ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಮನೆ ಬಿಡು’ ಎಂದಿದ್ದಕ್ಕೆ ವೃದ್ಧೆ ಕೊಲೆ!

ಬಾಡಿಗೆ ಮನೆ ನೀಡಿದ ಮಾಲಕಿಯನ್ನೆ ಕೊಲೆ ಮಾಡಿದ ಬಾಡಿಗೆದಾರ
Published : 26 ಸೆಪ್ಟೆಂಬರ್ 2024, 15:06 IST
Last Updated : 26 ಸೆಪ್ಟೆಂಬರ್ 2024, 15:06 IST
ಫಾಲೋ ಮಾಡಿ
Comments

ರಾಯಚೂರು: ‘ಆದಷ್ಟು ಬೇಗ ಮನೆ ಖಾಲಿ ಮಾಡಿ’ ಎಂದು ಒತ್ತಾಯಿಸಿದ್ದ ಮನೆಯ ಮಾಲಕಿಯನ್ನೇ ಬಾಡಿಗೆದಾರರೊಬ್ಬರು ಕೊಲೆ ಮಾಡಿರುವ ಘಟನೆ ಇಲ್ಲಿನ ಉದಯನಗರದಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಉದಯನಗರದ ಶೋಭಾ ಪಾಟೀಲ (63) ಕೊಲೆಯಾದ ಮನೆಯ ಮಾಲಕಿ. ಆರೋಪಿ ನಗರದ ಪ್ರಶಾಂತ ಕಾಲೊನಿಯ ಶಿವು ಬಂಡಯ್ಯ ಸ್ವಾಮಿ(28) ಎಂಬುವರನ್ನು ಪೊಲೀಸರು ವಶಕ್ಕೆ ‍ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಿವು ಸ್ವಾಮಿ, ಸಮುದಾಯವರ ಮದುವೆ, ನಿಶ್ಚಿತಾರ್ಥ ಕಾರ್ಯಗಳನ್ನು ಮಾಡುವ ಕೆಲಸ ಮಾಡುತ್ತಿದ್ದರು. ಮನೆಯ ಮಾಲೀಕರು ಮನೆ ಬಿಡುವಂತೆ ಆರೋಪಿಗೆ ಸೂಚಿಸಿದ್ದರು. ಠೇವಣಿ ಮರಳಿಸುವ ವಿಚಾರದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.

‘ಸೆಪ್ಟೆಂಬರ್‌ 21ರಂದು ಆರೋಪಿಯು ಮನೆ ಮಾಲಕಿಯ ಮನೆಗೆ ಹೋಗಿ ಬಾಗಿಲು ತಟ್ಟಿದ್ದ. ಬಾಗಿಲು ತೆಗೆದ ನಂತರ ವೃದ್ದೆಯೊಂದಿಗೆ ಮಾತನಾಡಿದಂತೆ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಮಹಿಳೆಯ ಕೊರಳಲ್ಲಿದ್ದ ಎರಡು ತೊಲ ಚಿನ್ನದ ಸರ, ಕಿವಿಯೋಲೆ ಹಾಗೂ ಮೊಬೈಲ್‌ ಫೋನ್‌ ಸಹ ತೆಗೆದುಕೊಂಡಿದ್ದ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

‘ಮಾಲಕಿಗೆ ಒಬ್ಬ ಪುತ್ರ ಹಾಗೂ ಪುತ್ರಿ  ಇದ್ದಾರೆ. ಅವರೂ  ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಾಡಿಗೆದಾರನೇ ಮನೆಯ ಮಾಲಕಿಯ ಪುತ್ರನಿಗೆ ಕರೆ ಮಾಡಿ ಮನೆಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ. ನಂತರ ಆರೋಪಿಯು ಮಹಿಳೆಯ ಅಂತ್ಯ ಸಂಸ್ಕಾರದಲ್ಲೂ ಪಾಲ್ಗೊಂಡಿದ್ದ. ತಾಯಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಅದರಿಂದಲೇ ಮೃತಪಟ್ಟಿರಬಹುದು ಎಂದು ಮಗ ಚೆನ್ನಬಸವ ಪಾಟೀಲರೂ ನಂಬಿದ್ದರು’ ಎಂದು ಮೂಲಗಳು ತಿಳಿಸಿವೆ.

ಆದರೆ, ‘ನನ್ನ ತಾಯಿ ನಿತ್ಯ ಚಿನ್ನದ ಸರ, ಕಿವಿಯೋಲೆ ತೆಗೆದಿಟ್ಟು ಮಲಗುತ್ತಿದ್ದರು. ತಾಯಿಯ ಅಂತ್ಯಸಂಸ್ಕಾರ ಮುಗಿದ ನಂತರ ಮನೆಯಲ್ಲಿ ಚಿನ್ನದ ಸರ ಹಾಗೂ ಮೊಬೈಲ್‌ ಶೋಧಿಸಿದರೂ ಸಿಕ್ಕಿಲ್ಲ. ಹೀಗಾಗಿ ತಾಯಿಯ ಸಾವಿನ ಬಗ್ಗೆ ಸಂಶಯ ಇದೆ’ ಎಂದು ಪೊಲೀಸರಿಗೆ ಚೆನ್ನಬಸವ ಪಾಟೀಲ ದೂರು ನೀಡಿದ್ದರು.

‘ಮಾಲಕಿ ಮೃತಪಟ್ಟ ದಿನ ನಾನು ಊರಲ್ಲಿ ಇರಲಿಲ್ಲ‌’ ಎಂದು ಆರೋಪಿ ಹೇಳಿದ್ದ. ಪೊಲೀಸರು ಅಕ್ಕಪಕ್ಕದ ಮನೆಗಳಲ್ಲಿರುವ ಸಿ.ಸಿ.ಟಿ.ವಿ. ದೃಶ್ಯಾವಳಿ ಪರಿಶೀಲಿಸಿದಾಗ ಸೆ.21ರಂದು ರಾತ್ರಿ ಬಾಡಿಗೆದಾರನೇ ಅವರ ಮನೆಯೊಳಗೆ ಹೋಗಿ ಬಂದಿರುವ ದೃಶ್ಯ ಸೆರೆಯಾಗಿರುವುದು ಕಂಡು ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ವಿಚಾರಿಸಿದಾಗ ವೃದ್ಧೆಯನ್ನು ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ’ ಎಂದು ಮೂಲಗಳು ಹೇಳಿವೆ.

ಈ ನಡುವೆ, ‘ಆರೋಪಿಯು ರಾಯಚೂರಿನ ಪ್ರಭಾವಿ ಮಠಾಧೀಶರ ಅಪ್ಪಟ ಶಿಷ್ಯ. ಮಠದಲ್ಲೂ ಕೆಲಸ ಮಾಡುತ್ತಿದ್ದ’ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ಪಶ್ಚಿಮ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT