ಬುಧವಾರ, ಏಪ್ರಿಲ್ 14, 2021
31 °C

ರಾಯಚೂರು ವಿವಿಗೆ ₹ 600 ಕೋಟಿ ಬೇಡಿಕೆ: ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿಶ್ವವಿದ್ಯಾಲಯ ಸಮಗ್ರ ಕ್ಯಾಂಪಸ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ ₹600 ಕೋಟಿ ಅನುದಾನ ಕೋರಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಂಪಸ್ ನಿರ್ಮಾಣದ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ, ಸಮುದಾಯದಿಂದ ಹಾಗೂ ಜನಪ್ರತಿನಿಧಿಗಳಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ. ಕುಲಪತಿಯಾಗಿ ನೇಮಕವಾದ 100 ದಿನಗಳಲ್ಲಿ ಯಾವ ಕೆಲಸಗಳಾಗಿವೆ ಎಂಬುದನ್ನು ಹಂಚಿಕೊಳ್ಳುವ ಉದ್ದೇಶವಿದೆ. ಎಲ್ಲರಿಂದಲೂ ಸಲಹೆ ಪಡೆದು ಮಾದರಿ ಕ್ಯಾಂಪಸ್ ನಿರ್ಮಿಸಲಾಗುವುದು ಎಂದರು.
ಈ ವರ್ಷ ಕೋವಿಡ್ ಇರುವುದರಿಂದ ರಾಜ್ಯ ಸರ್ಕಾರದಿಂದ ಕನಿಷ್ಠ ₹100 ಕೋಟಿ ಅನುದಾನ ಸಿಗುವ ನಿರೀಕ್ಷೆ ಇದೆ. ಅದರಲ್ಲಿ ಆಡಳಿತ ಭವನ, ಪಾಠದ ಕೋಣೆಗಳು, ವಸತಿಗಳು, ತಾತ್ಕಾಲಿಕ ನೇಮಕಾತಿಗಳನ್ನು ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಇದಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ), ಆರ್ ಟಿಪಿಎಸ್ ನಿಂದಲೂ ಸಹಕಾರ ಕೋರಲಾಗಿದೆ. ಬಯೋ ಮೆಡಿಕಲ್ ರಿಸರ್ಚ್ ಸೆಂಟರ್ ಸ್ಥಾಪಿಸಲು ₹57 ಕೋಟಿ ಅನುದಾನವನ್ನು ಕೆಕೆಆರ್ ಡಿಬಿಯಿಂದ ಕೇಳಲಾಗಿದೆ ಎಂದು ತಿಳಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಅಗತ್ಯ ಸಹಕಾರ ಸಿಗುತ್ತಿದ್ದು, ಈಗಾಗಲೇ ಪ್ರತ್ಯೇಕ ಹಣಕಾಸು ಖಾತೆ ನಿರ್ವಹಣೆ ಆರಂಭಿಸುವುದಕ್ಕೆ ಒಪ್ಪಿಗೆ ನೀಡಿದೆ. ಈ ಮೊದಲು ರಾಜ್ಯ ಸರ್ಕಾರವು ರಾಯಚೂರು ವಿಶ್ವವಿದ್ಯಾಲಯಕ್ಕಾಗಿ ನೀಡಿದ್ದ ₹2.24 ಕೋಟಿ ಅನುದಾನವನ್ನು ಗುಲಬರ್ಗಾ ವಿಶ್ವವಿದ್ಯಾಲಯದವರು ಕೊಡುತ್ತಿದ್ದಾರೆ. ಮಾರ್ಚ್ ಅಂತ್ಯದೊಳಗೆ ಪ್ರತ್ಯೇಕವಾಗುವ ಪ್ರಕ್ರಿಯೆಗಳೆಲ್ಲ ಮುಗಿಯಲಿವೆ ಎಂದು ಹೇಳಿದರು.

ಮುಂದಿನ‌ ಶೈಕ್ಷಣಿಕ ‌ವರ್ಷದಿಂದ ರಾಯಚೂರು ವಿಶ್ವವಿದ್ಯಾಲಯದಿಂದ 25 ಕೋರ್ಸ್ ಗಳನ್ನು ಆರಂಭಿಸಲಾಗುವುದು. ಪ್ರತಿ‌ ವಿಭಾಗಕ್ಕೂ ಒಬ್ಬರು ಪ್ರೊಫೆಸರ್, ಇಬ್ಬರು ರಿಡರ್ಸ್ ನೇಮಕದ ಅಗತ್ಯವಿದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು