ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀ ರವಿಶಂಕರ ಗುರೂಜಿ ಪ್ರಥಮಬಾರಿಗೆ ರಾಯಚೂರಿಗೆ ಇಂದು

Last Updated 4 ಫೆಬ್ರುವರಿ 2020, 14:07 IST
ಅಕ್ಷರ ಗಾತ್ರ

ರಾಯಚೂರು: ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ ಗುರೂಜಿ ಅವರು ಫೆಬ್ರುವರಿ 5ರಂದು ರಾಯಚೂರಿಗೆ ಪ್ರಥಮಬಾರಿಗೆ ಆಗಮಿಸುತ್ತಿದ್ದು, ಈ ಸಂಬಂಧ ಬೆಳಿಗ್ಗೆಯಿಂದ ವಿವಿಧೆಡೆ ಸಂವಾದ, ಅಧ್ಯಾತ್ಮ ಸತ್ಸಂಗ ನಡೆಸಲಾಗುತ್ತಿದೆ ಎಂದು ಆಯೋಜಕ ಬಸವರಾಜ ಕಳಸ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 11 ಗಂಟೆಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವರು. ಸಂಜೆ 4 ಗಂಟೆಗೆ ರೇಸ್‌ ಕನ್ಸೆಪ್ಟ್‌ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ವಿವಿಧೆಡೆಯಿಂದ ಆಗಮಿಸುವ ವೃತ್ತಿಪರ ಕೋರ್ಸ್‌ ಕಲಿಯುವ ವಿದ್ಯಾರ್ಥಿಗಳಿಗೆ ಸಂದೇಶ ನೀಡಲಿದ್ದಾರೆ ಎಂದರು.

ಮುಖ್ಯವಾಗಿ ಖಿನ್ನತೆ, ಕೀಳರಿಮೆ, ಒತ್ತಡಗಳನ್ನು ನಿವಾರಿಸಿಕೊಳ್ಳುವ ಕುರಿತು ಸಂದೇಶ ನೀಡುವರು. ಗುರೂಜಿ ಅವರನ್ನು ಬರಮಾಡಿಕೊಳ್ಳಲು 12 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಾ ಬರಲಾಗಿತ್ತು ಎಂದು ತಿಳಿಸಿದರು.

ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಮಹಾಸತ್ಸಂಗ ನಡೆಯುವುದು. ಇದರಲ್ಲಿ ಸುಮಾರು 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿವಿಐಪಿ 400, ವಿಐ‍ಪಿ 600, ಸಾಮಾನ್ಯ ಜನರಿಗೆ 7000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದಲ್ಲಿರುವ ಗ್ಯಾಲರಿಯಲ್ಲಿ ಸುಮಾರು 12 ಸಾವಿರ ಜನರು ಕುಳಿತುಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ನಗರದಲ್ಲಿ ಈಗಾಗಲೇ 1.2 ಲಕ್ಷ ಆಮಂತ್ರಣ ಪತ್ರಿಕೆಗಳನ್ನು 50 ಸ್ವಯಂಸೇವಕರು ಹಂಚಿಕೆ ಮಾಡಿದ್ದಾರೆ. ಗುರೂಜಿ ಅವರು ಮಂಗಳವಾರ ರಾತ್ರಿಯೇ ಆಗಮಿಸಿ ಯರಮರಸ್‌ ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಳ್ಳುತ್ತಿದ್ದು, ಅವರನ್ನು ಮಹಿಳೆಯರು ಕುಂಭ–ಕಳಸದೊಂದಿಗೆ ಸ್ವಾಗತಿಸಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಕೇಂದ್ರದಿಂದ ವಿಶೇಷ ಭಜನೆ ತಂಡ ಬರಲಿದೆ. ಅದರ ಜತೆಗೆ ಸ್ಥಳೀಯ ನೃತ್ಯ ಭರತನಾಟ್ಯ ಪ್ರದರ್ಶನ, ಅಂತರರಾಷ್ಟ್ರೀಯ ಯೋಗ ಕ್ರೀಡಾಪಟು ಭೂಮಿಕಾ ಅವರು ವಿಶೇಷ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಪ್ರಚಾರ, ನಿರ್ವಹಣೆ, ಅಗತ್ಯ ಸೌಲಭ್ಯ, ಊಟೋಪಚಾರ ಸೇರಿದಂತೆ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಉಪಸಮಿತಿಗಳನ್ನು ರಚಿಸಲಾಗಿದೆ. ಪ್ರತಿ ಸಮಿತಿಯೂ ತಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಪವನ್‌ ಮ್ಯಾನ್ಷನ್‌ ಮಾಲೀಕ ವೀರೇಶ ರಾಜಲಬಂಡಾ ಅವರು ಕಾರ್ಯಕ್ರಮಕ್ಕೆ ಬಂದ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.

ಯೋಗ ಗುರು ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಸಂಸ್ಥೆಯಿಂದ ನಿರಂತರ ಚಟುವಟಿಕೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಈಗ ಗುರುಗಳೇ ಬಂದಿದ್ದು, ಎಲ್ಲರೂ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಮಿತಿ ಮುಖಂಡರಾದ ರಮೇಶಚಂದ್ ಜೈನ್ , ಮೈಲಾಪುರ ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT