ಮಸ್ಕಿ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಹೊಲಗಳಲ್ಲಿ, ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಪಟ್ಟಣದ ತಗ್ಗು ಪ್ರದೇಶಗಳಲ್ಲಿ, ಶಾಲಾ ಆವರಣದಲ್ಲಿ ನೀರು ನಿಂತಿದೆ.
ಮಸ್ಕಿ ಪಟ್ಟಣದ ಕೇಂದ್ರ ಶಾಲಾ ಆವರಣದಲ್ಲಿ ಮಳೆ ನೀರು ನಿಂತಿದ್ದರಿಂದ ಪಕ್ಕದಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೋಗಲು ಸಂಪರ್ಕ ಕಡಿತವಾಗಿದೆ. ಶಿಕ್ಷಕಿಯರು, ವಿದ್ಯಾರ್ಥಿಗಳು ರಸ್ತೆ ದಾಟಲು ಪರದಾಡಬೇಕಾಗಿದೆ. ಪಟ್ಟಣದ ಕೆಲವು ವಾರ್ಡ್‌ಗಳಲ್ಲಿ ಚರಂಡಿ ತುಂಬಿ ನೀರು ರಸ್ತೆ ಮೇಲೆ ಹರಿದಿದೆ. ಪುರಸಭೆ ನೌಕರರು ಬುಧವಾರ ಬೆಳಿಗ್ಗೆ ರಸ್ತೆ ಸ್ವಚ್ಛಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು. ತಾಲ್ಲೂಕಿನಾದ್ಯಂತ ಬುಧವಾರ ಬೆಳಿಗ್ಗೆವರೆಗೆ ಮಳೆಯಾದ ಬಗ್ಗೆ ತಿಳಿದುಬಂದಿದೆ. ಯಾವುದೇ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.