ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು ಜನರ ಸಹಕಾರಕ್ಕೆ ಎಸ್‌ಪಿ ಶಹಬ್ಬಾಷ್

ಬಿ.ಎ. ನಂದಿಕೋಲಮಠ
Published 30 ಜೂನ್ 2024, 7:12 IST
Last Updated 30 ಜೂನ್ 2024, 7:12 IST
ಅಕ್ಷರ ಗಾತ್ರ

ಲಿಂಗಸುಗೂರು: ‘ಬಸವಸಾಗರ ವೃತ್ತದ ಕಲಬುರಗಿ ರಸ್ತೆಯಲ್ಲಿ ಶುಕ್ರವಾರ ರಾತ್ರಿ ದರೋಡೆಕೋರ ಬಂಧನ ಕಾರ್ಯಾಚರಣೆ ಸಂದರ್ಭದಲ್ಲಿ ಪಟ್ಟಣದ ನಾಗರಿಕರು ಸೇರಿದಂತೆ ಯುವಕರು ಪೊಲೀಸ್‍ ಇಲಾಖೆಗೆ ನೀಡಿರುವ ಸಹಕಾರ ಮೆಚ್ಚುವಂತಹದ್ದು’ ಎಂದು ರಾಯಚೂರು ಪೊಲೀಸ್‍ ವರಿಷ್ಠಾಧಿಕಾರಿ ನಿಖಿಲ್‍ ಬಿ. ಪ್ರಶಂಸಿಸಿದ್ದಾರೆ.

ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ‘ಪೊಲೀಸ್‍ ಅಧಿಕಾರಿಗಳ ನೇತೃತ್ವದ ತಂಡದ ಮೇಲೆ ದರೋಡೆಕೋರರು ವಾಹನ ಜಖಂಗೊಳಿಸಿ ಕೊಲೆಗೆ ಯತ್ನ ನಡೆಸುವ ಜೊತೆಗೆ ಖಾರದ ಪುಡಿ, ರಾಡ್‍, ಮಚ್ಚುಗಳಿಂದ ಹಲ್ಲೆಗೆ ಮುಂದಾದಾಗ ಯುವಕರು ಹೆಚ್ಚಿನ ಅನಾಹುತ ತಪ್ಪಿಸಿ ಬಂಧನಕ್ಕೆ ಮುಂದಾಗಿದ್ದು ಮರೆಯಲಾಗದು’ ಎಂದರು.

‘ಶುಕ್ರವಾರ 10.30ಕ್ಕೆ ಕರ್ತವ್ಯದಲ್ಲಿದ್ದ ಪೊಲೀಸ್‍ ಅಧಿಕಾರಿಗೆ ದರೋಡೆಕೋರರ ತಂಡದ ಚಲನೆಯ ಬಗ್ಗೆ ಮಾಹಿತಿ ದೊರೆತಿತ್ತು. 11ರಿಂದ 1.30ರ ಸಮಯದಲ್ಲಿ ಕಾರ್ಯಾಚರಣೆ ನಡೆಸಿದಾಗ ಬಿದ್ದು ಗಾಯಗೊಂಡಿದ್ದ ಆರೋಪಿಗಳು, ಹಲ್ಲೆಗೊಳಗಾದ ಯುವಕರು ಮತ್ತು ಪೊಲೀಸ್‍ ಸಿಬ್ಬಂದಿಗೆ ಚಿಕಿತ್ಸೆ ಕೊಡಿಸಿ, ಪಂಚನಾಮೆ ಬಳಿಕ ಮಧ್ಯರಾತ್ರಿ 2 ಗಂಟೆಗೆ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದರು.

ಜಿಲ್ಲಾ ಮಟ್ಟದ ವೈಜ್ಞಾನಿಕ ಮತ್ತು ವಿನೂತನ ತಂತ್ರಜ್ಞಾನದ ಸಮಗ್ರ ಮಾಹಿತಿ ಹೊಂದಿರುವ ಸುಕೊ ತಂಡದಿಂದ ವಿಶೇಷ ಪರೀಕ್ಷೆಗಳ ತನಿಖೆ ನಡೆಸಲಾಗಿದೆ. ಬಂಧಿತ ಆರೋಪಿಗಳ ಪೈಕಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸದ್ಯದ ಮಾಹಿತಿ ಪ್ರಕಾರ ಗುರುರಾಜ ಚವ್ಹಾಣ ಮೇಲೆ ಮೂರು ಪ್ರಕರಣಗಳು, ಕುಮಾರ ಚವ್ಹಾಣ ಮೇಲೆ ಹನ್ನೊಂದು ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯ ವಾಗಿದೆ ಎಂದು ಮೂಲಗಳು ದೃಢಪಡಿಸಿವೆ.

ಯುವಕರ ಉತ್ಸಾಹ: ಶುಕ್ರವಾರ ರಾತ್ರಿ 11ಗಂಟೆಗೆ ಪೊಲೀಸ್‍ ಅಧಿಕಾರಿ ತಂಡ ನಡೆಸಿದ ಕಾರ್ಯಾಚರಣೆ ವೇಳೆ  ಪೊಲೀಸ್‍ ಜೀಪ್‍ ಜಖಂ ಮಾಡಿ ಹಲ್ಲೆಗೆ ಮುಂದಾಗಿದ್ದನ್ನು ಗಮನಿಸಿದ ಯುವಕರು ಪೊಲೀಸರ ಸಹಾಯಕ್ಕೆ ಬಂದು ಆರೋಪಿಗಳ ಬಂಧನಕ್ಕೆ ಸಹಕರಿಸಿದರು. ಪರಾರಿಯಾದರನ್ನು ಹಿಡಿಯಲು ಅಹೋರಾತ್ರಿ ಹುಡುಕಾಟ ದಲ್ಲೂ ಪೊಲೀಸರಿಗೆ ನೆರವಾದರು. 

ಸ್ಕಾರ್ಪಿಯೊ ಜೀಪ್‍ ಎಷ್ಟು ಅತಿ ವೇಗವಾಗಿ ಆಗಮಿಸಿತ್ತೊ ಅಷ್ಟೇ ವೇಗವಾಗಿ ಹಿಂಬಾಗಕ್ಕೆ ಚಲಿಸಿದಾಗಿನ ಚಿತ್ರಣಕ್ಕೆ ಪೊಲೀಸ್‍ ಸಿಬ್ಬಂದಿ ತಬ್ಬಿಬ್ಬಾಗಿದ್ದರು. ಚಾಲಕನ ಅಚಾತುರ್ಯ, ಖಾರದ ಪುಡಿ ಎರಚಾಟ, ರಾಡ್‍ಗಳಿಂದ ಹಲ್ಲೆಗೆ ಮುಂದಾದ ಚಿತ್ರಣ, ಜೀವದ ಹಂಗು ತೊರೆದು ಆರೋಪಿಗಳನ್ನು ಹಿಡಿದ ಯುವಕರ ಮಾತುಗಳು ಸಿನಿಮಾ ಚಿತ್ರೀಕರಣದಂತೆ ಬಾಸವಾದವು.

ಹೆಚ್ಚುವರಿ ಪೊಲೀಸ್‍ ವರಿಷ್ಠಾಧಿಕಾರಿ ಹರೀಶ ಬಾಬು, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್‍, ಸಿಪಿಐಗಳಾದ ಕೆ. ಹೊಸಕೇರಪ್ಪ, ಪುಂಡಲಿಕ್‍ ಪಟತ್ತರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT