ಬುಧವಾರ, ಸೆಪ್ಟೆಂಬರ್ 29, 2021
20 °C

ರಾಯಚೂರು: ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಯಚೂರು: ಮಾನ್ವಿ ಪಟ್ಟಣದ ಶಾಸಕರ ಭವನದ ಮುಂಭಾಗದ ಸಾರ್ವಜನಿಕ ಉದ್ಯಾನ ಅತಿಕ್ರಮಣ ಮಾಡಿಕೊಂಡು ಎಐಸಿಸಿ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಬೋಸರಾಜು ಅವರು ಕಂಪೌಂಡ್ ಕಟ್ಟುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಸಹಕಾರ ನೀಡಿ ಕರ್ತವ್ಯಲೋಪ ಎಸಗಿದ ಪುರಸಭೆ ಮುಖ್ಯ ಅಧಿಕಾರಿ ಜಗದೀಶ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾಗಿ –ಲೆನಿನ್ ವಾದಿ) ಹಾಗೂ ಉದ್ಯಾನ ಉಳಿಸಿ ಹೋರಾಟ ಸಮಿತಿಯ ಪದಾಧಿಕಾರಿಗಳು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಮಾನ್ವಿ ಪಟ್ಟಣದ ಸರ್ವೆ ನಂಬರ್ 467/ಅ ರಲ್ಲಿ 6 ಎಕರೆ 30 ಗುಂಟೆ ಜಾಗದಲ್ಲಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಕಾಲನಿಯಲ್ಲಿ ಮೀಸಲಿಟ್ಟ ಸಾರ್ವಜನಿಕ ಉದ್ಯಾನವನ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಕಾಂಪೌಂಡ್ ಹಾಗೂ ಮನೆ  ನಿರ್ಮಾಣ ಮಾಡುವುದನ್ನು ತಡೆಯಲು ಕಳೆದ ಜುಲೈ 14ರಂದು ಪುರಸಭೆ ಮುಖ್ಯಾಧಿಕಾರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಜುಲೈ 20ರಂದು ತಹಶೀಲ್ದಾರರಿಗೂ ಮನವಿ ಸಲ್ಲಿಸಲಾಗಿದೆ. ಸ್ಪಂದಿಸದ ಕಾರಣ ಜುಲೈ 26ರಿಂದ  ಅನಿರ್ಧಿಷ್ಟಾವಧಿ ಧರಣಿ ಮಾಡುತ್ತಿದ್ದೇವೆ. ಸರ್ಕಾರಿ ಜಾಗ ರಕ್ಷಣೆ ಮಾಡಬೇಕಿರುವ ಪುರಸಭೆ ಮುಖ್ಯ ಅಧಿಕಾರಿ ಎನ್.ಎಸ್. ಬೋಸರಾಜು ಅವರಿಗೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಿದ್ದಾರೆ ಎಂದು ದೂರಿದರು.

ಈ ಹಿಂದೆ ಹೈಕೋರ್ಟ್ ಹಾಗೂ ಜಿಲ್ಲಾಧಿಕಾರಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರೂ ಧಿಕ್ಕರಿಸಿದ್ದಾರೆ. ಎನ್ ಎಸ್ ಬೋಸರಾಜು ಅವರು ನಿರ್ಭಂಧಕಾಜ್ಞೆ ದಾವೆಯನ್ನು ಹಾಕಿದ್ದು ಅವರು ಹೇಳುವಂತೆ ಪಂಪಾ ಕೋ ಆಪರಟಿವ್ ಹೌಸಿಂಗ್ ಸೋಸೈಟಿಯವರಿಂದ ಪ್ಲಾಟ್ ನಂಬರ್ 58 ಉದ್ದಳತೆ 60*90 (5400 ಚದರ ಅಡಿ) ಸ್ಥಳವನ್ನು ಖರೀದಿಸಿದ್ದಾರೆ. ಆದರೆ ಅವರು ಕಾಂಪೌಂಡ್ ಗೋಡೆ ಕಟ್ಟುತ್ತಿರುವುದು ಸಾರ್ವಜನಿಕ ಉದ್ಯಾನದ ಜಾಗದಲ್ಲಿ ಎಂದು ಆರೋಪಿಸಿದರು.

ಕರ್ನಾಟಕ ಹೌಂಸಿಗ್ ಬೋರ್ಡ್ ನವರು ನಿರ್ಮಾಣ ಮಾಡಿದ ಕಾಲೋನಿಯಲ್ಲಿ ಕೇವಲ 40 ಮತ್ತು 10 ಒಟ್ಟು 50 ನಿವೇಶನ ಹೊಂದಿದೆ. ಎನ್.ಎಸ್. ಬೋಸರಾಜು ಅವರು ಅಧಿಕಾರ, ಹಣಬಲ, ದೌರ್ಜನ್ಯದಿಂದ ಸರ್ಕಾರದ ಆಸ್ತಿ ಕಬಳಿಕೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಉದ್ಯಾನವನ ಹೋರಾಟ ಸಮಿತಿಯ ಸಂಚಾಲಕ ಕೆ.ನಾಗಲಿಂಗಸ್ವಾಮಿ, ನರಸಪ್ಪ ಕೂಕೂರ, ಯಲ್ಲಪ್ಪ ಉಟಕನೂರು, ಹುಚ್ಚಪ್ಪ, ಪ್ರಕಾಶ , ಹನುಮಂತಪ್ಪ ಸೀಕಲ್, ಬಸವರಾಜ ಬಾಗಲವಾಡ, ಕಾಳಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.