ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಳ ಸಾವು: ಕುರಿಗಾಹಿಗಳಲ್ಲಿ ಆತಂಕ

ಕವಿತಾಳ ಭಾಗದಲ್ಲಿ ರೋಗ ಉಲ್ಬಣ, ಸೂಕ್ತ ಚಿಕಿತ್ಸೆ, ಪರಿಹಾರಕ್ಕೆ ಒತ್ತಾಯ
Last Updated 4 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದಲ್ಲಿ ಅಂಥ್ರಾಕ್ಸ್ ರೋಗದಿಂದ ಕುರಿಗಳು ಸಾಯುತ್ತಿದ್ದು, ಇದರಿಂದಾಗಿ ಕುರಿಗಾಹಿಗಳು ಮತ್ತು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ನಾಲ್ಕು ದಿನಗಳಲ್ಲಿ ಮೂರು ಕುರಿ ಹಿಂಡುಗಳಲ್ಲಿ 35ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

‘ತೀವ್ರ ಜ್ವರ, ವಿಪರೀತ ಸುಸ್ತು, ಆಹಾರ ಸೇವಿಸದಿರುವುದು ಮೂತ್ರದಲ್ಲಿ ರಕ್ತ ಬರುವುದು, ಮೂಗಿನಲ್ಲಿ ಬಿಳಿ ದ್ರವ ಸುರಿದು ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಕುಸಿದು ಕುರಿಗಳು ಸಾಯುತ್ತಿವೆ. ಯಾವುದೇ ಚಿಕಿತ್ಸೆಗೂ ಸ್ಪಂದಿಸುತ್ತಿಲ್ಲ. ಹೀಗಾಗಿ ಜೀವನೋಪಾಯಕ್ಕೆ ಕುರಿ ಸಾಕಾಣಿಕೆ ಮಾಡಿದ ಕುರಿಗಾಹಿಗಳು, ಸಣ್ಣ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವಣ್ಣ ವಕೀಲ ಹೇಳಿದರು.

‘ಕವಿತಾಳ ಭಾಗದಲ್ಲಿ ರೋಗ ಉಲ್ಬಣವಾಗಿದ್ದು ಈ ಕುರಿತು ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ರೋಗ ಲಕ್ಷಣಗಳು ಕಂಡು ಬಂದ ಕುರಿಗಳಿಂದ ರಕ್ತ ಮತ್ತು ಮೂಗಿನ ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ವರದಿ ಕೈಸೇರಿದ್ದು ಅಂಥ್ರಾಕ್ಸ್‌ ರೋಗ ಎಂದು ಖಚಿತವಾಗಿದೆ’ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ.ರಾಜು ಕಾಂಬ್ಳೆ ಹೇಳಿದರು.

ರೋಗ ಲಕ್ಷಣಗಳು ಹಾಗೂ ಪ್ರಯೋಗಾಲಯದ ವರದಿ ಆಧರಿಸಿ ಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಾಮೂಹಿಕವಾಗಿ ಲಸಿಕೆ ನೀಡಲು ಬೇಕಾದ ಅಗತ್ಯ ಲಸಿಕೆಗೆ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದ್ದು, ಲಸಿಕೆ ಪೂರೈಕೆಯಾದ ನಂತರ ನೀಡಲಾಗುವುದು. ರೋಗ ಲಕ್ಷಣಗಳು ಕಂಡು ಬಂದ ಕುರಿಗಳನ್ನು ಹಿಂಡಿನಿಂದ ತಕ್ಷಣ ಬೇರ್ಪಡಿಸಬೇಕು’ ಎಂದು ಡಾ.ರಾಜು ಕಾಂಬ್ಳೆ ತಿಳಿಸಿದರು.

‘ನಿತ್ಯ ಕುರಿಗಳು ಸಾಯುತ್ತಿದ್ದು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ತುರ್ತು ಕ್ರಮಕ್ಕೆ ಮುಂದಾಗಬೇಕಿದೆ. ಅಗತ್ಯ ಔಷಧ ಪೂರೈಕೆ ಮತ್ತು ತಜ್ಞ ವೈದ್ಯರನ್ನು ಕಳುಹಿಸಿ ರೋಗ ನಿಯಂತ್ರಣ ಮಾಡಬೇಕು’ ಎಂದು ರೈತ ಮುಖಂಡರಾದ ಮಾಳಪ್ಪ, ಮೌನೇಶ ಹಿರೇಕುರಬರ್, ಕರಿಯಪ್ಪ ಯಕ್ಲಾಸ್ಪುರ, ಬಸವರಾಜ ದಿನ್ನಿ, ಸಿದ್ದಪ್ಪ ಮತ್ತಿತರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT