ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಉಳುವಿಗೆ ಒಗ್ಗಟ್ಟು ಪ್ರದರ್ಶನ ಅಗತ್ಯ

‘ಸಂವಿಧಾನ ಉಳುವಿಗೆ ಒಗ್ಗಟ್ಟು ಪ್ರದರ್ಶನ ಅಗತ್ಯ’
Last Updated 11 ಜೂನ್ 2022, 14:26 IST
ಅಕ್ಷರ ಗಾತ್ರ

ರಾಯಚೂರು: ದೇಶದ ಸಂವಿಧಾನ ವಿನಾಶ ಮಾಡುವ ಹುನ್ನಾರ ಆರ್‌ಎಸ್ಎಸ್ ನಡೆಸಿದ್ದು, ಅಲ್ಪಸಂಖ್ಯಾತರು, ಪರಿಶಿಷ್ಟರು ಎಲ್ಲರೂ ಒಂದಾಗಿ ಸಂವಿಧಾನ ಉಳಿಸಲು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ರಾಜರತ್ನ ಅಶೋಕರಾವ್ ಅಂಬೇಡ್ಕರ್ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ 131 ನೇ ಜಯಂತ್ಯುತ್ಸವದ ಅಂಗವಾಗಿ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಚಿಂತನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ವಿಶ್ವನಾಯಕರು. ಈ ದೇಶದಲ್ಲಿ ಡಾ.ಬಿ.ಆರ್ ಅಂಬೇಡ್ಕರ್, ಬುದ್ಧ, ಬಸವ ಅವರು ಉತ್ತಮ ಚಿಂತನೆ ಹೊಂದಿದ್ದರು. ಎಲ್ಲರನ್ನು ಸಮಾನವಾಗಿ ಕಂಡು ವಿಶ್ವಕ್ಕೆ ಮಾದರಿಯಾದ ಸಂವಿಧಾನ ರಚಿಸಿದ್ದಾರೆ. ಆದರೆ ಆರ್ ಎಸ್ಎಸ್ ಭಾರತದ ಸಂವಿಧಾನವನ್ನು ನಾಶ ಮಾಡಿ ಮನುಸ್ಮೃತಿ ಕಾನೂನು ಜಾರಿ ಮಾಡಲು ಹೊರಟಿದ್ದಾರೆ. ದೇಶದ ಆಡಳಿತ ತಮ್ಮ ಕೈಯಲ್ಲಿಟ್ಟುಕೊಂಡಿರುವ ಅವರು ಅಧಿಕಾರದಿಂದ ಇದನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ಹಿಡಿಯಲ್ಲ. ಎಲ್ಲರೂ ಜಾಗೃತರಾಗಬೇಕಿದೆ ಎಂದು ಹೇಳಿದರು.

ಚಾತುರ್ವರ್ಣ ವ್ಯವಸ್ಥೆಯನ್ನು ತೊಡೆದು ಹಾಕಿ ಕಟ್ಟ ಕಡೆಯ ವ್ಯಕ್ತಿಗೂ ಅಧಿಕಾರ, ಸ್ಥಾನಮಾನ ಸಿಗಬೇಕು ಎಂದು ನಿಟ್ಟಿನಲ್ಲಿ ಸಂವಿಧಾನ ರಚಿಸಿದ್ದಾರೆ. ಆದರೆ ಅಧಿಕಾರಕ್ಕೆ ಬರುವವರು ಸಮರ್ಪಕ ಅನುಷ್ಠಾನಗೊಳಿಸುತ್ತಿಲ್ಲ. ಮನುಸ್ಮೃತಿ ಮೂಲಕ 1200 ವರ್ಷ ಆಡಳಿತ ನಡೆಸಿದ ಬ್ರಾಹ್ಮಣರು( ಇಂದಿನ ಆರ್ ಎಸ್ಎಸ್) 70 ವರ್ಷದಲ್ಲಿ ಸಂವಿಧಾನವನ್ನು ವಿನಾಶ ಮಾಡಲು ಹೊರಟಿದ್ದಾರೆ. ಪರಿಶಿಷ್ಟರನ್ನು ಮೀಸಲಾತಿಯಿಂದ ವಂಚಿತಗೊಳಿಸಲು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ವಿದೇಶಗಳಲ್ಲಿ ಭಾರತವನ್ನು ಮಹಾತ್ಮ ಗಾಂಧಿಯ ಬದಲು ಡಾ. ಅಂಬೇಡ್ಕರ್ ಅವರ ಹೆಸರಿನಿಂದ ಗುರುತಿಸಲಾಗುತ್ತಿದೆ. ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಲಾಗಿದೆ. ದೇಶದ ಒಂದು ಜಿಲ್ಲೆಗೆ ಹೆಸರು ನಾಮಕರಣ ಮಾಡಲು ವಿರೋಧ ವ್ಯಕ್ತವಾಗುತ್ತದೆ. ಆದರೆ ಅಮೆರಿಕ ಮತ್ತಿತರೆ ಅವರ ಪುತ್ಥಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ವಾಗುತ್ತಿದೆ ಎಂದು ಹೇಳಿದರು.

ಉಪನ್ಯಾಸಕಿ ಜಯದೇವಿ ಗಾಯಕವಾಡ್ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಅಭಿವೃದ್ಧಿಯುಗದಲ್ಲಿ ಅಂಬೇಡ್ಕರ್ ಚಿಂತನೆ ಮೈಗೂಡಿಸಿಕೊಳ್ಳಬೇಕು. ಜೀವನದ ಉದ್ದಕ್ಕೂ ಅವಮಾನ ಎದುರಿಸಿದ ಅಂಬೇಡ್ಕರ್ ಅವರು ಹಿಂದು ಧರ್ಮವನ್ನು ತ್ಯಾಜಿಸಿದರು. ದಲಿತರೆಲ್ಲರೂ ಬೌದ್ಧ ಧರ್ಮ ಸ್ವೀಕರಿಸಬೇಕು ಅವರ ಮಾರ್ಗದಲ್ಲಿನಡೆ ಯಬೇಕು ಎಂದರು.

ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ ಮಹೇಶ ಮಾತನಾಡಿ, ಅಂಬೇಡ್ಕರ್ ಅವರು ಎಲ್ಲಾ ಸಮುದಾಯದ ಅಭಿವೃಧ್ಧಿಗಾಗಿ ಸಂವಿಧಾನ ರಚಿಸಿದ್ದು ಮುಸ್ಲಿಮರು, ಹಿಂದುಳಿದವರು ಅರ್ಥ ಮಾಡಿಕೊಳ್ಳಬೇಕಿದೆ. ಅಂಬೇಡ್ಕರ್ ಇಲ್ಲದಿದ್ದರೆ ಮಹಿಳೆಯರಿಗೆ ಶಿಕ್ಷಣ, ತಳ ಸಮುದಾಯಗಳಿಗೆ ಅಧಿಕಾರ, ಆಸ್ತಿ ಅಂತಸ್ತು ಸಿಗುತ್ತಿರಲಿಲ್ಲ ಎಂದು ಹೇಳಿದರು.

ಬೀದರ್ ಜಿಲ್ಲೆಯ ಅಣದೂರು ಬುದ್ಧ ವಿಹಾರದ ಪೂಜ್ಯ ವರಜ್ಯೋತಿ ಭಂತೇಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ದೇಶದ ಭದ್ರತೆ, ಸಂಸ್ಕೃತಿ ಹಾಗೂ ಏಕತೆ ಧಕ್ಕೆ ಬಂದಿದ್ದು ನಾವೆಲ್ಲರೂ ಒಂದಾಗಬೇಕು. ಸಂವಿಧಾನ, ಪ್ರಜಾಪ್ರಭುತ್ವದ ಒಳುವಿಗೆ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.

ಇದೇ ವೇಳೆ ಡಾ.ಶರಣಪ್ಪ ಚಲವಾದಿ ಅವರು ಬರೆದ ಬುದ್ಧ ಭೂಮಿ ಹಾಗೂ ದಲಿತ ಸಾಹಿತ್ಯಾವಲೋಕನ ಕೃತಿ ಬಿಡುಗಡೆ ಮಾಡಲಾಯಿತು.

ಬೌದ್ಧ ಸಾಹಿತಿ ದೇವೇಂದ್ರ ಹೆಗಡೆ ಅಧ್ಯಕ್ಷತೆಯನ್ನು ವಹಿಸಿದ್ದರು. ಹುಮನಾಬಾದ್ ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ ಕೃತಿ ಪರಿಚಯ ಮಾಡಿದರು.

ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಾ ಶ್ರೀನಿವಾಸ, ಛಲವಾದಿ ನೌಕರರ ಸಂಘದ ಅಧ್ಯಕ್ಷ ವಸಂತ ಎಂ., ಮುಖಂಡರಾದ ಕೆ.ಬಸವಂತಪ್ಪ, ಮಹಮ್ಮದ್ ಅಸಿಮುದ್ದೀನ್ ಅಕ್ತರ್, ಕೆ.ಶಾಂತಪ್ಪ, ಬಿ.ವಿರುಪಾಕ್ಷಿ, ನಾರಾಯಣ ನಾಯ್ಕ, ಈರಣ್ಣ ಹೂಗಾರ, ಬಿ.ಆರ್ ರಾಘವೇಂದ್ರಗೌಡ, ದೊಡ್ಡ ಈರಣ್ಣ ಕರ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT