ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

 ರಾಯಚೂರು: ವಿದ್ಯಾರ್ಥಿ ವೇತನ ಕಡಿತ ಖಂಡಿಸಿ ಪ್ರತಿಭಟನೆ

Published 27 ಡಿಸೆಂಬರ್ 2023, 14:40 IST
Last Updated 27 ಡಿಸೆಂಬರ್ 2023, 14:40 IST
ಅಕ್ಷರ ಗಾತ್ರ

ರಾಯಚೂರು: ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತ ಮಾಡಿದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಯಚೂರು ನಗರ ಘಟಕದಿಂದ ಬುಧವಾರ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  ರಾಜ್ಯದಲ್ಲಿ ಬಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅನೇಕ ಯೋಜನೆ ಜಾರಿಗೆ ತರಲಾಗಿದೆ. ಆದರೆ ಪ್ರಸ್ತುತ ಕಾಂಗ್ರೆಸ್ ರಾಜ್ಯ ಸರ್ಕಾರ 2022-23ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯಡಿ ಬರುವ ವಿದ್ಯಾರ್ಥಿ ವೇತನ ಬಿಡುಗಡೆ ಮಾಡದೆ ಕಡಿತಗೊಳಿಸಿದೆ. ಈವರೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಜಮೆ ಆಗದೆ ಬಡ ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.

ನೋಂದಣಿ ಮಾಡಿಸಿಕೊಂಡಿದ್ದ ಎಲ್ಲರಿಗೂ ಸಹಾಯ ಹಸ್ತ ನೀಡುವ ಜತೆಗೆ ಎಲ್ಲ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಹಿಂದಿದ್ದ ವಿದ್ಯಾರ್ಥಿ ವೇತನಕ್ಕಿಂತ ಶೇ 50ರಷ್ಟು ಸಹಾಯಧನ ಹೆಚ್ಚಿಸಿತ್ತು. ಆದರೆ, ಇಂದಿನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ಇಲಾಖೆಯಲ್ಲಿ ಹಣವಿಲ್ಲ ಎಂದು ನೆಪವೊಡ್ಡಿ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನದ ಶೇ 60ರಷ್ಟು ಕಡಿತಗೊಳಿಸಿರುವುದು ಖಂಡನೀಯ.

2022-23ನೇ ಸಾಲಿನ ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯಡಿ ಇರುವ ವಿದ್ಯಾರ್ಥಿ ವೇತನ ತಕ್ಷಣ ಜಮೆ ಮಾಡಬೇಕು. ಯಾವುದೇ ರೀತಿ ಕಡಿತ ಮಾಡದೆ ಪೂರ್ಣ ವಿದ್ಯಾರ್ಥಿ ವೇತನ ನೀಡಬೇಕು. ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ನಗರ ಸಂಘಟನಾ ಕಾರ್ಯದರ್ಶಿ ಪಾಂಡು ಮೋರೆ, ನಗರ ಕಾರ್ಯದರ್ಶಿ ಭೀಮೇಶ ಸಾಗರ್, ವಿದ್ಯಾರ್ಥಿ ಕಾರ್ಯಕರ್ತರಾದ ಸುರೇಶ ಯಾದವ, ರಂಗನಾಥ ಯಾದವ, ಮಹೇಶ, ಮಾನಸ, ರಾಧಾ, ಶಶಿಕಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT