ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು | ಪೂರೈಕೆ ಇಲ್ಲ ಹಾಲು; 16,706 ಮಕ್ಕಳು ಕಂಗಾಲು

ಬಿ.ಎ. ನಂದಿಕೋಲಮಠ
Published 18 ಫೆಬ್ರುವರಿ 2024, 4:38 IST
Last Updated 18 ಫೆಬ್ರುವರಿ 2024, 4:38 IST
ಅಕ್ಷರ ಗಾತ್ರ

ಲಿಂಗಸುಗೂರು: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿಯೇ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುವ ಮಕ್ಕಳ ಪ್ರಮಾಣ ಹೆಚ್ಚಾಗಿರುವ ರಾಯಚೂರು ಜಿಲ್ಲೆಯಲ್ಲಿ ಪೌಷ್ಟಿಕ ಆಹಾರ ಪೂರೈಕೆಯ ಭಾಗವಾದ ಹಾಲಿನ ಪುಡಿ, ಸಕ್ಕರೆ ಪೂರೈಕೆಯನ್ನು ರಾಜ್ಯ ಸರ್ಕಾರ ಅಂಗನವಾಡಿಗಳಿಗೆ ಸ್ಥಗಿತಗೊಳಿಸಿದೆ.

ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನಲ್ಲಿ 564 ಅಂಗನವಾಡಿ ಕೇಂದ್ರಗಳಲ್ಲಿ 37,444 ಮಕ್ಕಳು ದಾಖಲಾತಿ ಹೊಂದಿವೆ. ನಿಯಮದ ಪ್ರಕಾರ ಈ ಪೈಕಿ 16,706 ಮಕ್ಕಳಿಗೆ ಹಾಲು ವಿತರಣೆ ಮಾಡುವುದು ಕಡ್ಡಾಯ. ಆದರೆ 2022ರ ನವೆಂಬರ್‌ ತಿಂಗಳಿಂದ 2024ರ ಫೆಬ್ರುವರಿ 15ರವರೆಗೆ 3 ರಿಂದ 6 ವರ್ಷದ ಒಳಗಿನ ಅಂಗನವಾಡಿ ಮಕ್ಕಳಿಗೆ ಹಾಲಿನಪುಡಿ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇದರಿಂದ 16,706 ಮಕ್ಕಳು ಹಾಗೂ ಗರ್ಭಿಣಿಯರು (4,206) ಮತ್ತು ಬಾಣಂತಿಯರು (3,848) ಸೇರಿ ಒಟ್ಟು 8,054 ತಾಲ್ಲೂಕಿನ ಮಹಿಳೆಯರು ಕಳೆದ 15 ತಿಂಗಳಿಂದ ಪೌಷ್ಟಿಕ ಹಾಲಿನಿಂದ ವಂಚಿತರಾಗಿದ್ದಾರೆ.

ಲಿಂಗಸುಗೂರು ತಾಲ್ಲೂಕಿನಲ್ಲಿ ಸಾಧಾರಣ ಅಪೌಷ್ಟಿಕ ಮಕ್ಕಳು 2019 ಹಾಗೂ ತೀವ್ರತರ ಅಪೌಷ್ಟಿಕತೆಯಿಂದ ಬಳಲುವ 31 ಮಕ್ಕಳಿರುವುದನ್ನು ಇಲಾಖೆ ದಾಖಲೆಗಳು ದೃಢಪಡಿಸುತ್ತಿವೆ. ತಾಲ್ಲೂಕಿನ 512 ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 86741 ಮಕ್ಕಳು ದಾಖಲಾತಿ ಹೊಂದಿದ್ದು ಹಾಲಿನ ಪುಡಿ ಪೂರೈಕೆ ಮಾಡಲಾಗುತ್ತಿದೆ. ಪೌಷ್ಟಿಕ ಆಹಾರ ಅತ್ಯಗತ್ಯವಾದ 3 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಅನುದಾನ ಮತ್ತು ಉತ್ಪಾದನೆ ಕೊರತೆ ಮುಂದಿಟ್ಟು ಹಾಲು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ.

ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಶಿಬಿರ ಆಯೋಜಿಸಿ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿತ್ತು. ಎರಡು ವರ್ಷದಿಂದ ಶಿಬಿರ ಆಯೋಜನೆ, ಹೆಚ್ಚುವರಿ ಚಿಕಿತ್ಸೆ ಹಾಗೂ ಔಷದೋಪಚಾರಕ್ಕೆ ಅನುದಾನ ಕೊರತೆ ಮುಂದಿಟ್ಟು ಸ್ಥಗಿತಗೊಳಿಸಿರುವ ಬಗ್ಗೆ ಮಕ್ಕಳ ಪಾಲಕರು ಹಾಗೂ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2023 ನವೆಂಬರ್‌ ತಿಂಗಳಿಂದ ಪೌಷ್ಟಿಕ ಆಹಾರ ನೀಡುವ ಪದ್ಧತಿ ಬದಲಾವಣೆಗೆ ಸರ್ಕಾರ ಆದೇಶಿಸಿದೆ. ಈ ಪದ್ಧತಿಯಡಿ ಪೌಷ್ಟಿಕ ಆಹಾರ ನಿಗದಿತವಾಗಿ ಪೂರೈಕೆ ಆಗುತ್ತಿಲ್ಲ. ಪೂರೈಕೆ ಆಗಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಒಟ್ಟಾರೆ ಅಪೌಷ್ಟಿಕ ಆಹಾರ ಪೂರೈಕೆ ಕಗ್ಗಂಟಾಗಿ ಪರಿಣಮಿಸಿದೆ.

‘ಮೂರು ತಿಂಗಳಿಂದ ಕಾರ್ಯಕರ್ತೆಯರೆ ನೇರವಾಗಿ ಮೊಟ್ಟೆ ಖರೀದಿಸಿ ಮಕ್ಕಳಿಗೆ ನೀಡುತ್ತಿದ್ದಾರೆ. ಮೂರು ತಿಂಗಳಿಂದ ಗೌರವಧನ ಬಿಡುಗಡೆ ಆಗದಿರುವುದು ಹಾಗೂ ಮೊಟ್ಟೆ ಪೂರೈಕೆ ಹಣ ಬಿಡುಗಡೆ ಮಾಡದಿರುವುದರಿಂದ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ’ ಎಂಬುದು ಕಾರ್ಯಕರ್ತೆಯರ ಸಾಮೂಹಿಕ ಆರೋಪ.

15 ತಿಂಗಳಿಂದ ಹಾಲಿನ ಪುಡಿ ಪೂರೈಕೆ ಸ್ಥಗಿತಗೊಂಡಿದೆ. ಕಾರ್ಯಕರ್ತರಿಗೆ ಎರಡು ತಿಂಗಳ ಗೌರವಧನ ಮತ್ತು ಮೊಟ್ಟೆ ಖರೀದಿ ಬಿಲ್‌ ಅನ್ನು ಕೆಲ ದಿನಗಳಲ್ಲಿ ಪಾವತಿ ಮಾಡಲಾಗುವುದು. ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿದ್ದು ಯಾವುದೇ ದೂರುಗಳು ಬಂದಿಲ್ಲ.
ಗೋಕುಲಸಾಬ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಿಂಗಸುಗೂರು
ಜಿಲ್ಲೆಯಲ್ಲಿ ಕಳಪೆ ಆಹಾರ ಪೂರೈಕೆ ಕಾರ್ಯಕರ್ತೆಯರೆ ಖರೀದಿಸುವ ಮೊಟ್ಟೆಗೆ ಅನುದಾನ ಬಿಡುಗಡೆ ಇಲ್ಲ. ಮೂರು ತಿಂಗಳಿಂದ ಗೌರವಧನ ನೀಡಿಲ್ಲ. 15 ತಿಂಗಳಿಂದ ಹಾಲಿನ ಪುಡಿ ಪೂರೈಕೆ ಮಾಡದೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ.
ಸಂಗಯ್ಯ ಚಿಂರಕಿ, ಜಿಲ್ಲಾ ಅಧ್ಯಕ್ಷ ಎಐಸಿಯುಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT