₹29.47 ಲಕ್ಷ ಮೌಲ್ಯದ ಸ್ವತ್ತು ಮಾಲೀಕರಿಗೆ ವಾಪಸ್‌

ಮಂಗಳವಾರ, ಜೂಲೈ 16, 2019
28 °C
ಜಿಲ್ಲೆಯ ವಿವಿಧೆಡೆ ಪೊಲೀಸರ ಕಾರ್ಯಾಚರಣೆ: 48 ಆರೋಪಿಗಳ ಬಂಧನ

₹29.47 ಲಕ್ಷ ಮೌಲ್ಯದ ಸ್ವತ್ತು ಮಾಲೀಕರಿಗೆ ವಾಪಸ್‌

Published:
Updated:
Prajavani

ರಾಯಚೂರು: ಅಜಾಗರೂಕತೆ ವಹಿಸಿದ್ದಕ್ಕಾಗಿ ಅಥವಾ ಕಳ್ಳರು ಕೈಚಳಕ ತೋರಿಸಿದ ಕಾರಣದಿಂದ ಕೈಬಿಟ್ಟುಹೋಗಿದ್ದ ನಗದು, ಚಿನ್ನಾಭರಣಗಳು, ಬೈಕ್‌ ಹಾಗೂ ಇತರೆ ಸಾಮಗ್ರಿಗಳನ್ನು ಕಳ್ಳರಿಂದ ಪೊಲೀಸರು ಯಶಸ್ವಿಯಾಗಿ ಜಪ್ತಿ ಮಾಡಿಕೊಂಡಿದ್ದು, ಅವುಗಳನ್ನು ಮಾಲೀಕರಿಗೆ ವಾಪಸ್‌ ನೀಡುತ್ತಿದ್ದಾರೆ ಎನ್ನುವ ಸುದ್ದಿಯನ್ನು ತಿಳಿದು ಪ್ರಕರಣಕ್ಕೆ ಸಂಬಂಧಿಸಿ ದೂರುದಾರರು ಮುಖದಲ್ಲಿ ಮಂದಹಾಸ ತುಂಬಿಕೊಂಡು ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಸೋಮವಾರ ನೆರೆದಿದ್ದರು.

2019ರ ಜನವರಿ 1 ರಿಂದ ಜೂನ್‌ 30 ರವರೆಗೂ ಜಿಲ್ಲೆಯಲ್ಲಿ ನಡೆದ 138 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡು ವಶಪಡಿಸಿಕೊಂಡಿದ್ದ ಸ್ವತ್ತನ್ನು ಮಾಲೀಕರಿಗೆ ಮರಳಿ ನೀಡುವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಏರ್ಪಡಿಸಲಾಗಿತ್ತು.

ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ, “ಪೊಲೀಸರು ತಮ್ಮ ಜೀವದ ಹಂಗು ತೊರೆದು ಸಾರ್ವಜನಿಕರಿಂದ ಕಳುವಾದ ಸ್ವತ್ತುಗಳನ್ನು ಆರೋಪಿಗಳಿಂದ ವಾಪಸ್‌ ಪಡೆದಿದ್ದಾರೆ. ಈ ಅವಧಿಯಲ್ಲಿ 48 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಎಲ್ಲ ಸ್ವತ್ತುಗಳನ್ನು ಮಾಲೀಕರಿಗೆ ಮರಳಿಸಲಾಗುತ್ತಿದೆ’ ಎಂದು ತಿಳಿಸಿದರು.

ಆರು ತಿಂಗಳಲ್ಲಿ ನಡೆದ ಮೂರು ದರೋಡೆ, ನಾಲ್ಕು ಸುಲಿಗೆ, 71 ಮನೆಕಳುವು, ಸಾಧಾಕಳುವು 60 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 43 ಪ್ರಕರಣಗಳನ್ನು ಬೇಧಿಸಲಾಗಿದೆ. ಒಟ್ಟು ಕಳವಾಗಿರುವ ಸ್ವತ್ತಿನ ಮೌಲ್ಯ ₹89.69 ಲಕ್ಷ ಇದ್ದು, ಅದರಲ್ಲಿ ₹29.47 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿಯಾಗಿದ್ದು, ಮಾಲೀಕರಿಗೆ ವಾಪಸ್‌ ನೀಡಲಾಗುತ್ತಿದೆ ಎಂದು ಹೇಳಿದರು.

₹13.85 ಲಕ್ಷ ಮೌಲ್ಯದ ಚಿನ್ನಾಭರಣಗಳು, ₹11.40 ಲಕ್ಷ ಮೌಲ್ಯದ 36 ಬೈಕ್‌ಗಳು, ₹1 ಲಕ್ಷ ಮೌಲ್ಯದ ಟಾಟಾ ಏಸ್‌ ವಾಹನ, ₹10 ಸಾವಿರ ಮೌಲ್ಯದ ಸಿಪಿಯು, ₹45 ಸಾವಿರ ಮೌಲ್ಯದ ಕೊನಿಕಾ ಝರಾಕ್ಸ್‌ ಯಂತ್ರ, ₹1.80 ಲಕ್ಷ ಮೌಲ್ಯದ ನೀರೆತ್ತುವ ಮೋಟರ್‌ ಪಂಪ್‌ಗಳು, ₹11 ಸಾವಿರ ಮೌಲ್ಯದ ಪಾನ್‌ಶಾಪ್‌ ಸಾಮಗ್ರಿಗಳು, ₹22 ಸಾವಿರ ಮೌಲ್ಯದ 11 ಮೊಬೈಲ್‌ಗಳು, ₹20 ಸಾವಿರ ಮೌಲ್ಯದ ಮೊಬೈಲ್‌ ಟವರ್‌ ಎಲ್‌ಸಿಯು, ₹4 ಸಾವಿರ ಮೌಲ್ಯದ ಮೊಬೈಲ್‌, ₹20 ಸಾವಿರ ಮೌಲ್ಯದ ಕಾಪರ್‌, ₹3.6 ಸಾವಿರ ಮೌಲ್ಯದ ಎಕ್ಸೈಡ್‌ ಬ್ಯಾಟರಿ, ₹23 ಸಾವಿರ ಮೌಲ್ಯದ ಸರ್ಕಾರಿ ಶಾಲೆಯ ಬಿಸಿಯೂಟದ ಸಾಮಗ್ರಿಗಳು ಹಾಗೂ ₹21,65,50 ನಗದು ಹಣವನ್ನು ದೂರುದಾರ ಮಾಲೀಕರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಸ್ತಾಂತರಿಸಿದರು.

ಕೈಬಿಟ್ಟು ಹೋಗಿದ್ದ ಸ್ವತ್ತುಗಳನ್ನು ವಾಪಸ್‌ ಪಡೆಯುತ್ತಿದ್ದ ಸಾರ್ವಜನಿಕರು ಪೊಲೀಸರು ಮಾಡಿದ ಕಾರ್ಯಕ್ಕೆ ಧನ್ಯತಾ ಭಾವ ಸೂಚಿಸಿದರು. ಕಷ್ಟಪಟ್ಟು ಸಂಪಾದಿಸಿದ್ದ ಆಸ್ತಿ ಕೈಬಿಟ್ಟು ಹೋಗಿತ್ತು ಎನ್ನುವ ಕಳವಳ ಇಲ್ಲದಂತೆ ಮಾಡಿ, ಸ್ವತ್ತನ್ನು ಮರಳಿಸಿದ್ದಕ್ಕಾಗಿ ಅನೇಕರು ಪೊಲೀಸರಿಗೆ ಖುದ್ದಾಗಿ ಕೃತಜ್ಞತೆ ಸಲ್ಲಿಸುತ್ತಿರುವುದು ಮೈದಾನದಲ್ಲಿ ಕಂಡುಬಂತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !