ಶನಿವಾರ, ಜುಲೈ 31, 2021
25 °C
ರಾಯಚೂರು ಜಿಲ್ಲಾ ಕೇಂದ್ರದ ಆರು ಶಾಲಾ ಕ್ಯಾಂಪಸ್‌ಗಳಲ್ಲಿ ವ್ಯವಸ್ಥೆ

ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ರಾಯಚೂರಿನಲ್ಲಿ ಪೂರ್ವ ಸಿದ್ಧತೆ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ರಾಯಚೂರು: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳನ್ನು ಪ್ರೌಢಶಾಲಾ ಶಿಕ್ಷಕರ ಮೂಲಕ ಜುಲೈ 13 ರಿಂದ ಮೌಲ್ಯಮಾಪನ ಮಾಡಿಸುವುದಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪೂರ್ವ ತಯಾರಿ ಮಾಡಿಕೊಂಡಿದೆ.

ಶಾರದಾ ವಿದ್ಯಾನಿಕೇತನ ಶಾಲೆ, ವಿದ್ಯಾಭಾರತಿ ಶಾಲೆ, ಸೇಂಟ್‌ ಮೇರಿ ಕಾನ್ವೆಂಟ್‌ ಹಾಗೂ ತಾರಾನಾಥ ಶಿಕ್ಷಣ ಸಂಸ್ಥೆಯ ಮೂರು ಕ್ಯಾಂಪಸ್‌ಗಳು ಸೇರಿ ಆರು ಕಡೆಗಳಲ್ಲಿ ಮೌಲ್ಯಮಾಪನ ಮಾಡಿಸಲು ಯೋಜಿಸಲಾಗಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನಿತ ರಹಿತ ಪ್ರೌಢಶಾಲೆಗಳಿಂದ ವಿವಿಧ ವಿಷಯಗಳನ್ನು ಬೋಧಿಸುವ ಸುಮಾರು ಒಂದು ಸಾವಿರ ಶಿಕ್ಷಕರು ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಬ್ಬರು ಶಿಕ್ಷಕ ಪ್ರತಿದಿನ 20 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಿದ್ದಾರೆ.

ಕೋವಿಡ್‌ ಮುನ್ನಚ್ಚರಿಕೆ: ಕೋವಿಡ್‌ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಲಾಗಿದ್ದು, 55 ವರ್ಷ ಮೇಲ್ಪಟ್ಟು ವಯಸ್ಸಿನ ಶಿಕ್ಷಕರು, ಇತರೆ ಅನಾರೋಗ್ಯ ಸಮಸ್ಯೆಯಿಂದ ಬಳಲುವ ಶಿಕ್ಷಕರು ಮೌಲ್ಯಮಾಪನದಲ್ಲಿ ಭಾಗಿಯಾಗದಿರಲು ಅವಕಾಶ ಮಾಡಲಾಗಿದೆ. ಆದರೆ, ಸ್ವಯಂ ಇಚ್ಛೆ ಇದ್ದರೆ ಹಾಜರಾಗಬಹುದು. ಸೋಂಕು ತಡೆಗಾಗಿ ಮೌಲ್ಯಮಾಪನ ಕೇಂದ್ರಗಳಲ್ಲಿ ಸ್ಯಾನಿಟೈಜೇಷನ್‌, ಮಾಸ್ಕ್‌ ಬಳಕೆ ಮತ್ತು ಸ್ಯಾನಿಟೈಜರ್‌ ಬಳಸುವುದಕ್ಕೆ ಸೂಚನೆ ನೀಡಲಾಗಿದೆ.

ವಾಹನ ವ್ಯವಸ್ಥೆ: ಈ ಬಾರಿ ಮೌಲ್ಯಮಾಪನಕ್ಕೆ ಬರುವ ಶಿಕ್ಷಕರು ಕೋವಿಡ್‌ ಹಿನ್ನೆಲೆಯಲ್ಲಿ ಮೌಲ್ಯಮಾಪನ ನಡೆಯುವ ಜಿಲ್ಲಾ ಕೇಂದ್ರದಲ್ಲಿಯೇ ಉಳಿದುಕೊಳ್ಳುವುದನ್ನು ಕಡ್ಡಾಯ ಮಾಡಿಲ್ಲ. ತಾಲ್ಲೂಕು ಕೇಂದ್ರಗಳಿಂದ ಶಿಕ್ಷಕರನ್ನು ಕರೆತರುವುದು ಮತ್ತು ವಾಪಸ್‌ ತಲುಪಿಸುವುದಕ್ಕೆ ವ್ಯವಸ್ಥೆ ಆಗಿದೆ. ಇದಕ್ಕಾಗಿ ಖಾಸಗಿ ಶಾಲಾ ವಾಹನಗಳನ್ನು ಪಡೆದುಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್‌. ಗೋನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು