ಮಂಗಳವಾರ, ಸೆಪ್ಟೆಂಬರ್ 21, 2021
21 °C
ಜಿಲ್ಲೆಯ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ

‘ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಹತ್ವದ್ದು‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ದೇವರನ್ನು ನೋಡಿಲ್ಲ, ಕಣ್ಣಿಗೆ ಕಾಣುವ ಶಿಕ್ಷಕರೇ ದೇವರುಗಳು. ಶಿಕ್ಷಣದಿಂದಲೇ ದೇಶದ ಪ್ರಗತಿ ಸಾಧ್ಯ. ಶಿಕ್ಷಣವನ್ನು ಸಮರ್ಪಕವಾಗಿ ತಲುಪಿಸುವ‌ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯಿಂದ ಸೋಮವಾರ ಆಯೋಜಿಸಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 133ನೇ ಜನ್ಮದಿನೋತ್ಸವದ ಪ್ರಯುಕ್ತ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ‘ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ’ ಉದ್ಘಾಟಿಸಿ ಮಾತನಾಡಿದರು.

‘ಶಿಕ್ಷಕರ ದಿನ ಪವಿತ್ರವಾದ ದಿನ. ನಾನು ಶಾಸಕನಾಗಿರಲು ಶಿಕ್ಷಕರೇ ಕಾರಣರ್ತಕರು. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ ರೂಪಿಸಿದೆ. ಈ ಭಾಗದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆ, ವೃತ್ತಿಪರ ಕಾಲೇಜು ಸೇರಿ ಅನೇಕ ಕಾರ್ಯ ಕೈಗೊಂಡಿದೆ’ ಎಂದು ತಿಳಿಸಿದರು.

ಜಿಲ್ಲೆಯ ವಿವಿಧೆಡೆ ಅಗತ್ಯವಿರುವ ಶಾಲೆಗಳಲ್ಲಿ ಕೆಕೆಆರ್‌ಡಿಬಿಯಿಂದ 100 ಕೊಠಡಿ, ಪ್ರತೀ ಶಾಲೆಗೆ ಶೌಚಾಲಯ, ಅಡುಗೆ ಕೋಣೆ ನಿರ್ಮಾಣ ಮಾಡಲಾಗುವುದು. ಬಿ.ಇಡಿ ಮುಗಿಸಿದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಶೀಘ್ರ ಬಡ್ತಿ ನೀಡುವ ಕುರಿತು ಕೌನ್ಸೆಲಿಂಗ್ ಕರೆಯಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಸಾರ್ವಜನಿಕ‌ ಶಿಕ್ಷಣ ಇಲಾಖೆಯ ಉಪ‌ನಿರ್ದೇಶಕ ಬಿ.ಎಚ್.ಗೋನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದು ಗಮನಾರ್ಹವಾಗಿದೆ ಎಂದು ತಿಳಿಸಿದರು.

ಶಿಕ್ಷಕ ಪ್ರಶಸ್ತಿ ಪ್ರದಾನ: ದೇವದುರ್ಗ ತಾಲ್ಲೂಕಿನ ಕರಿಮರಡಿ ತಾಂಡಾ ಸರ್ಕಾರಿ ಶಾಲೆ ಸಹ ಶಿಕ್ಷಕಿ ಕವಿತಾ, ದಳವಾಯಿದೊಡ್ಡಿ ಸರ್ಕಾರಿ ಶಾಲೆ ಸಹ ಶಿಕ್ಷಕ ಮುನಿಸ್ವಾಮಿ ಹಾಗೂ ಗಡ್ಡಿತಾಂಡ ಸರಕಾರಿ ಶಾಲೆ ಸಹ ಶಿಕ್ಷಕಿ ವಿಜಯಲಕ್ಮೀ, ದೇವದುರ್ಗ ತಾಲ್ಲೂಕಿನ ಮಸರಕಲ್ ಸರ್ಕಾರಿ ಮಾದರಿಯ ಶಾಲೆ ಸಹ ಶಿಕ್ಷಕಿ ಅನ್ನಪೂರ್ಣ, ಲಿಂಗಸುಗೂರು ತಾಲ್ಲೂಕಿನ ರಾಯದುರ್ಗ ಸರ್ಕಾರಿ ಮಾದರಿಯ ಶಾಲೆ ಸಹ ಶಿಕ್ಷಕ ಬಸವರಾಜ ಬಡಿಗೇರ, ಮಾನ್ವಿ ತಾಲ್ಲೂಕಿನ ಬ್ಯಾಗವಾಟ್ ಸರ್ಕಾರಿ ಉನ್ನತಿಕರಿಸಿದ ಶಾಲೆ ಮುಖ್ಯ ಗುರುಗಳು ಸುಭಾಶ್ಚಂದ್ರ, ರಾಯಚೂರು ತಾಲ್ಲೂಕಿನ ತುರಕನಡೋಣ ಸರಕಾರಿ ಶಾಲೆ ಮುಖ್ಯ ಗುರುಗಳು ತಿಮ್ಮಪ್ಪ, ಹಾಗೂ ಬಾಪೂರು ಸರ್ಕಾರಿ ಶಾಲೆ ಸಹ ಶಿಕ್ಷಕ ಎಸ್.ನರಸಪ್ಪ. ದೇವದುರ್ಗ ತಾಲ್ಲೂಕಿನ ಗಾಣದಾಳ ಸರ್ಕಾರಿ ಶಾಲೆ ಸಹ ಶಿಕ್ಷಕ ಗುಲಾಂನಬಿ, ಲಿಂಗಸುಗೂರು ಬನ್ನಿಗೋಳ ಸರಕಾರಿ ಶಾಲೆ ಸಹ ಶಿಕ್ಷಕ ಖಾಜಾಸಾಹೇಬ, ಮಾನ್ವಿ ತಾಲ್ಲೂಕಿನ ಕವಿತಾಳ ಸರ್ಕಾರಿ ಬಾಲಕಿಯರ ಶಾಲೆ ಸಹ ಶಿಕ್ಷಕಿ ಸಬೀನಾಬಾನು, ರಾಯಚೂರು ತಾಲ್ಲೂಕಿನ ಯರಗೇರಾ ಶಾಸಕರ ಸರ್ಕಾರಿ ಮಾದರಿ ಶಾಲೆ ಮುಖ್ಯ ಗುರುಗಳು ಚನ್ನಮ್ಮ, ಸಿಂಧನೂರು ತಾಲ್ಲೂಕಿನ ಮುಕ್ಕುಂದಾ ಸರ್ಕಾರಿ ಶಾಲೆಯ ಸಹ ಶಿಕ್ಷಕ ಮರ್ದಾನಲಿ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ  ವೈ.ಗೋಪಾಲ್ ರೆಡ್ಡಿ, ಯರಮರಸ್ ಡಯಟ್ ಉಪನಿರ್ದೇಶಕ ಜಿ.ಎಂ.ವೃಷಭೇಂದ್ರಯ್ಯ, ಬಿಇಓ ಚಂದ್ರಶೇಖರ ದೊಡ್ಡಮನಿ, ಆರ್ ಡಿಎ ಸದಸ್ಯ ಶೇಖರ್ ವಾರದ್, ಕೆ.ಅಂಜನೇಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.