ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತ್ಯ ಜೀವನ ಬಾಧಿಸುತ್ತಿದೆ ಬಿಸಿಲು! ಗುಟುಕು ನೀರಿಗೆ ಪರಿತಪಿಸುತ್ತಿವೆ ಪಶು,ಪಕ್ಷಿ

Last Updated 29 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ರಾಯಚೂರು:ನೈಸರ್ಗಿಕವಾಗಿ ನಿರ್ಮಾಣವಾಗಿರುವ ಕೆರೆ, ಹಳ್ಳ, ಕೊಳ್ಳಗಳು ಹಾಗೂ ನೀರಿನ ತೊರೆಗಳುಜಿಲ್ಲೆಯಾದ್ಯಂತಸತತ ಬರಗಾಲದಿಂದ ಬರಿದಾಗಿ ವರ್ಷವಾಗಿದೆ. ಜೀವ–ಜಂತುಗಳೆಲ್ಲ ಬೇಸಿಗೆಯಲ್ಲಿ ಬಿಸಿಲಿನ ಬೇಗೆ ಸಹಿಸಿಕೊಳ್ಳಲು ನೆರಳಿನ ಆಶ್ರಯ ಹುಡುಕಿಕೊಂಡರೂ ಬಾಯಾರಿಕೆ ತಣಿಸಿಕೊಳ್ಳಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿವೆ!

ಇದುರಣ ಬಿಸಿಲಿನಿಂದ ಗುಡ್ಡಗಾಡು ಹಾಗೂ ನದಿಪಾತ್ರದಲ್ಲಿ ಜೀವಿಗಳು ಅನುಭವಿಸುತ್ತಿರುವ ಸಂಕಟದ ಚಿತ್ರಣವಲ್ಲ. ನಗರದೊಳಗೇ ಜೀವ ಜಂತುಗಳು, ಬೀದಿನಾಯಿಗಳು, ಬಿಡಾಡಿ ದನಗಳು ಬಿಸಿಲು ಬಾಧೆಯಿಂದ ಅನುಭವಿಸುತ್ತಿರುವ ನೈಜ ಸಂಕಷ್ಟ ಇದು. ಏಪ್ರಿಲ್‌ ಅಂತ್ಯದಲ್ಲಿ ತಾಪಮಾನವು 42 ಡಿಗ್ರಿ ಸೆಲ್ಸಿಯಸ್‌ ತಲುಪಿರುವುದರಿಂದ ಮನೆ ಅಂಗಳದಲ್ಲಿ ಚೆಲ್ಲಿದ ಮುಸುರೆ ನೀರು ಕೂಡಾ ಕೆಲವು ಕ್ಷಣಗಳಲ್ಲಿ ಮಾಯವಾಗುತ್ತಿದೆ. ಮುಸುರೆ ನೀರಿಗಾಗಿ ಬೀದಿನಾಯಿಗಳು ಓಡಿಕೊಂಡು ಬರುತ್ತವೆ. ಮುಸುರೆ ನೀರು ಕೂಡಾ ದೊರಕದೆ ನೆಲಕ್ಕೆ ನಾಲಿಗೆ ಸವರಿ ಜೀವ ಉಳಿಸಿಕೊಳ್ಳುವಂತಾಗಿದೆ. ಬೀದಿನಾಯಿಗಳು ಬಿಡಾರ ಹೂಡುವ ಕೊಳೆಗೇರಿಗಳಲ್ಲಿ ಇಂತಹ ದೃಶ್ಯ ಮನಕಲಕುತ್ತದೆ.

ರಾಯಚೂರು ನಗರದಲ್ಲಿ ಅತಿಹೆಚ್ಚು ಬಿಡಾಡಿ ದನಕರುಗಳು ಸೇರಿಕೊಳ್ಳುವ ರೈಲ್ವೆ ನಿಲ್ದಾಣ, ಚಂದ್ರಮೌಳೇಶ್ವರ ವೃತ್ತ, ಬಸ್‌ ನಿಲ್ದಾಣ, ಐಬಿ , ಆರ್‌ಟಿಓ ಕ್ರಾಸ್‌, ನಗರೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಕಡೆಗಳಲ್ಲಿ ಬಿಸಿಲಿನಲ್ಲಿ ನಿಂತು ಎದುಸಿರು ಬಿಡುವ ಮೂಕ ಪ್ರಾಣಿಗಳ ವೇದನೆಯು ಮರುಕ ಹುಟ್ಟಿಸುತ್ತದೆ. ಅಲ್ಲಲ್ಲಿ ನೆರಳಿನ ಆಶ್ರಯ ಪಡೆದು ಜೀವ ಉಳಿಸಿಕೊಳ್ಳುತ್ತಿವೆ. ಅನಿವಾರ್ಯವಾಗಿ ಚರಂಡಿ ನೀರಿನಲ್ಲಿ ನಾಲಿಗೆ ಆಡಿಸಿ ಅನಾರೋಗ್ಯ ತಂದುಕೊಳ್ಳುತ್ತಿವೆ.

ಸತತ ಬರಗಾಲ ಪೀಡಿತ ಆಗಿರುವುದರಿಂದ ಈ ವರ್ಷ ಬೇಸಿಗೆಯು ಅನೇಕ ತಾಪತ್ರಯಗಳನ್ನು ತಂದೊಡ್ಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹನಿ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ. ರಾಯಚೂರು ತಾಲ್ಲೂಕಿನ ವಲ್ಕಂದಿನ್ನಿ, ಜಂಬಲದಿನ್ನಿ, ಸಿಂಗನೋಡಿ ಸೇರಿದಂತೆ ಅನೇಕ ಕಡೆ ಹನಿಹನಿ ನೀರು ಸಂಗ್ರಹಿಸಿಕೊಂಡು ಜನರು ಬದುಕುತ್ತಿದ್ದಾರೆ. ಆದರೆ, ಈ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ನೀರು ಒದಗಿಸುವುದು ಸವಾಲಾಗಿ ಪರಿಣಮಿಸಿದೆ.

ಕೊಳವೆಬಾವಿ ಹೊಂದಿದ ರೈತರು ಮಾತ್ರ ದನಕರುಗಳನ್ನು ಸಾಕಾಣಿಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ. ನೀರಿದ್ದರೂ ಮೇವಿಲ್ಲ. ಒಣಮೇವು ಖರೀದಿಸಿಕೊಂಡು ತಂದರೂ ನೀರು ಒದಗಿಸುವುದಕ್ಕೆ ಸಾಧ್ಯವಿಲ್ಲ ಎನ್ನುವ ವಾತಾವರಣ ಉದ್ಭವಿಸಿದೆ. ‘ಹೋದ ವರ್ಷ ಮಳೆ ಆಗಿದ್ದರೆ ನೀರು ಎಲ್ಲಿಯಾದರೂ ಸಂಗ್ರಹ ಆಗಿರುತ್ತಿತ್ತು. ಜಾನುವಾರುಗಳು ಪಶು, ಪಕ್ಷಿಗಳಿಗೂ ನೀರು ಸಿಗುತ್ತಿತ್ತು. ಸಂಪೂರ್ಣ ಬರಗಾಲ ಬಿದ್ದಿದೆ. ತಾಪಮಾನ ಏರುತ್ತಿರುವುದರಿಂದ ಸಂಗ್ರಹಿಸಿಕೊಂಡ ನೀರೆಲ್ಲವೂ ಖಾಲಿಯಾಗುತ್ತದೆ. ಮನುಷ್ಯರು ಬದುಕುವುದು ಕಷ್ಟವಾಗುತ್ತಿದೆ. ಜಾನುವಾರುಗಳನ್ನು ಬದುಕಿಸಿಕೊಳ್ಳುವುದು ಬಹಳ ಕಷ್ಟವಾಗುತ್ತಿದೆ’ ಎಂದು ಯರಗೇರಾದ ರೈತ ಶಿವರಾಮ್‌ ಅಳಲು ತೋಡಿಕೊಂಡರು.

‘ಸಿಂಧನೂರು, ಮಾನ್ವಿ ತಾಲ್ಲೂಕುಗಳಲ್ಲಿ ಕುಡಿಯುವ ಉದ್ದೇಶಕ್ಕಾಗಿ ಕೆರೆಗಳಲ್ಲಿ ನೀರು ತುಂಬಿಸಲಾಗಿದೆ. ಅನಿವಾರ್ಯವಾಗಿ ಶುಚಿಯಿಲ್ಲದ ನೀರು ಕುಡಿದು ಜನರು ಬದುಕುತ್ತಿದ್ದಾರೆ. ಅಧಿಕಾರಿಗಳು ಅಸಹಾಯಕರಾಗಿ ಕೈಚೆಲ್ಲಿದ್ದಾರೆ. ನಿಸರ್ಗವೆ ಮುನಿಸಿಕೊಂಡಿದೆ. ಈ ವರ್ಷವಾದರೂ ಸಾಕಷ್ಟು ಮಳೆ ಬರುತ್ತದೆ ಎಂದು ರೈತರೆಲ್ಲ ಕಾಯುತ್ತಿದ್ದಾರೆ. ದೇವದುರ್ಗ ತಾಲ್ಲೂಕಿನಲ್ಲಿ ಬಹಳಷ್ಟು ಗ್ರಾಮಗಳಲ್ಲಿ ಜನರು ಕೃಷ್ಣಾನದಿ ನೀರನ್ನು ಕುಡಿಯುವುದಕ್ಕೆ ಬಳಸುತ್ತಾರೆ. ನದಿಯು ಈಗಾಗಲೇ ಖಾಲಿಯಾಗಿದೆ. ಮೇ ತಿಂಗಳಲ್ಲಿ ಬಿಸಿಲು ಮತ್ತಷ್ಟು ಹೆಚ್ಚಾದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT