ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೂತನ ಕಟ್ಟಡ ಉದ್ಘಾಟನೆಯಾಗಿ 6 ತಿಂಗಳಾದರೂ ಸ್ಥಳಾಂತರವಾಗದ ಕಸ್ತೂರಬಾ ವಸತಿ ಶಾಲೆ

ಹೊಸ ಕಟ್ಟಡ ಪಾಮನಕಲ್ಲೂರಿನಲ್ಲಿ, ಮಕ್ಕಳು ಮಾನ್ವಿಯಲ್ಲಿ
ಮಂಜುನಾಥ ಎನ್‌.ಬಳ್ಳಾರಿ
Published : 20 ಸೆಪ್ಟೆಂಬರ್ 2024, 6:38 IST
Last Updated : 20 ಸೆಪ್ಟೆಂಬರ್ 2024, 6:38 IST
ಫಾಲೋ ಮಾಡಿ
Comments

ಕವಿತಾಳ: ಮಸ್ಕಿ ತಾಲ್ಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನಿರ್ಮಿಸಿದ ಕಸ್ತೂರ ಬಾ ಗಾಂಧಿ ಬಾಲಿಕಾ ವಸತಿ ನಿಲಯ ಕಟ್ಟಡ ಉದ್ಘಾಟನೆಯಾಗಿ 6 ತಿಂಗಳು ಕಳೆದರೂ ಕಾರ್ಯಾರಂಭವಾಗಿಲ್ಲ. ಸದ್ಯ ಮಕ್ಕಳು ಮಾನ್ವಿ ಪಟ್ಟಣದ ಖಾಸಗಿ ಕಟ್ಟಡದಲ್ಲಿ ನೆಲೆಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯಿಂದ ಅಂದಾಜು ₹83 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಮಾರ್ಚ್‌ನಲ್ಲಿ ಉದ್ಘಾಟನೆಯಾಗಿದೆ. ಆದರೆ ವಸತಿ ನಿಲಯ ಸ್ಥಳಾಂತರಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ.

2009ರಲ್ಲಿ ಮಂಜೂರಾದ ವಸತಿ ನಿಲಯ ನಿರ್ಮಾಣ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ನಿರ್ಮಿತಿ ಕೇಂದ್ರದ ಮೇಲೆ ನಡೆದ ಲೋಕಾಯುಕ್ತ ದಾಳಿಯಿಂದ ಗೊಂದಲ ಉಂಟಾಗಿ ಕಟ್ಟಡ ನಿರ್ಮಾಣ ನನೆಗುದಿಗೆ ಬಿತ್ತು. ಈ ನೆಪದಲ್ಲಿ ಮಾನ್ವಿಯಲ್ಲಿ ಆರಂಭವಾದ ವಸತಿ ನಿಲಯ 15 ವರ್ಷ ಕಳೆದರೂ ಇಲ್ಲಿಗೆ ಸ್ಥಳಾಂತರವಾಗಿಲ್ಲ.

‘ಸ್ವಂತ ಕಟ್ಟಡ ನಿರ್ಮಾಣವಾದರೂ ವಸತಿ ನಿಲಯದ ಸ್ಥಳಾಂತರ ವಿಳಂಬ ಮಾಡುತ್ತಿರುವುದು ಹಲವು ಸಂಶಯ ಮೂಡಿಸಿದೆ. ಬಾಡಿಗೆ ಕಟ್ಟಡದಲ್ಲಿ ಮುಂದುವರಿಸುವ ಮೂಲಕ ಅಧಿಕಾರಿಗಳು ಸರ್ಕಾರದ ಹಣ ದುರುಪಯೋಗ ಮಾಡುತ್ತಿದ್ದಾರೆ’ ಎಂದು ಗ್ರಾಮದ ಲಕ್ಷ್ಮಣ ಚೌಡ್ಲಿ ಆರೋಪಿಸಿದರು.

‘ಮಾನ್ವಿಯ ವಸತಿನಿಯಲದಲ್ಲಿ 6ರಿಂದ 10ನೇ ತರಗತಿಯ 80 ಮಕ್ಕಳು ಪ್ರವೇಶ ಪಡೆದಿದ್ದಾರೆ. ಹೊಸ ಕಟ್ಟಡಕ್ಕೆ ಕಾಂಪೌಂಡ್‌ ಇಲ್ಲದ ಕಾರಣ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸ್ಥಳಾಂತರ ಮಾಡಿಲ್ಲ. ಈಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಮಸ್ಕಿ ಶಾಸಕರು ಸ್ಥಳಾಂತರಕ್ಕೆ ಸೂಚಿಸಿದ್ದಾರೆ ಮತ್ತು ಮಕ್ಕಳ ಸುರಕ್ಷತೆಗೆ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಸೂಚಿಸಿದ್ದು, ದಸರಾ ರಜೆ ಕಳೆದ ನಂತರ ವಸತಿ ನಿಲಯವನ್ನು ಹೊಸ ಕಟ್ಟಡದಲ್ಲಿ ಆರಂಭಿಸಲಾಗುವುದು. ಮಾನ್ವಿಯಲ್ಲಿರುವ ಸಿಬ್ಬಂದಿ ಅಲ್ಲಿಗೆ ಬರುತ್ತಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನಿ ಹೇಳಿದರು.

‘6, 7ನೇ ತರಗತಿ ಮಕ್ಕಳಿಗೆ ವಸತಿ ನಿಲಯದಲ್ಲಿ ಪಾಠ ಮಾಡಲು ವ್ಯವಸ್ಥೆ ಮತ್ತು 8ರಿಂದ 10ನೇ ತರಗತಿ ಮಕ್ಕಳಿಗೆ ಸರ್ಕಾರಿ ಪ್ರೌಢಶಾಲೆಗೆ ಹೋಗಲು ಅವಕಾಶ ಕಲ್ಪಿಸಲಾಗುವುದು. ತಾಲ್ಲೂಕಿನ ಯಾವುದೇ ಭಾಗದ ಮಕ್ಕಳು ಇಲ್ಲಿ ಪ್ರವೇಶ ಪಡೆಯಲು ಅವಕಾಶವಿದೆ. ಇಲ್ಲಿಗೆ ಬರಲು ನಿರಾಕರಿಸಿದ ಮಕ್ಕಳನ್ನು ಮಾನ್ವಿಯ ಬೇರೆ ವಸತಿ ನಿಲಯಕ್ಕೆ ಸೇರಿಸಲಾಗುವುದು’ ಎಂದು ಬಿಇಒ ತಿಳಿಸಿದರು.

ರಮೇಶ ಗಂಟ್ಲ
ರಮೇಶ ಗಂಟ್ಲ
ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿದ ಕಟ್ಟಡ ಪಾಳು ಬೀಳುವಂತಾಗಿದೆ. ಕೂಡಲೇ ವಸತಿ ನಿಲಯ ಆರಂಭಿಸಬೇಕು.
ರಮೇಶ ಗಂಟ್ಲ ಕರವೇ ಮುಖಂಡ ಪಾಮನಕಲ್ಲೂರು
ಚಂದ್ರಶೇಖರ ದೊಡ್ಮನಿ
ಚಂದ್ರಶೇಖರ ದೊಡ್ಮನಿ
ಕಟ್ಟಡದ ಸ್ವಚ್ಛತೆ ಸೋಲಾರ್‌ ವ್ಯವಸ್ಥೆ ಸೇರಿದಂತೆ ಸಣ್ಣಪುಟ್ಟ ದುರಸ್ತಿಗೆ ಸೂಚಿಸಲಾಗಿದ್ದು ದಸರಾ ರಜೆ ಕಳೆದ ಮೇಲೆ ಸ್ಥಳಾಂತರಿಸಲಾಗುವುದು.
ಚಂದ್ರಶೇಖರ ದೊಡ್ಮನಿ ಬಿಇಒ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT