೆ.

ಅತಿಥಿ ಉಪನ್ಯಾಸಕರೇ ಆಧಾರ: ಕಾಲೇಜಿಗೆ ಅಗತ್ಯ ಇರುವ 13 ಹುದ್ದೆಗಳಲ್ಲಿ ಕನ್ನಡ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್ ಸೇರಿದಂತೆ ವಿಜ್ಞಾನ ವಿಭಾಗದ 3 ಉಪನ್ಯಾಸಕರ ಕೊರತೆ ಸೇರಿದಂತೆ ಅಗತ್ಯವಾದ 7 ಮತ್ತು 2 ಹೆಚ್ಚುವರಿ ಉಪನ್ಯಾಸಕರ ಕೊರತೆಯಿದೆ. ಅತಿಥಿ ಉಪನ್ಯಾಸಕರೇ ಸದ್ಯ ಆಸರೆಯಾಗಿದ್ದಾರೆ.

ಅಧಿಕಾರಿಗಳ ಸಹಕಾರ ಅಗತ್ಯ: ಕಾಲೇಜಿನ ಅವಧಿಯ ನಂತರ ಕಾಂಪೌಂಡ್ ಗೋಡೆಯಿಂದ ಒಳಬರುವ ಕಿಡಿಗೇಡಿಗಳು ಮಲ-ಮೂತ್ರ ವಿಸರ್ಜನೆ, ಮದ್ಯಪಾನ ಮಾಡಿ ಕಾಲೇಜು ಸುತ್ತಲೂ ಗಲೀಜು ಮಾಡುತ್ತಿದ್ದು, ಇದರ ವಾಸನೆ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಉಂಟಾಗುವಂತಾಗಿದೆ. ಸ್ಥಳೀಯ ಆಡಳಿತ ಮಂಡಳಿ ಮತ್ತು ಪೊಲೀಸ್ ಇಲಾಖೆ ಕಿಡಿಗೇಡಿಗಳ ಉಪಟಳಕ್ಕೆ ಕಡಿವಾಣ ಹಾಕಿದರೆ ಮಾತ್ರ ಅನುಕೂಲವಾಗಲಿದೆ.

ವಿದ್ಯಾರ್ಥಿಗಳ ಜೊತೆಗೆ ಉಪನ್ಯಾಸಕರ ಉತ್ತಮ ಬಾಂಧವ್ಯ ಮತ್ತು ಪಾಠಗಳ ಮನನ ಸಮರ್ಪಕವಾಗಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಸಹಕಾರಿಯಾಗಿದೆ.
ವೆಂಕಟೇಶ ನವಲಕಲ್ಲು, ಪ್ರಾಚಾರ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜು ಸಿರವಾರ
ನಮ್ಮಲ್ಲಿ ಈಗಾಗಲೇ ಉಪನ್ಯಾಸಕರು ಎಲ್ಲ ವಿಷಯಗಳ ಪಾಠಗಳನ್ನು ಪ್ರಾರಂಭಿಸಿದ್ದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳಾದರೂ ನಮಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡುತ್ತಿದ್ದಾರೆ.
ಭಾವನಾ, ಪ್ರಥಮ ಪಿಯುಸಿ ವಿಜ್ಞಾನ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT